ಸಾರಾಂಶ
ಬೆಟ್ಟಗೇರಿ ಭಗವತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ಪ್ರಯುಕ್ತ 25ರಂದು ಪೂರ್ವಾಹ್ನ 11ಕ್ಕೆ ವಿಷ್ಣುಮೂರ್ತಿಯ ಕೆಂಡಸೇವೆ ಹಾಗೂ ಗುಳಿಗ ರಾಜನ ಕೋಲ, ಮಧ್ಯಾಹ್ನ 12.30ರಿಂದ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಬೆಟ್ಟಗೇರಿ ಭಗವತಿ ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದು ದೇಗುಲ ಸಂಪೂರ್ಣ ಜೀರ್ಣೋದ್ಧಾರಗೊಂಡಿದೆ. ಜಿಲ್ಲಾಡಳಿತ, ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ದೇವಸ್ಥಾನಕ್ಕೆ ಕಾಂಕ್ರಿಟ್ ರಸ್ತೆ, ಒಳ ಚರಂಡಿಗಳು, ವಿದ್ಯುತ್ ಸಂಪರ್ಕ, ದೇವಸ್ಥಾನದಲ್ಲಿ ಒಳಾಂಗಣ ಬಾವಿ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.ಬೆಟ್ಟಗೇರಿ ಭಗವತಿ ದೇವಸ್ಥಾನ ಪಟ್ಟಣದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಇದ್ದು ದುರ್ಗಮ ಹಾದಿಯಲ್ಲಿ ಬೆಟ್ಟದ ಮೇಲೆ ಸುಮಾರು 500 ವರ್ಷಗಳ ಇತಿಹಾಸವಿರುವ ದೇವಸ್ಥಾನವನ್ನು ತಲಪುವುದು ಕಷ್ಟ ಸಾಧ್ಯವಾಗಿತ್ತು. ಆದರೆ ಸರ್ಕಾರದ ಅನುದಾನದಿಂದ ಅರ್ಧ ಕಿಲೋಮೀಟರ್ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದ್ದು ಇದೀಗ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಮುತುವರ್ಜಿಯಿಂದ ದೇವಸ್ಥಾನದ ಪಾಳು ಬಿದ್ದ ಬಾವಿ ಶುಚಿಗೊಳಿಸಿ ಮೋಟಾರ್ ಅಳವಡಿಸಲಾಗಿದೆ.
ಸೆಸ್ಕ್ ಇಲಾಖೆಯಿಂದ ಆರು ವಿದ್ಯುತ್ ಕಂಬಗಳು ಹಾಗೂ ಸಾಮಗ್ರಿಗಳನ್ನು ಇಲಾಖೆ ಭರಿಸಿದ್ದು ಉಳಿದ ವಿದ್ಯುತ್ ಕಂಬಗಳನ್ನು ದಾನಿಗಳ ಸಹಕಾರದಿಂದ ಹಾಕಿಸಿ ವಿದ್ಯುತ್ ಸಂಪರ್ಕ ನೀಡಲಾಗಿದೆ.ದೇವಸ್ಥಾನದ ಒಳಾಂಗಣಕ್ಕೆ 3,70, 800 ರು. ವೆಚ್ಚದಲ್ಲಿ ಚಪ್ಪಡಿ ಕಲ್ಲು, ಹೊರಾಂಗಣಕ್ಕೆ 2,12, 980 ರು. ವೆಚ್ಚದಲ್ಲಿ ಇಂಟರ್ ಲಾಕ್, 1,38, 000 ರು. ವೆಚ್ಚದಲ್ಲಿ ನೂತನ ತೆರೆದ ಬಾವಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ನಡೆಸಲಾಗಿದೆ.
ಸಮುದಾಯ ಭವನ, ಹೊರಾಂಗಣ ತಡೆಗೋಡೆ, ಅರ್ಚಕರಿಗೆ ನಿವಾಸ, ಬಾಕಿ ಇರುವ ಕಾಂಕ್ರಿಟ್ ರಸ್ತೆ ನಿರ್ಮಾಣ, ಕಾಂಕ್ರಿಟ್ ಚರಂಡಿ ನಿರ್ಮಾಣ, ದೇವಸ್ಥಾನಕ್ಕೆ ಉದ್ಯಾನವನ, ವಿಷ್ಣುಮೂರ್ತಿ ದೇವರ ಗುಡಿಯ ಪುನರ್ ನಿರ್ಮಾಣ, ಶೌಚಾಲಯ ನಿರ್ಮಾಣ, ಉಗ್ರಾಣದ ನಿರ್ಮಾಣ ಸೇರಿದಂತೆ ಹಲವಾರು ಕೆಲಸ ಕಾರ್ಯಗಳು ನಡೆಯಬೇಕಿವೆ.ವಾರ್ಷಿಕ ಉತ್ಸವ:
ಮಾ.24 ಹಾಗೂ 25ರಂದು ದೇವರ ವಾರ್ಷಿಕ ಉತ್ಸವ ನಡೆಯಲಿದೆ. 24ರಂದು ಪಟ್ಟಣಿ, ಹಗಲು ವಿಶೇಷ ಪೂಜಾ ಕೈಂಕರ್ಯಗಳು, ಮಧ್ಯಾಹ್ನ1 ಗಂಟೆಗೆ ಕಟ್ರತಂಡ ಕುಟುಂಬದ ಭಂಡಾರದ ಮನೆಯಿಂದ ಭಂಡಾರ ಹೊರಡುವುದು, 2 ಗಂಟೆಗೆ ಶಾಸ್ತಾವು ತೆರೆ , ಸಂಜೆ 5ಕ್ಕೆ ಅಂಬಲದಲ್ಲಿ ಭಗವತಿ ಅಯ್ಯಪ್ಪ ತೆರೆ, ಆರು ಗಂಟೆಗೆ ದೇವರು ಬನಕ್ಕೆ ಹೋಗುವುದು ರಾತ್ರಿ 7.30ಕ್ಕೆ ಚೌಂಡಿ ತೋತ ಹಾಗೂ 9ಕ್ಕೆ ಮೇಲೇರಿ ಕುಂಟೆಗೆ ಅಗ್ನಿಸ್ಪರ್ಶ, ಮುಂಜಾನೆ ಮಂದಣ್ಣ ಮೂರ್ತಿ, ಅಂಜಿ ಕುಟ್ಟಿ ಮೂರ್ತಿ ಕರಿಬಾಳ ಹಾಗೂ ನುಚ್ಚಟ್ಟೆ ತೆರೆಗಳು ನಡೆಯಲಿವೆ.25ರಂದು ಪೂರ್ವಾಹ್ನ 11ಕ್ಕೆ ವಿಷ್ಣುಮೂರ್ತಿಯ ಕೆಂಡಸೇವೆ ಹಾಗೂ ಗುಳಿಗ ರಾಜನ ಕೋಲ, ಮಧ್ಯಾಹ್ನ 12.30ರಿಂದ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪೌಡಂಡ ಡಾಲಿ ಭೀಮಯ್ಯ, ಉಪಾಧ್ಯಕ್ಷ ಕಟ್ಟ್ರತಂಡ ವಿಜಯ ಚಿಣ್ಣಪ್ಪ, ಕಾರ್ಯದರ್ಶಿ ಚಳಿಯಂಡ ಕಟ್ಟಿ, ಖಜಾಂಚಿ ಚಳಿಯಂಡ ಪುಟ್ಟ ಯತೀಶ್, ಗೌರವ ಸಲಹೆಗಾರರಾದ ನೆಯ್ಯಣಿರ ಹೇಮಕುಮಾರ್ ಹಾಗೂ ಸಮಿತಿ ಸದಸ್ಯರು ವಿನಂತಿಸಿದ್ದಾರೆ.