ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ
ತಾಂತ್ರಿಕ ಶಿಕ್ಷಣದಿಂದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಶಿರಾದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸಿದ್ದರಿಂದ ಇಲ್ಲಿನ ಯುವಜನತೆಗೆ ಅನುಕೂಲವಾಗಿದೆ ಎಂದು ಶಾಸಕ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.ಅವರು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜರ್ಮನ್ ಮೂಲದ ಮ್ಯಾನ್ ಅಂಡ್ ಹಮಲ್ ಕಂಪನಿಯ ವತಿಯಿಂದ ನೀಡಿರುವ ಸುಮಾರು 12 ಲಕ್ಷ ವೆಚ್ಚದ ಸಿವಿಲ್ ಇಂಜಿನಿಯರಿಂಗ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು. ಕಾರ್ಪೋರೇಟ್ ಕಂಪನಿಗಳು ಗ್ರಾಮೀಣ ಭಾಗ ದ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಸಹಾಯ ಮಾಡುವುದರಿಂದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತ ದೆ. ಇಂತಹ ಕೆಲಸವನ್ನು ಮ್ಯಾನ್ ಅಂಡ್ ಹುಮ್ಮೆಲ್ ಕಂಪನಿ ಪ್ರತಿ ವರ್ಷವೂ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜರ್ಮನಿಯ ಮ್ಯಾನ್ ಅಂಡ್ ಹಮಲ್ ಕಂಪನಿಯ ಹಣಕಾಸು ವ್ಯವಸ್ಥಾಪಕಿ ಎಮ್ಸಿ ವೆಸ್ಲಿಬಾಚರ್ ಅವರು ಮಾತನಾಡಿ, ಬಡತನ ನಿರ್ಮೂಲನೆಗೆ ಶಿಕ್ಷಣವೊಂದೇ ಮಾರ್ಗ. ಶಿಕ್ಷಣವೇ ಎಲ್ಲಾ ದೇಶಗಳ ಅಭಿವೃದ್ಧಿಯ ಮೂಲ. ಎಲ್ಲರೂ ವಿದ್ಯಾವಂತರಾದರೆ ದೇಶ ದೇಶಗಳ ನಡುವೆ ಸೌಹಾರ್ದತೆ ಇರಲು ಸಾಧ್ಯ. ಮ್ಯಾನ್ ಅಂಡ್ ಹುಮ್ಮೆಲ್ ಕಂಪನಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಳೆದ ವರ್ಷವು ಸುಮಾರು ೧೨ ಲಕ್ಷ ರು. ವೆಚ್ಚದ ವಿವಿಧ ಪರಿಕರಗಳನ್ನು ಶಿರಾ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ನೀಡಿದ್ದೆವು. ಅದೇ ರೀತಿ ಈ ವರ್ಷವೂ ಸಹ ಸುಮಾರು ೧೨ ಲಕ್ಷ ರು. ವೆಚ್ಚದಲ್ಲಿ ಯುನಿವಸಲ್ ಟೆಸ್ಟಿಂಗ್ ಮಷಿನ್ ನೀಡಿದ್ದೇವೆ ಎಂದರು.ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಅನಿಲ್ ಕುಮಾರ್ ಮಾತನಾಡಿ, ಶಿರಾದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭವಾಗಲು ಶಾಸಕ ಟಿ.ಬಿ.ಜಯಚಂದ್ರ ಅವರ ಶ್ರಮ ಕಾರಣವಾಗಿದೆ. ಈ ಹಿಂದೆ ಶಿರಾ ತಾಲೂಕಿನ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣಕ್ಕೆ ತುಮಕೂರು ಸೇರಿದಂತೆ ಬೇರೆ ತಾಲೂಕು ಜಿಲ್ಲೆಗಳಿಗೆ ಹೋಗಬೇಗಿತ್ತು. ಅದನ್ನು ಮನಗಂಡು ಶಿರಾದಲ್ಲಿ ಪಾಲಿಟೆಕ್ನಿಕ್ ಮಂಜೂರು ಮಾಡಿಸಿ ಕಟ್ಟಡ ನಿರ್ಮಿಸಿದ್ದರಿಂದ ಹಲವಾರು ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯುತ್ತಿದ್ದಾರೆ. ಕಾಲೇಜಿಗೆ ಅಗತ್ಯವಾಗಿರುವ ತಾಂತ್ರಿಕ ಪರಿಕರಗಳ ಕೊಡುಗೆಗೆ ಮ್ಯಾನ್ ಅಂಡ್ ಹುಮ್ಮೆಲ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿರಾ ಮೂಲಕ ಹಿರಿಯ ಅಧಿಕಾರಿ ಕಾಂತರಾಜು ಅವರು ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಂಪನಿಯ ಪ್ರತಿನಿಧಿಗಳಾದ ಸುಧೀಶ್, ಅಜಿತ್ ರಾಜ್ ನಾಯರ್, ಸಂದ್ರಾ ಪೌಲ್, ಸರಸ್ವತಿ, ಸುದೀಪ್, ನಗರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ರೂಪೇಶ್ ಕೃಷ್ಣಯ್ಯ, ಮಾಜಿ ಜಿ.ಪಂ.ಸದಸ್ಯರಾದ ಅರೇಹಳ್ಳಿ ರಮೇಶ್, ಮಾಜಿ ಧಾರ್ಮಿಕ ಪರಿಷತ್ ಸದಸ್ಯರಾದ ಹನುಮಂತಯ್ಯ, ಮಹೇಶ್, ಧ್ರುವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.