ಕಾಂಗ್ರೆಸ್‌ ಸರ್ಕಾರದಿಂದ ರಾಜ್ಯದ ಜನತೆಗೆ ದ್ರೋಹ

| Published : Jul 07 2024, 01:23 AM IST

ಸಾರಾಂಶ

ಕಾಂಗ್ರೆಸ್ ಪಕ್ಷವು ಎಸ್‌ಸಿ ಎಸ್‌ಟಿ ಸಮುದಾಯಗಳಿಗೆ ನೀಡಿದ ಅನುದಾನ ಕಿತ್ತುಕೊಳ್ಳುವ ಮೂಲಕ ರಾಜ್ಯದ ಹಿಂದುಳಿದ ವರ್ಗಗಳ ಜನತಗೆ ದ್ರೋಹ ಮಾಡಿದೆ

ಲಕ್ಷ್ಮೇಶ್ವರ: ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ದ್ರೋಹ ಮಾಡಿದೆ. ಸ್ವಾರ್ಥ ರಾಜಕೀಯಕ್ಕಾಗಿ, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ನೀಚ ರಾಜಕೀಯ ಮಾಡುತ್ತಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ನೂತನ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಪಟ್ಟಣದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಶನಿವಾರ ನಡೆದ ಅಭಿನಂದನಾ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷವು ಎಸ್‌ಸಿ ಎಸ್‌ಟಿ ಸಮುದಾಯಗಳಿಗೆ ನೀಡಿದ ಅನುದಾನ ಕಿತ್ತುಕೊಳ್ಳುವ ಮೂಲಕ ರಾಜ್ಯದ ಹಿಂದುಳಿದ ವರ್ಗಗಳ ಜನತಗೆ ದ್ರೋಹ ಮಾಡಿದೆ. ಗ್ಯಾರಂಟಿ ಹೆಸರಲ್ಲಿ ರಾಜ್ಯದ ಜನತೆಗೆ ದ್ರೋಹ ಮಾಡುವ ಮೂಲಕ ಅಭಿವೃದ್ಧಿ ಕಡೆಗಣಿಸಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಮುಂಬರುವ ದಿನಗಳಲ್ಲಿ ನಡೆಯುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂಲೆಗುಂಪಾಗುವುದು ನಿಶ್ಚಿತ ಎಂದು ಹೇಳಿದರು.

ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿನ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಕಾರ್ಯ ಮಾಡುತ್ತೇನೆ, ಕಾರವಾರ ಇಳಕಲ್ಲ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿ ಮೇಲ್ದರ್ಜೆ ರಸ್ತೆಯನ್ನಾಗಿ ಮಾಡುವಂತೆ ಮೊನ್ನೆ ಕೇಂದ್ರದ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ, ಗದಗ-ಲಕ್ಷ್ಮೇಶ್ವರ ಮಾರ್ಗವಾಗಿ ಯಲುವಿಗಿಗೆ ಸಂಪರ್ಕ ಕಲ್ಪಿಸುವ ರೇಲ್ವೆ ಯೋಜನೆಗೆ ಶೀಘ್ರದಲ್ಲಿ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡುವ ಮೂಲಕ ಲಕ್ಷ್ಮೇಶ್ವರ ಪಟ್ಟಣವನ್ನು ಅಭಿವೃದ್ಧಿಪಡಿಸುವ ಯೋಜನೆ ನಮ್ಮ ಮುಂದೆ ಇದೆ, ಲಕ್ಷ್ಮೇಶ್ವರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ದೊರೆಯವಂತಾಗಬೇಕು ಎನ್ನುವುದು ನಮ್ಮ ಬಯಕೆಯಾಗಿದ್ದು, ಆದ್ದರಿಂದ ಈಗ ಇರುವ ಮೇವುಂಡಿ ಜಾಕ್‌ವೆಲ್‌ನ ಹತ್ತಿರ ನಿಲ್ಲುವ ಪ್ರಮಾಣ ಕಡಿಮೆಯಾಗಿದ್ದು, ವರ್ಷವಿಡಿ ನೀರು ನಿಲ್ಲುವಂತೆ ಪ್ರದೇಶವನ್ನು ಗುರುತಿಸಿ ಅಲ್ಲಿಂದ ನೀರನ್ನು ಲಕ್ಷ್ಮೇಶ್ವರ ಪಟ್ಟಣಕ್ಕೆ ಪೂರೈಸುವ ಯೋಜನೆ ತಯಾರಿಸಿ ಕಾರ್ಯ ಯೋಜನೆ ಸಿದ್ಧಗೊಳಿಸುವ ಗುರಿ ಇದ್ದು ಅದನ್ನು ಶೀಘ್ರದಲ್ಲಿ ಮಾಡುವ ಯೋಜನೆ ನಮ್ಮದಾಗಿದೆ.

ಶಿರಹಟ್ಟಿ ಮತಕ್ಷೇತ್ರದ ನನ್ನ ಒಡನಾಟ ಬಹು ಕಾಲದಿಂದಲೂ ಇದ್ದು, ಈ ಕ್ಷೇತ್ರದ ಜನರ ನಾಡಿಮಿಡಿತವನ್ನು ನಾನು ಚೆನ್ನಾಗಿ ಬಲ್ಲವನಾಗಿದ್ದೇನೆ, ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಹೋರಾಡುವ ಮೂಲಕ ಪಕ್ಷಕ್ಕೆ ಬಲ ತುಂಬುವ ಕಾರ್ಯ ಮಾಡುವುದು ಅಗತ್ಯವಾಗಿದೆ. ಮತದಾರರ ಶಕ್ತಿಯಿಂದ ನಾನು ಈ ಕ್ಷೇತ್ರದ ಸಂಸದನಾಗಿದ್ದು ಮತದಾರರ ಶಕ್ತಿಯನ್ನು ನನ್ನ ಸ್ವಂತಕ್ಕೆ ಬಳಸಿಕೊಳ್ಳುವ ಕಾರ್ಯ ನಾನು ಮಾಡುವುದಿಲ್ಲ, ಮತದಾರರು ನನ್ನನ್ನು ಗೆಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು 3ನೇ ಬಾರಿ ಪ್ರಧಾನಿಯಾಗುವಂತೆ ಮಾಡಿದ್ದಕ್ಕಾಗಿ ತಮಗೆ ಹೃತ್ಪೂರ್ವಕ ಅಭಿನಂದನೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿದ್ದು ನಮಗೆಲ್ಲ ಬಲ ಬಂದಂತಾಗಿದೆ. ಶಿರಹಟ್ಟಿ ಮತಕ್ಷೇತ್ರದಲ್ಲಿ ಪಕ್ಷಕ್ಕೆ ಅಲ್ಪಮಟ್ಟಿನ ಹಿನ್ನಡೆಯು ಮುಜುಗರ ತರುವ ಸಂಗತಿಯಾಗಿದ್ದು, ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಪಕ್ಷದ ಕಾರ್ಯಕರ್ತರೊಂದಿಗೆ ಜಯ ಸಾಧಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದ ಅವರು, ಶಿರಹಟ್ಟಿ ಮತಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗೆ ನೂತನ ಸಂಸದರು ಹೆಚ್ಚಿನ ಪ್ರಮಾಣದಲ್ಲಿ ನಮಗೆ ಸಹಾಯ ಸಹಕಾರ ನೀಡುತ್ತಾರೆ ಎಂದು ಹೇಳಿದರು.

ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್‌ ಮಾತನಾಡಿ, ಬಿಜೆಪಿ ದೇಶದ ಭದ್ರತೆಗೆ ಒತ್ತು ನೀಡುವ ಜತೆಯಲ್ಲಿ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕಿನ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ಹೇಳಿದರು.

ಸಭೆಯಲ್ಲಿ ಶಿವಪ್ರಕಾಶ ಮಹಾಜನಶೆಟ್ಟರ್‌, ನಾಗರಾಜ ಕುಲಕರ್ಣಿ, ಸಣ್ಣಿರಪ್ಪ ಹಳ್ಳೆಪ್ಪನವರ, ರಾಜು ಕುರಡಗಿ ಮಾತನಾಡಿದರು.

ಸಭೆಯಲ್ಲಿ ಡಾ. ಭೀಮಸಿಂಗ ರಾಠೋಡ, ಎಂ.ಎಸ್. ದೊಡ್ಡಗೌಡರ, ಬಸವೇಶ ಮಹಾಂತಶೆಟ್ಟರ, ಪ್ರವೀಣ ಬಾಳಿಕಾಯಿ, ಬಸವರಾಜ ಪಲ್ಲೇದ, ಸುಭಾಷ ಬಟಗುರ್ಕಿ, ಸೋಮಣ್ಣ ಡಾಣಗಲ್ಲ, ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ಹೇಮಗಿರೀಶ ಹಾವಿನಾಳ, ಪೂರ್ಣಾಜಿ ಕರಾಟೆ, ಜಾನು ಲಮಾಣಿ, ಅಶ್ವಿನಿ ಅಂಕಲಕೋಟಿ, ವಿಜಯ ಹತ್ತಿಕಾಳ, ಫಕ್ಕಿರೇಶ ರಟ್ಟಿಹಳ್ಳಿ, ನವೀನ ಬೆಳ್ಳಟ್ಟಿ, ಸಿದ್ದು ಮೊರಬದ, ಓಂಪ್ರಕಾಶ ಜೈನ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಅಭಿನಂದನಾ ಸಭೆಯಲ್ಲಿ ಭಾಗವಹಿಸಿದ್ದರು. ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಸ್ವಾಗತಿಸಿದರು. ಅನಿಲ ಮುಳಗುಂದ ಕಾರ್ಯಕ್ರಮ ನಿರ್ವಹಿಸಿದರು.