ಪಾಂಡುವಪುರ:
ಪರಿಸರ ಉಳಿಸಿದರೆ ನೈಸರ್ಗಿಕ ಗಾಳಿಯಿಂದ ಉತ್ತಮ ಆರೋಗ್ಯ ಪಡೆಯಬಹುದು. ಮರ-ಗಿಡಗಳನ್ನು ನಾಶ ಮಾಡದೆ ಪ್ರಕೃತಿ ಉಳಿಸುವಂತೆ ಸ್ಟಾನ್ ಫೋರ್ಡ್ ಪಬ್ಲಿಕ್ ಶಾಲೆ ಕಾರ್ಯದರ್ಶಿ ಕೆ.ವಿ.ಚೇತನ್ ತಿಳಿಸಿದರು.ತಾಲೂಕಿನ ಕ್ಯಾತನಹಳ್ಳಿ ಸ್ಟಾನ್ ಫೋರ್ಡ್ ಪಬ್ಲಿಕ್ ಶಾಲೆಯಲ್ಲಿ ನಡೆದ ವಿಶ್ವ ಪರಿಸದ ದಿನಾಚರಣೆಯಲ್ಲಿ ಮಾತನಾಡಿ, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು. ಪರಿಸರ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಒಬ್ಬೊಬ್ಬರು ಒಂದೊಂದು ಗಿಡ ನೆಟ್ಟು ನೋಡಿಕೊಂಡರೆ ದೊಡ್ಡದಾಗಿ ಬೆಳೆಯಬೇಕು. ಸ್ಥಳೀಯ ಜನರು ವಾಯುವಿಹಾರ ಮಾಡುವ ಜತೆಗೆ ಗಿಡಗಳನ್ನು ದತ್ತು ಪಡೆದು ಪೋಷಣೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ, ಮಾಲಿನ್ಯ ತಡೆ, ಪ್ರಕೃತಿ ಸಮತೋಲನ ಕಾಪಾಡುವಲ್ಲಿ ನಮ್ಮ ಪಾತ್ರ ಕುರಿತು ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶಾಲೆ ಆಡಳಿತಾಧಿಕಾರಿ ಎಸ್.ಜಗದೀಶ್, ಮುಖ್ಯ ಶಿಕ್ಷಕಿ ಡಿ.ಕವಿತಾ ಮೇಲ್ವಿಚಾರಕಿ ಸುಮಾ ಹಾಗೂ ಎಲ್ಲಾ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.
ಜನರು ಪರಿಸರ ರಕ್ಷಿಸುವುದನ್ನು ಮರೆಯುತ್ತಿದ್ದಾರೆ: ಮಹಾದೇವಸ್ವಾಮಿ
ಶ್ರೀರಂಗಪಟ್ಟಣ:ಮಾನವರು ದೇಶವನ್ನು ಅಭಿವೃದ್ಧಿಯತ್ತ ಮುನ್ನಡೆಸುತ್ತಿದ್ದರೂ ಪರಿಸರ ರಕ್ಷಿಸುವುದನ್ನು ಮರೆಯುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಮಹಾದೇವಸ್ವಾಮಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಗಾಮನಹಳ್ಳಿ ಜ್ಞಾನಭಾರತಿ ಪ್ರೌಢಶಾಲೆಯಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ದೇಶ ಅಭಿವೃದ್ಧಿಯಾಗುತ್ತಿದ್ದಂತೆ ಪರಿಸರ ಮಲೀನ ಹೆಚ್ಚಾಗುತ್ತಿದೆ ಎಂದು ಎಚ್ಚರಿಸಿದರು.ಜಗತ್ತಿನಲ್ಲಿ ಮನುಷ್ಯ ಹಲವಾರು ಸಂಶೋಧನೆಗಳನ್ನು ಮಾಡುತ್ತಾ ಮುಂದುವರಿಯುತ್ತಿದ್ದಾನೆ. ಆದರೆ, ಪರಿಸರದಲ್ಲಿ ಗಾಳಿ, ನೀರು, ಮಣ್ಣು, ಶಬ್ದ, ಬೆಳಕು, ಮತ್ತಿತರ ಅಂಶಗಳನ್ನು ಸಂರಕ್ಷಿಸುವುದನ್ನು ಮರೆತಿದ್ದಾನೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಈ ವಾಕ್ಯವನ್ನು ಈಗಿನ ಯುವ ಜನತೆ ಪಾಲಿಸಬೇಕಾಗಿದೆ ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮಂಡ್ಯದ ಎಂಓಬಿ ಸಂಸ್ಥೆ ಮೇರಿ, ದೇವರಾಜು, ಬಾಲರಾಜು, ಮುಂತಾದ ಪದಾಧಿಕಾರಿಗಳು ಮನುಷ್ಯನಿಗೂ ಪರಿಸರಕ್ಕೂ ಇರುವ ಸಂಬಂಧವನ್ನು ವಿವರಿಸಿದರು. ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಉಮಾಮಹೇಶ್ವರಿ ಗಿಡ ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ವಿಜ್ಞಾನ ಶಿಕ್ಷಕಿ ಸುಮಾ, ಶಾಲೆ ಶಿಕ್ಷಕರಾದ ರಾಜೇಶ್, ಜನಾರ್ಧನ್, ಕಾಳಪ್ಪ, ರಾಜು ಇದ್ದರು. ಇದೇ ವೇಳೆ ಮಕ್ಕಳಿಗೆ ಪರಿಸರ ಸಂರಕ್ಷಣೆ ಘೋಷಣೆಗಳನ್ನು ಬೋಧಿಸಲಾಯಿತು.