ಮಹಿಳೆಯ ಕೌಶಲ ವೃದ್ಧಿಸಿ ಅಸಮಾನತೆ ತೊಡೆದು ಹಾಕಿ

| Published : Mar 06 2024, 02:20 AM IST

ಸಾರಾಂಶ

ವಿಜಯಪುರ: ಮಹಿಳೆಯರ ಕೌಶಲ ವೃದ್ಧಿಸಿ, ಅಸಮಾನತೆಯನ್ನು ತೊಡೆದು ಹಾಕಿ, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಮೂಲಕ ಸಮಸಮಾಜದ ನಿರ್ಮಾಣವಾಗಬೇಕಿದೆ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅಭಿಪ್ರಾಯಪಟ್ಟರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರದಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಹಬ್ಬ-2024ರ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಹಿಳೆಯರ ಕೌಶಲ ವೃದ್ಧಿಸಿ, ಅಸಮಾನತೆಯನ್ನು ತೊಡೆದು ಹಾಕಿ, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಮೂಲಕ ಸಮಸಮಾಜದ ನಿರ್ಮಾಣವಾಗಬೇಕಿದೆ ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅಭಿಪ್ರಾಯಪಟ್ಟರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರದಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಮಹಿಳಾ ಸಾಂಸ್ಕೃತಿಕ ಹಬ್ಬ-2024ರ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಏಕಕಾಲದಲ್ಲಿ ಹಲವಾರು ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಹೊಂದಿದ್ದು, ಉತ್ತಮ ತರಬೇತಿ ನೀಡುವ ಮೂಲಕ ಅವರನ್ನು ಬೆಳಕಿಗೆ ತರುವ ಕೆಲಸವಾಗಬೇಕಿದೆ. ಇದರಿಂದ ಮಹಿಳಾ ಕೇಂದ್ರಿತ ಅಭಿವೃದ್ಧಿಯಾಗುವುದರ ಜೊತೆಗೆ ರಾಷ್ಟ್ರದ ಅಭಿವೃದ್ಧಿಯಾಗಲು ಸಾಧ್ಯ. ಸುಸ್ಥಿರ ಸಾಮಾಜಿಕ ಆಯಾಮದಿಂದ ಮಹಿಳೆಯರ ದಕ್ಷತೆಯನ್ನು ಪಕ್ವ ಮಾಡಬೇಕಾಗಿದ್ದು, ಮಹಿಳಾ ಅಭಿವೃದ್ಧಿಗೆ ಮತ್ತು ಮಹಿಳಾ ಸಾಮರ್ಥ್ಯವನ್ನು ಹೊರತರಲು ಸರ್ಕಾರ ಹೆಚ್ಚು ಹೂಡಿಕೆ ಮಾಡಿ ರಾಜಕೀಯ ರಂಗ ಸೇರಿದಂತೆ ಪ್ರತಿಯೊಂದು ರಂಗದಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು. ಅಲ್ಲದೇ, ಈ ಮೂಲಕ ನಿಜವಾದ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆಯಬೇಕಿದೆ ಎಂದರು.ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಹಿಳಾ ದೌರ್ಜನ್ಯಗಳು ಹೆಚ್ಚುತ್ತಿದ್ದು, ಅವುಗಳಿಗೆ ಕಡಿವಾಣ ಹಾಕಬೇಕಿದೆ. ಸರ್ಕಾರ ಕಾನೂನುಗಳನ್ನು ಕಠಿಣಗೊಳಿಸುವ ಮೂಲಕ ಮಹಿಳೆಯರ ಮೇಲಿನ ಆಸಿಡ್ ದಾಳಿ ಹಾಗೂ ದೌರ್ಜನ್ಯಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದರು.ಮಹಾನಗರ ಪಾಲಿಕೆಯ ಮೇಯರ್ ಮೇಹಜಬೀನ್ ಹೊರ್ತಿ ಮಾತನಾಡಿ, ನಮ್ಮ ಊರಲ್ಲಿಯೇ ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯ ಇರುವುದು ನಮ್ಮ ಹೆಮ್ಮೆ. ಅದರಂತೆ ನೀವೆಲ್ಲರೂ ಈ ನಿಮ್ಮ ಬದುಕಿನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ವಿಶ್ವವಿದ್ಯಾನಿಲಯದ ಕೀರ್ತಿ ಹೆಚ್ಚಿಸಬೇಕು ಮತ್ತು ನಮ್ಮತ್ತ ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಹಿಳಾ ಸಾಂಸ್ಕೃತಿಕ ಹಬ್ಬ-2024ರ ಅಧ್ಯಕ್ಷೆ ಪ್ರೊ.ಲಕ್ಷ್ಮೀದೇವಿ.ವೈ ಸ್ವಾಗತಿಸಿದರು, ಸಹಾಯಕ ಪ್ರಾಧ್ಯಾಪಕಿ ಡಾ.ಕಲಾವತಿ ಕಾಂಬಳೆ ವಂದಿಸಿದರು. ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕಿ ಜ್ಯೋತಿ ಉಪಾಧ್ಯೆ ನಿರೂಪಿಸಿದರು.ಬಾಕ್ಸ್

ಮ್ಯಾರಥಾನ್:

ಮಹಿಳಾ ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಬೆಳಿಗ್ಗೆ 6 ಗಂಟೆಗೆ ನಗರದ ನಾಲ್ಕು ದಿಕ್ಕುಗಳಾದ ಬಿಎಲ್ ಡಿಈ, ಗೋಲ್‌ಗುಂಬಜ್, ಜಿಲ್ಲಾ ನ್ಯಾಯಾಲಯ ಹಾಗೂ ಸೈನಿಕ ಶಾಲೆ ಹೀಗೆ ನಾಲ್ಕು ದಿಕ್ಕಿನಿಂದ ಆರಂಭವಾದ ಮ್ಯಾರಥಾನ್‌ನಲ್ಲಿ ವಿದ್ಯಾರ್ಥಿನಿಯರು ಮಹಿಳಾ ಘೋಷ ವ್ಯಾಖ್ಯೆಗಳ ಜೊತೆಗೆ ಕರಪತ್ರಗಳನ್ನು ಹಂಚಿ ಸಾರ್ವಜನಿಕರ ಗಮನ ಸೆಳೆದರು. ಮ್ಯಾರಥಾನ್‌ನಲ್ಲಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಹಾಗೂ ಕ್ರೀಡಾ ವಿಭಾಗದ ಮುಖ್ಯಸ್ಥ ಪ್ರೊ.ಸಕ್ಪಾಲ್ ಹೂವಣ್ ಮುಂತಾದವರು ಇದ್ದರು.