ಚಿಂತಾಮಣಿ ನಗರಸಭೆಗೆ ₹78 ಲಕ್ಷ ಉಳಿತಾಯ ಬಜೆಟ್

| Published : Mar 06 2024, 02:20 AM IST

ಸಾರಾಂಶ

ಬೇಸಿಗೆ ಆರಂಭವಾಗುತ್ತಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು, ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು, ಸಮರ್ಪಕ ಬೀದಿ ದೀಪಗಳ ನಿರ್ವಹಣೆ ಗೆ ಕ್ರಮವಹಿಸಬೇಕು

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಇಲ್ಲಿಯ ನಗರಸಭೆಗೆ ೨೦೨೪-೨೫ ನೇ ಸಾಲಿಗೆ ೭೮ ಲಕ್ಷ ರೂಗಳ ಉಳಿತಾಯ ಬಜೆಡ್‌ ಅನ್ನು ನಗರಸಭೆ ಆಡಳಿತಾಧಿಕಾರಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಮಂಡನೆ ಮಾಡಿದರು.

ನಗರಸಭೆ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ರವೀಂದ್ರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ೨೦೨೪-೨೫ ನೇ ಸಾಲಿಗೆ ೮೬ ಕೋಟಿ ೯೨ ಲಕ್ಷ ೫೧ ಸಾವಿರ ರೂಗಳ ಅಂದಾಜು ಆದಾಯ, ೮೬ ಕೋಟಿ ೧೪ ಲಕ್ಷ ೫೧ ಸಾವಿರ ರೂಗಳ ಅಂದಾಜು ಖರ್ಚು ಹಾಗೂ ೭೮ ಲಕ್ಷ ರೂಗಳ ಉಳಿತಾಯ ಬಜೆಟ್‌ನ್ನು ಮಂಡನೆ ಮಾಡಿದರು.

ಸಾಮಾನ್ಯ ಸಭೆ ನಡೆಸುತ್ತಿಲ್ಲ

ಬಜೆಟ್ ಮಂಡನೆ ಸಭೆ ಆರಭವಾಗುತ್ತಿದ್ದಂತೆ ವಾರ್ಡನಂ ೧೮ ರ ನಗರಸಭಾ ಸದಸ್ಯ ಮಹಮದ್ ಶಫೀಕ್ ಮಾತನಾಡಿ ಸುಮಾರು ತಿಂಗಳುಗಳಿಂದ ಸಾಮಾನ್ಯಸಭೆ ನಡೆಯದೆ ಕಾರಣ ಸಾಕಷ್ಟು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದ್ದು, ಇದರ ಬಗ್ಗೆ ಸುದೀರ್ಘ ಚರ್ಚೆಯಾಗಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು. ಜಿಲ್ಲಾಧಿಕಾರಿ ರವೀಂದ್ರ ಮಾತನಾಡಿ ಬಜೆಟ್‌ನ್ನು ಓದಿದ ನಂತರ ಎಲ್ಲಾ ನಗರಸಭಾ ಸದಸ್ಯರ ಕುಂದು ಕೊರತೆಗಳನ್ನು ಅಲ್ಲಿಸಲಾಗುವುದೆಂದ ತಿಳಿಸಿದರು.

ನಗರಸಭಾ ಸದಸ್ಯರು ಪಕ್ಷಾತೀತವಾಗಿ ಮಾತನಾಡಿ ನಗರದ ಎಲ್ಲಾ ೩೧ ವಾರ್ಡಗಳಲ್ಲಿ ಸಮಪರ್ಕವಾದ ಬೀದಿ ದೀಪಗಳಲಿಲ್ಲ, ಅವುಗಳ ನಿರ್ವಹಣೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆಯೆಂದು ಅಕ್ಷಯ್ ಕುಮಾರ್ ಸೇರಿದಂತೆ ಸದಸ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಗರ ಭಾಗದಲ್ಲಿ ಕಂದಾಯ ಭೂಮಿಯಲ್ಲಿ ಲೇಔಟ್ ಮಾಡುತ್ತಾರೆ. ಅದಕ್ಕೆ ಪ್ಲಾನಿಂಗ್ ಇರಲ್ಲ, ಡಿಸಿ ಕನ್ವರ್ಷನ್ ಇಲ್ಲ ಕಂದಾಯ ವಸೂಲಿ ಮಾಡುತ್ತಾರೆ ಮೂಲಸೌಕರ್ಯಗಳನ್ನು ಕಲ್ಪಿಸುವುದಿಲ್ಲ ಮತ್ತೆ ಇ ಖಾತೆಗೆ ಬಂದರೆ ಅನಧಿಕೃತ ಎನ್ನುತ್ತಾರೆ ಇದು ಹೇಗೆಂದು ಸದಸ್ಯೆ ರೂಬಿಯಾ ಸುಲ್ತಾನ್ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ರವೀಂದ್ರ ಈ ಕುರಿತು ಸರ್ಕಾರದ ಮಟ್ಟದಲ್ಲಿಚರ್ಚೆಆಗುತ್ತಿದೆ ಸರ್ಕಾರದ ಆದೇಶ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದೆಂದರು.

ನೀರಿದ್ದರೂ ಬಿಡದ ನಗರಸಭೆ

ಮಹಮದ್ ಶಫೀಕ್ ಮಾತನಾಡಿ ಭಕ್ತರಹಳ್ಳಿ ಅರಸಿಕೆರೆ ನೀರನ್ನು ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ನಗರಕ್ಕೆ ಭಾಗಕ್ಕೆ ತಂದರಾದರೂ ಆ ನೀರನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳದೆ ನಮ್ಮ ವಾರ್ಡ್‌ಗಳಿಗೆ ನೀರನ್ನು ಬೀಡದೇ ನೀರಿನ ಕೊರತೆ ಎದುರಾಗಿದ್ದು, ಭಕ್ತರಹಳ್ಳಿ ಅರಸಿಕೆರೆ ನೀರು ನಮ್ಮ ವಾರ್ಡಗಳಿಗೆ ಕೊಡಬೇಕೆಂದು ಒತ್ತಾಯಿಸಿದರು. ತೆರಿಗೆ ವಸೂಲಿ ಆಗುತ್ತಿಲ್ಲ

ಸದಸ್ಯರಾದ ಕೃಷ್ಣಮೂರ್ತಿ, ಜೆಸಿಬಿ ನಟರಾಜ್, ದೇವಳಂ ಶಂಕರ ಮಾತನಾಡಿ ನಗರದಲ್ಲಿ ಹಲವು ಖಾಸಗಿ ಶಾಲೆ, ಚಿತ್ರಮಂದಿರ, ಕಾಂಪ್ಲೆಕ್ಸ್‌ಗಳಲ್ಲಿ ಶೇ ೨೦ ರಷ್ಟು ಸಹ ತೆರಿಗೆ ವಸೂಲಿ ಆಗುತ್ತಿಲ್ಲ, ಅಧಿಕಾರಿಗಳು ಕೆಲಸ ಮಾಡುತ್ತಿಲ್ಲವೆಂದರು. ನಗರದ ಸ್ವಚ್ಚತೆಗಾಗಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ೯ ತಿಂಗಳಗಳಿಂದ ಸಂಬಳ ನೀಡಿಲ್ಲ, ಅವರ ಜೀವನ, ಮಕ್ಕಳ ವಿದ್ಯಾಭ್ಯಾಸ, ಹೇಗೆ ನಡೆಯುತ್ತದೆ, ನಗರಸಭೆ ಕೋಟ್ಯಾಂತರ ರೂ ಹಣ ಇಟ್ಟುಕೊಂಡು ಪೌರಕರ್ಮಿಕರಿಗೆ ಯಾಕೆ ಸಂಬಳ ನೀಡುತ್ತಿಲ್ಲವೆಂದು ಪೌರಾಯುಕ್ತ ಚಲಪತಿರನ್ನು ಪಕ್ಷಾತೀತವಾಗಿ ಸದಸ್ಯರು ತರಾಟೆಗೆ ತೆಗೆದುಕೊಂಡರು. ನೀರು ಪೂರೈಕೆಗೆ ಆದ್ಯತೆ ನೀಡಿ

ಜಿಲ್ಲಾಧಿಕಾರಿ ರವೀಂದ್ರ ಮಾತನಾಡಿ ಬೇಸಿಗೆ ಆರಂಭವಾಗುತ್ತಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು, ಅನಧಿಕೃತ ಬಡಾವಣೆಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು, ಸಮರ್ಪಕ ಬೀದಿ ದೀಪಗಳ ನಿರ್ವಹಣೆ ಗೆ ಕ್ರಮವಹಿಸಬೇಕು, ಹಾಗೂ ನಗರದಲ್ಲಿ ಯಾವುದೇ ರೀತಿಯ ಸಮಸ್ಯೆಗಳುಂಟಾಗದಂತೆ ಕ್ರಮವಹಿಸಬೇಕೆಂದು ಪೌರಾಯುಕ್ತ ಚಲಪತಿರವರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಸುದರ್ಶನ್ ಯಾದವ್, ನಗರಸಭೆ ಪೌರಾಯುಕ್ತ ಚಲಪತಿ ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು, ನಗರಸಭೆ ಸಿಬ್ಬಂದಿ ಮತ್ತಿತರರು ಉಪಸ್ಥಿತಿರಿದ್ದರು.