ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ: ಡಾ. ಸಿ.ಆರ್. ಚಂದ್ರಶೇಖರ

| Published : Apr 08 2024, 01:03 AM IST

ಪೌಷ್ಟಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ: ಡಾ. ಸಿ.ಆರ್. ಚಂದ್ರಶೇಖರ
Share this Article
  • FB
  • TW
  • Linkdin
  • Email

ಸಾರಾಂಶ

ಅವೈಜ್ಞಾನಿಕ ಆಹಾರ ಪದ್ಧತಿ, ಅಸಂಬದ್ಧ ಜೀವನ ಶೈಲಿಯಿಂದ ಶೇ. ೯೦ರಷ್ಟು ಜನರು ಅತಿ ಚಿಕ್ಕವಯಸ್ಸಿನಲ್ಲೇ ಹೃದಯಾಘಾತ, ರಕ್ತದೊತ್ತಡ, ಮಧುಮೇಹದ ಕಾರಣಗಳಿಂದ ಮರಣ ಹೊಂದುತ್ತಿದ್ದಾರೆ ಎಂದು ಮನೋವಿಜ್ಞಾನಿ, ಪದ್ಮಶ್ರೀ ಪುರಷ್ಕೃತ ಡಾ.ಸಿ.ಆರ್. ಚಂದ್ರಶೇಖರ್ ಹೇಳಿದರು.

ಕನ್ನಡಪ್ರಭ ವಾರ್ತೆ ಗದಗ

ದುಡಿದು ತಿನ್ನಿ, ಕೂತು ತಿನ್ನಬೇಡಿ, ದುಡಿದು ತಿಂದರೆ ಸ್ವಾಭಿಮಾನ, ಆರೋಗ್ಯ ಎಂದು ಮನೋವಿಜ್ಞಾನಿ, ಪದ್ಮಶ್ರೀ ಪುರಷ್ಕೃತ ಡಾ.ಸಿ.ಆರ್. ಚಂದ್ರಶೇಖರ್ ಹೇಳಿದರು.

ನಗರದ ಕೆ.ಎಲ್.ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಊಟ ಬಲ್ಲವನಿಗೆ ರೋಗವಿಲ್ಲ. ಮಾತು ಬಲವನಿಗೆ ಜಗಳವಿಲ್ಲ. ಕೌಶಲ್ಯವಿದ್ದವನಿಗೆ ನಿರುದ್ಯೋಗವಿಲ್ಲ ಎಂಬ ಗಾಧೆಯಂತೆ ಆರೋಗ್ಯಕರ ಆಹಾರ ಸೇವನೆಯಿಂದ ರೋಗವೆಂಬ ಕ್ಷುದ್ರಶಕ್ತಿ ಮನುಷ್ಯನತ್ತ ಸುಳಿಯದಂತೆ ನೋಡಿಕೊಳ್ಳಬಹುದು. ಪ್ರಕೃತಿ ಮನುಷ್ಯನಿಗೆ ೧೦೦ ರಿಂದ ೧೨೦ ವರ್ಷಗಳ ಆಯುಷ್ಯ ಕೊಟ್ಟಿದೆ. ಆದರೆ, ಅವೈಜ್ಞಾನಿಕ ಆಹಾರ ಪದ್ಧತಿ, ಅಸಂಬದ್ಧ ಜೀವನ ಶೈಲಿಯಿಂದ ಶೇ. ೯೦ರಷ್ಟು ಜನರು ಅತಿ ಚಿಕ್ಕವಯಸ್ಸಿನಲ್ಲೇ ಹೃದಯಾಘಾತ, ರಕ್ತದೊತ್ತಡ, ಮಧುಮೇಹದ ಕಾರಣಗಳಿಂದ ಮರಣ ಹೊಂದುತ್ತಿದ್ದಾರೆ. ಪೌಷ್ಟಿಕಾಂಶವುಳ್ಳ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಪಡೆಯಬಹುದು. ಶಿಸ್ತಿನ ಜೀವನ ಶೈಲಿ ರೂಢಿಸಿಕೊಂಡರೆ ದೀರ್ಘಾಯುಷಿಗಳಾಗಿ ಬಾಳಬಹುದು ಎಂದರು.

ಇಂದಿನ ದಿನಮಾನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಮಾನಸಿಕ ಅಸಮತೋಲನ ಮುಖ್ಯ ಕಾರಣ. ಹಾಗಾಗಿ ಪ್ರತಿಯೊಬ್ಬರೂ ಮಾನಸಿಕ ಸಮತೋಲನ ರೂಢಿಸಿಕೊಳ್ಳಬೇಕು. ತಲೆಯಿಂದ ನಕಾರಾತ್ಮಕ ಯೋಚನೆ ತೆಗೆದು ಹಾಕಿ ಸಕಾರಾತ್ಮಕ ಯೋಚನೆಗಳೊಂದಿಗೆ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಚಂದನ ವಾಹಿನಿಯ ಥಟ್ ಅಂತಾ ಹೇಳಿ ಖ್ಯಾತಿಯ ಡಾ. ನಾ. ಸೋಮೇಶ್ವರ ಮಾತನಾಡಿ, ಬದುಕಿನಲ್ಲಿ ಮನುಷ್ಯನಿಗೆ ಸಂಸ್ಕೃತಿ ಮತ್ತು ಸಂಸ್ಕಾರ ಬಹಳ ಮುಖ್ಯ. ಪ್ರತಿಯೊಬ್ಬ ಸಾಧಾರಣ ವ್ಯಕ್ತಿಯಲ್ಲಿ ಅಸಾಧಾರಣ ವ್ಯಕ್ತಿ ಹಾಗೂ ವ್ಯಕ್ತಿತ್ವ ಅಡಗಿರುತ್ತದೆ. ಆ ಅಸಾಧಾರಣ ವ್ಯಕ್ತಿಯನ್ನು ನಾವು ಬಡಿದೆಬ್ಬಿಸಿ ಏಕಾಗ್ರತೆ, ತನ್ಮಯತೆಯಿಂದ ಸಾಧನೆಯತ್ತ ಸಾಗಬಹುದು ಎಂದು ಹೇಳಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಕುಷ್ಠರೋಗ ನಿಯಂತ್ರಣ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಉಪಸ್ಥಿತರಿದ್ದರು.

ಪ್ರಾ. ಪ್ರೊ. ಪಿ.ಜಿ. ಪಾಟೀಲ ಸ್ವಾಗತಿಸಿದರು. ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸೋಮಶೇಖರ್ ಬಿಜ್ಜಳ ಪರಿಚಯಿಸಿದರು. ಸುಶ್ಮಿತಾ ಪೂಜಾರ ಪ್ರಾರ್ಥಿಸಿದರು. ಪ್ರೊ. ಬಿ.ಆರ್. ಚಿನಗುಂಡಿ ಹಾಗೂ ಪ್ರೊ. ಶ್ರುತಿ ಮ್ಯಾಗೇರಿ ನಿರೂಪಿಸಿದರು. ಐ.ಕ್ಯೂ.ಎಸ್.ಸಿ. ಸಂಯೋಜಕ ಪ್ರೊ. ಪ್ರದೀಪ್ ಸಂಗಪ್ಪಗೊಳ ವಂದಿಸಿದರು.