ಬೆಟ್ಟಳ್ಳಿ ಮಾರಮ್ಮ ಜಾತ್ರೇಲಿ ಅಗ್ನಿಕುಂಡೋತ್ಸವ ಸಂಭ್ರಮ

| Published : Mar 28 2025, 12:34 AM IST

ಸಾರಾಂಶ

ಹನೂರು ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವ ಅಗ್ನಿಕುಂಡೋತ್ಸವ ಸಂದರ್ಭದಲ್ಲಿ ನೆರದಿದ್ದ ಜನಸ್ತೋಮ.

ಕನ್ನಡಪ್ರಭ ವಾರ್ತೆ ಹನೂರು ಪಟ್ಟಣದ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಪ್ರಯುಕ್ತ ಕೊನೆಯ ದಿನ ಅಗ್ನಿಕುಂಡೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ಜರುಗಿತು.

ಪಟ್ಟಣದ ಗ್ರಾಮದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ನಾಲ್ಕು ದಿನಗಳಿಂದ ನಡೆದ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜಾಗರ ದೇವಾಲಯಕ್ಕೆ ಸಮರ್ಪಣೆ ಮತ್ತು ಮೊದಲ ಬಾರಿ ರಥೋತ್ಸವ, ತಂಪು ಜ್ಯೋತಿ ಹಾಗೂ ಬಾಯಿ ಬೀಗ ದೊಡ್ಡ ಬಾಯಿ ಬೀಗ ಹಾಗೂ ಹಲವು ವಿಶೇಷ ಪೂಜಾ ಕಾರ್ಯಕ್ರಮಗಳ ಜೊತೆ ಮೂರು ದಿನಗಳ ನಡೆದ ಪೂಜೆಯ ಜೊತೆ ನಾಲ್ಕನೇ ದಿನ ಅಗ್ನಿಕುಂಡೋತ್ಸವ ಸಂಭ್ರಮ ಸಡಗರದೊಂದಿಗೆ ನಡೆಯಿತು.

ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಾಲಯದ ಪ್ರಧಾನ ಅರ್ಚಕರು ರಾಜೋಜಿ ರಾವ್ ಬೆಳಗಿನ ಜಾವ ಗುರುವಾರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಜ್ಜನ ಬಾವಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ಬರುವ ವೇಳೆ ಹರಕೆ ಹೊತ್ತು ಭಕ್ತರು ದೇವಿ ಬರುವ ದಾರಿಯಲ್ಲಿ ಮಲಗಿ ಇಷ್ಟಾರ್ಥ ಸಿದ್ಧಿಸುವಂತೆ ಮತ್ತು ರೋಗರು ದಿನಗಳು ಬರದಂತೆ ತಡೆಗಟ್ಟುವಂತೆ ನಿವೇದನೆ ಮಾಡಿಕೊಂಡು ಮಲಗುವ ಭಕ್ತರನ್ನು ದಾಟಿಕೊಂಡು ದೇವಾಲಯಕ್ಕೆ ಬಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಪ್ರಾತಃಕಾಲ ಅಗ್ನಿಕುಂಡೋತ್ಸವ:

ಗುರುವಾರ ಬೆಳಗ್ಗೆ ಪ್ರಾತಃಕಾಲ ದೇವಾಲಯದ ಮುಂಭಾಗ ಮಾರಮ್ಮನ ಪತಿದೇವರು ಎಂದೇ ಹೇಳುವ ಕಂಬದ ಮೇಲೆ ಕಳೆದ ಒಂದು ವಾರದಿಂದ ಮಣ್ಣಿನ ಮಡಿಕೆಯಲ್ಲಿ ಬೆಂಕಿ ಕಾದಿದ್ದ ಕುಂಡವನ್ನು ಪೂಜೆ ಸಲ್ಲಿಸಿ ಪ್ರಧಾನ ಅರ್ಚಕರು ಅಗ್ನಿಕುಂಡವನ್ನು ಬರಿಗೈಯಲ್ಲಿ ಎತ್ತುವ ಮೂಲಕ ನೆರೆದಿದ್ದ ಭಕ್ತರನ್ನು ಮೂಕ ಪ್ರೇಕ್ಷಕರನ್ನಾಗಿ ದೇವಾಲಯದ ಮುಂಭಾಗ ಭಾರಿ ವಿಜೃಂಣೆಯಿಂದ ಸಂಭ್ರಮದಿಂದ ಅಗ್ನಿ ಕುಂಡೋತ್ಸವ ನಡೆಯಿತು. ದೇವಿಯ ವಾಗ್ದಾನ:

ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ವಿಶೇಷತೆಯಲ್ಲಿ ಒಂದಾಗಿರುವ ಅಗ್ನಿ ಕುಂಡವನ್ನು ತೊಡೆಯ ಮೇಲೆ ಇಟ್ಟುಕೊಂಡು ದೇವಾಲಯದ ಪ್ರಾರಂಭದಲ್ಲಿ ಪ್ರಧಾನ ಅರ್ಚಕರ ಮೇಲೆ ದೇವಿಯ ರೂಪದಲ್ಲಿ ಹೇಳುವ ವಾಗ್ದಾನ ಈ ಬಾರಿ ಮುಂಗಾರು ಮಳೆ ನಾಲ್ಕಕ್ಕು ಕಡಿಮೆ ಎಂಟಾಣಿ ಬೆಳೆಯಾಗುವುದು ಮುಂಗಾರು ಮೂರು ಮಳೆ ಕಡಿಮೆ ಹಿಂಗಾರು 2 ಮಳೆ ಕಡಿಮೆ ಯಾವುದೇ ರೋಗ ರುಜಿನೆಗಳು ಇಲ್ಲದಂತೆ ತಡೆಗಟ್ಟುವುದಾಗಿ ವಾಗ್ದಾನ ನೀಡುವ ಮೂಲಕ ಮುಂಗಾರು ಮಳೆ ಆಣಿ ಹಿಂಗಾರು 12 ಅಣಿ ಬೆಳೆ ಆಗುವುದು ಜೊತೆಗೆ ದೇವಿಯ ನಂಬಿರುವ ಭಕ್ತರ ಹಾಗೂ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದ ಜನತೆ ಯಾವುದೇ ರೋಗರುಜಿನಗಳು ಬರದಂತೆ ತಡೆಗಟ್ಟುವುದಾಗಿ ದೇವಿಯು ವಾಗ್ದಾನ ನೀಡುವುದೇ ಇಲ್ಲಿನ ಪರಂಪರೆಯಾಗಿ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಜಾತ್ರೆಗೆ ತೆರೆ ಎಳೆಯಲಾಯಿತು. ಹರಕೆ ಕಾಣಿಕೆ ಸಲ್ಲಿಕೆ:

ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಪ್ರಯುಕ್ತ ವಿವಿಧಡೆಯಿಂದ ಬಂದಿದ್ದ ಭಕ್ತರು ದೇವಾಲಯದ ಮುಂಭಾಗ ಮಾರಮ್ಮನ ಪತಿ ದೇವರಿಗೆ ಉಪ್ಪು ಹಾಕುವ ಮೂಲಕ ಜೊತೆಗೆ ಅಲ್ಲಿನ ಕಂಬದ ಬಳಿ ಪೂಜೆ ಸಲ್ಲಿಸಿ ದೇವಾಲಯಕ್ಕೆ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸುವ ಮೂಲಕ ಇಷ್ಟಾರ್ಥ ಸಿದ್ಧಿಸುವಂತೆ ದೇವಿಯನ್ನು ಭಕ್ತರು ಆರಾಧಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ:

ಶ್ರೀ ಬೆಟ್ಟಳ್ಳಿ ಮಾರಮ್ಮನ ಜಾತ್ರಾ ಮಹೋತ್ಸವದ ಹಿನ್ನೆಲೆ ಎಸ್ಪಿ ಡಾ.ಕವಿತಾ ಹಾಗೂ ಕೊಳ್ಳೇಗಾಲ ಡಿವೈಎಸ್ಪಿ ಧರ್ಮೇಂದರ್ ಹಾಗೂ ಇನ್ಸ್‌ಪೆಕ್ಟರ್ ಆನಂದ್ ಕುಮಾರ್ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸುವ ಮೂಲಕ ನಡೆದ ಗುರುವಾರ ಪ್ರಾತಃಕಾಲದಲ್ಲಿ ಅಗ್ನಿಕುಂಡೋತ್ಸವ ನೋಡಲು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಹಾಗೂ ನೆರೆಯ ತಾಲೂಕು ಮತ್ತು ಜಿಲ್ಲೆಗಳಿಂದಲೂ ಬಂದಿದ್ದ ಬೆಟ್ಟಳ್ಳಿ ಮಾರಮ್ಮನ ಭಕ್ತರು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಬಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.