ಸಾರಾಂಶ
ರಾಮಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಸಚಿವ ದಿನೇಶ್ ಹೇಳಿಕೆಕನ್ನಡಪ್ರಭ ವಾರ್ತೆ ದಾವಣಗೆರೆ
ಗ್ರಾಮೀಣ ಪ್ರದೇಶದಲ್ಲಿರುವ ನಾಗರಿಕರಿಗೆ ಇಲ್ಲಿ ನಿರ್ಮಿಸುವ ಸುಸಜ್ಜಿತ ಆರೋಗ್ಯ ಕೇಂದ್ರದ ಕಟ್ಟಡದಲ್ಲಿ ಉತ್ತಮ ಸೇವೆ ದೊರಕಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಶಿಸಿದರು.ಮಾಯಕೊಂಡ ಹೋಬಳಿ ರಾಮಗೊಂಡನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅತ್ಯುತ್ತಮವಾಗಿ ನಿರ್ಮಿಸಿದ ಅಭಿಯಂತರರನ್ನು ಹಾಗೂ ವೈದ್ಯಾಧಿಕಾರಿಯನ್ನು ಪ್ರಶಂಶಿಸಿ, ಈ ಆರೋಗ್ಯ ಕೇಂದ್ರಕ್ಕೆ ಅಗತ್ಯ ಪರಿಕರಗಳನ್ನು ಒದಗಿಸಿ ಕೊಡುವಲ್ಲಿ ಸಿದ್ಧರಿದ್ದೇವೆ, ಇದರ ಸದ್ಬಳಕೆ ತಾವುಗಳು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಮಾಯಕೊಂಡ ಗ್ರಾಪಂ ಮನವಿ ಸ್ವೀಕರಿಸಿದ ಸಚಿವರು ವಿಧಾನಸಭಾ ಕ್ಷೇತ್ರ ಮಾಯಕೊಂಡಕ್ಕೆ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಿಸಲು ಅತಿ ಶೀಘ್ರವೇ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು, ಆಶಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ವೇತನ ಕಳೆದ ನಾಲ್ಕು ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ ಅದರ ಬಗ್ಗೆ ಕೇಂದ್ರದ ಆರೋಗ್ಯ ಸಚಿವರಲ್ಲಿ ಮಾತನಾಡಿ ವೇತನ ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಚುನಾವಣೆ ಸಮಯದಲ್ಲಿ ಗ್ರಾಮೀಣ ಯುವಕರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ಸೃಷ್ಟಿಸುವ ಕೆಲಸ ಮಾಡುವೆ ಎಂದು ಹೇಳಿದ್ದೆ ಈಗ ಅದರ ರೂಪರೇಷೆಗಳನ್ನು ತಿದ್ದುಪಡಿಸಿಕೊಂಡಿದ್ದು ಕಾರ್ಯರಂಭ ಮಾಡುಬೇಕಿದೆ ಎಂದು ತಿಳಿಸಿದರು.ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅತ್ಯುತ್ತಮವಾದ ಆರೋಗ್ಯ ಕೇಂದ್ರ ನಿರ್ಮಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮಾಯಕೊಂಡ ಕ್ಷೇತ್ರದಲ್ಲಿ ರಸ್ತೆಗಳು ಹಾಳಾಗಿದ್ದು ಅದರ ದುರಸ್ತಿ ಕಾರ್ಯ ಆಗಬೇಕಿದೆ. ಜಿಲ್ಲಾ ಸಚಿವರು, ಸಂಸದರೊಂದಿಗೆ ಸೇರಿ ಅಗತ್ಯ ರಸ್ತೆಗಳನ್ನು ನಿರ್ಮಿಸಲು ಪ್ರಯತ್ನಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಷಣ್ಮುಖಪ್ಪ, ಡಾ. ನವೀನ್ ಭಟ್, ನಿರ್ದೇಶಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬೆಂಗಳೂರು. ಅತ್ತಿಗೆರೆ ಗ್ರಾಪಂ ಅಧ್ಯಕ್ಷರು ಸದಸ್ಯರು, ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿ ಇದ್ದರು.ಈ ಸಂದರ್ಭದಲ್ಲಿ ಆರೋಗ್ಯ ಕೇಂದ್ರವನ್ನು ನಿರ್ಮಿಸಲು ಎರಡು ಎಕರೆ ಜಮೀನು ನೀಡಿದ ಕೋಲ್ಕುಂಟೆ ಷಣ್ಮುಖಪ್ಪ ಅವರ ಮಕ್ಕಳನ್ನು ಸನ್ಮಾನಿಸಿದರು.