ತರಬೇತಿಯಿಂದ ಗ್ರಾಮೀಣ ಮಕ್ಕಳಲ್ಲಿ ಉತ್ತಮ ಫಲಿತಾಂಶ: ಕ್ಷೇತ್ರ ಶಿಕ್ಷಣಾಧಿಕಾರಿ ದೀಪ

| Published : Feb 12 2024, 01:33 AM IST / Updated: Feb 12 2024, 04:05 PM IST

ಸಾರಾಂಶ

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಶೇಷವಾದ ಕೌಶಲ್ಯವನ್ನು ಹೊಂದಿರುತ್ತಾರೆ. ಶಿಕ್ಷಕರು ಅವರ ಜ್ಞಾನವನ್ನು ಗುರುತಿಸಿ ವಿಶೇಷ ತರಬೇತಿ ನೀಡಿದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಹೇಳಿದರು. ‌

ಚನ್ನರಾಯಪಟ್ಟಣ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಶೇಷವಾದ ಕೌಶಲ್ಯವನ್ನು ಹೊಂದಿರುತ್ತಾರೆ. ಶಿಕ್ಷಕರು ಅವರ ಜ್ಞಾನವನ್ನು ಗುರುತಿಸಿ ವಿಶೇಷ ತರಬೇತಿ ನೀಡಿದರೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ದೀಪಾ ಹೇಳಿದರು. ‌

ತಾಲೂಕಿನ ಶ್ರವಣಬೆಳಗೊಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಚೈತನ್ಯ ವೃದ್ಧಿ ವಿದ್ಯಾ ವಿಕಾಸ ೨೦೨೩-೨೪ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರತಿ ಶನಿವಾರ ಮತ್ತು ಭಾನುವಾರ ಪರೀಕ್ಷಾ ತಯಾರಿಗಾಗಿ ಶ್ರವಣಬೆಳಗೊಳ ಹೋಬಳಿಯ ಶಿಕ್ಷಕರು ಸೇರಿ ಸ್ವಯಂಪ್ರೇರಿತರಾಗಿ ವಿದ್ಯಾ ವಿಕಾಸ ಯೋಜನೆಯನ್ನು ಆರಂಭಿಸಿ ವಿಶೇಷ ತರಗತಿಗಳನ್ನು ನಡೆಸಲು ಮುಂದಾಗಿರುವುದು ಶ್ಲಾಘನೀಯವಾದುದು. 

ಇದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಭಯವನ್ನು ಹೋಗಲಾಡಿಸಿ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗುತ್ತದೆ ಎಂದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಚಲುವನಾರಾಯಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೈಲಿಗಲ್ಲಾಗಿದ್ದು, ಇಲ್ಲಿನ ಶಿಕ್ಷಕರೆಲ್ಲರು ಸೇರಿ ಆಯೋಜಿಸಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಚೈತನ್ಯ ವೃದ್ಧಿ ವಿದ್ಯಾ ವಿಕಾಸ ಕಾರ್ಯಾಗಾರ ಇಡೀ ರಾಜ್ಯದಲ್ಲೇ ಮಾದರಿ ಕಾರ್ಯಕ್ರಮವಾಗಿದೆ. 

ತಾಲೂಕಿನ ಎಲ್ಲಾ ಹೋಬಳಿಗಳಲ್ಲೂ ವಾರದಲ್ಲಿ ಎರಡು ದಿನ ಈ ಕಾರ್ಯಾಗಾರವನ್ನು ಆಯೋಜಿಸಿದರೆ ಉತ್ತಮ ಫಲಿತಾಂಶ ಬರುತ್ತದೆ ಎಂದು ಹೇಳಿದರು.

ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ದೇವರಾಜೇಗೌಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಶ್ರವಣಬೆಳಗೊಳ ಹೋಬಳಿ ಘಟಕದ ಅಧ್ಯಕ್ಷ ನಾಗೇಂದ್ರರಾಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಭವಾನಿ, ಪ್ರಕಾಶ್, ಚಂದ್ರಶೇಖರ್, ಸತೀಶ್, ನಾಗೇಶ್, ಗಿರಿಜಾ, ರವಿಕುಮಾರ್, ದಿನೇಶ್ ಮತ್ತಿತರರು ಇದ್ದರು.

ಕಾರ್ಯಾಗಾರದಲ್ಲಿ ಹಳೆಬೆಳಗೊಳ, ಜುಟ್ಟನಹಳ್ಳಿ, ಕಾಂತರಾಜಪುರ, ದಮ್ಮನಿಂಗಳ ಹಾಗೂ ಶ್ರವಣಬೆಳಗೊಳ ಸರ್ಕಾರಿ ಪ್ರೌಢಶಾಲೆ ಹಾಗೂ ಎಸ್.ಎನ್. ಅನುದಾನಿತ ಪ್ರೌಢಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶ್ರವಣಬೆಳಗೊಳದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಚೈತನ್ಯ ವೃದ್ಧಿ ವಿದ್ಯಾ ವಿಕಾಸ ೨೦೨೩-೨೪ರ ಕಾರ್ಯಕ್ರಮವನ್ನು ಉದ್ಘಾಟಿಸಿ ಬಿಇಒ ದೀಪಾ ಮಾತನಾಡಿದರು.