ಒಳಮೀಸಲಾತಿಯಲ್ಲಿ ಎಡಗೈನವರಿಂದ ದ್ರೋಹ: ಆರ್.ಬಾಬು

| Published : Aug 24 2025, 02:00 AM IST

ಸಾರಾಂಶ

ಪರಿಶಿಷ್ಟ ಜಾತಿಗೆ ಸೇರಿದ ಪೌರ ಕರ್ಮಿಕ ಸಫಾಯಿ ಕರ್ಮಚಾರಿ ಮ್ಯಾನ್ಯೂಯೆಲ್ ಸ್ಕ್ಯಾವೆಂಜರ್ ಹರಿದ ಚಪ್ಪಲಿ ಹೊಲಿದು ಜೀವನ ಸಾಗಿಸುತ್ತಿರುವ ಅರುಂಧತಿಯಾರ್ ಸಮಾಜ ಶತಮಾನಗಳಿಂದಲೂ ಸ್ವಚ್ಛತಾ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ ಬಲಿಷ್ಠ ಸಮುದಾಯದವರೇ ಇಂದಿಗೂ ಸರ್ಕಾರದ ಎಲ್ಲಾ ಸೌಲಭ್ಯ ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಒಳಮೀಸಲಾತಿ ವರದಿಯಲ್ಲಿ ೧೦೧ ಪರಿಶಿಷ್ಟ ಜಾತಿಗಳ ಪೈಕಿ ಅರುಂಧತಿಯಾರ್ ಉಪಜಾತಿಗಳ ಮೀಸಲಾತಿಗೆ ಪ್ರತ್ಯೇಕವಾಗಿ ೫೯ ಜಾತಿಗಳನ್ನು ಸೇರಿಸಿ ಎ ವರ್ಗಕ್ಕೆ ಶೇ.೧ರಷ್ಟು ಒಳಮೀಸಲಾತಿ ನೀಡಲು ಶಿಫಾರಸು ಮಾಡಿರುವ ವರದಿಯನ್ನು ಅಂತಿಮಗೊಳಿಸಿ ಸಾಮಾಜಿಕ ನ್ಯಾಯದಡಿ ಪ್ರತ್ಯೇಕ ಮೀಸಲಾತಿ ಕಲ್ಪಿಸುವಂತೆ ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾ ರಾಜ್ಯ ಸಲಹೆಗಾರ ಆರ್.ಬಾಬು ಹೇಳಿದರು.

ಪರಿಶಿಷ್ಟ ಜಾತಿಗೆ ಸೇರಿದ ಪೌರ ಕರ್ಮಿಕ ಸಫಾಯಿ ಕರ್ಮಚಾರಿ ಮ್ಯಾನ್ಯೂಯೆಲ್ ಸ್ಕ್ಯಾವೆಂಜರ್ ಹರಿದ ಚಪ್ಪಲಿ ಹೊಲಿದು ಜೀವನ ಸಾಗಿಸುತ್ತಿರುವ ಅರುಂಧತಿಯಾರ್ ಸಮಾಜ ಶತಮಾನಗಳಿಂದಲೂ ಸ್ವಚ್ಛತಾ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದೆ. ಪರಿಶಿಷ್ಟ ಜಾತಿಗೆ ಸೇರಿದ ಬಲಿಷ್ಠ ಸಮುದಾಯದವರೇ ಇಂದಿಗೂ ಸರ್ಕಾರದ ಎಲ್ಲಾ ಸೌಲಭ್ಯ ಪಡೆಯುತ್ತಿದ್ದಾರೆ. ಸ್ವಚ್ಛ ಭಾರತದ ಪೌರ ಕಾರ್ಮಿಕರಿಗೆ ಇದರಿಂದ ವಂಚಿತರಾಗಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಪೌರ ಕಾರ್ಮಿಕ, ಸಫಾಯಿ ಕರ್ಮಚಾರಿ, ಮ್ಯಾನ್ಯುಯಲ್ ಸ್ಕ್ಯಾವೆಂಜರ್‌ಗಳಾದ ನಾವುಗಳೆಲ್ಲ ಈಗಲೂ ರಾಜಕೀಯ, ಶಿಕ್ಷಣ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಅವಕಾಶ ವಂಚಿತರಾಗಿ ಬದುಕು ಸಾಗಿಸುತ್ತಿದ್ದೇವೆ. ಆದ್ದರಿಂದಲೇ ೨೦೦೬ರಲ್ಲಿ ಪ್ರತ್ಯೇಕ ಒಳಮೀಸಲಾತಿಗಾಗಿ ತಮಿಳುನಾಡು ರಾಜ್ಯದ ಮಾದರಿಯಲ್ಲಿ ಅರುಂಧತಿಯಾರ್ ಸಮುದಾಯಕ್ಕೆ ಪ್ರತ್ಯೇಕ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿದರು.

೨೦೦೬ರಲ್ಲಿ ನಡೆದ ಸಮೀಕ್ಷೆಯಲ್ಲಿ ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗ ಹಾಗೂ ೨೦೨೫ರ ನಾಗಮೋಹನ್‌ ದಾಸ್ ಜಾತಿಗಣತಿ ಸಮೀಕ್ಷೆವರೆಗೆ ಅರುಂಧತಿಯಾರ್ ಉಪಜಾತಿಗೆ ಸೇರಿದ್ದೆವೆಂದು ರಾಜ್ಯಾದ್ಯಂತ ಬರೆಸಿ ಸಂಘಟಿಸಿಕೊಂಡು ಪ್ರತ್ಯೇಕ ಒಳಮೀಸಲಾತಿಗೆ ಹೋರಾಟ ನಡೆಸಿಕೊಂಡು ಬಂದಿರುವುದಾಗಿ ಹೇಳಿದರು.

ನಾಗಮೋಹನ್‌ದಾಸ್ ಅರುಂಧತಿಯಾರ್ ಸಮುದಯದ ಸ್ಥಿತಿಗಳನ್ನು ಮನಗಂಡು ೫೯ ಉಪಜಾತಿಗಳನ್ನು ಒಟ್ಟುಗೂಡಿಸಿ ಎ ವರ್ಗಕ್ಕೆ ಶೇ.೧ರಷ್ಟು ಮೀಸಲಾತಿ ನೀಡಲು ಸರ್ಕಾರಕ್ಕೆ ವರದಿ ನೀಡಿರುವುದು ಹರ್ಷ ಮೂಡಿಸಿದೆ. ಆದರೆ, ಆ.೧೯ರಂದು ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿಗಾಗಿ ನಡೆದ ಚರ್ಚೆಯಲ್ಲಿ ಎಬಿಸಿ ಎಂದು ಮೂರು ಗುಂಪುಗಲಾಗಿ ಪರಿಗಣಿಸಿರುವುದನ್ನು ಸಂಘಟನೆ ವಿರೋಧಿಸುತ್ತದೆ ಎಂದರು.

ಅರುಂಧತಿಯಾರ್ ಸಮುದಾಯ ತೀರಾ ದುರ್ಬಲ ವರ್ಗವಾಗಿದ್ದು, ಎಡಗೈನಂತಹ ಬಲಿಷ್ಠ ಸಮುದಾಯದವರ ಜೊತೆ ಹೊಡೆದಾಡಿ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಕಷ್ಟವಾಗಿದೆ. ಅದರಂತೆ ನಾಗಮೋಹನ್‌ದಾಸ್ ವರದಿ ಪ್ರಕಾರ ೫೯ ಜಾತಿಗಳ ಪೈಕಿ ಶೇ.೧ರಷ್ಟು ಮೀಸಲಾತಿ ನೀಡಲು ನೀಡಿದ ವರದಿಯನ್ನೇ ಅಂತಿಮಗೊಳಿಸಿ ಸಮುದಾಯಕ್ಕಕೆ ಪ್ರತ್ಯೇಕ ಒಳಮೀಸಲಾತಿ ಕಲ್ಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಗೋಷ್ಠಿಯಲ್ಲಿ ರವಿ, ಅವಿನಾಶಿ, ವಿಜಜಯ್, ಸಂತೋಷ್, ಪಳನಿ ಇದ್ದರು.