ಸಾರಾಂಶ
ಕನ್ನಡಪ್ರಭವಾರ್ತೆ, ಬೆಂಗಳೂರು
‘ನಮ್ಮಿಬ್ಬರ ವಿವಾಹ ವಿಚ್ಛೇದನದ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಇಲ್ಲಿಗೇ ನಿಲ್ಲಿಸದಿದ್ದರೆ ಕಾನೂನಿನ ಮೂಲಕ ತಕ್ಕ ಉತ್ತರ ಕೊಡಬೇಕಾಗುತ್ತದೆ’ ಎಂದು ರ್‍ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಎಚ್ಚರಿಕೆ ನೀಡಿದ್ದಾರೆ.ವಿವಾಹ ವಿಚ್ಛೇದನದ ಕುರಿತು ವಿವರ ನೀಡಲು ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ‘ನಾವು ಈಗಾಗಲೇ ಕಾನೂನಿನ ಪ್ರಕಾರ ವಿಚ್ಛೇದನ ತೆಗೆದುಕೊಂಡಿದ್ದೇವೆ. ಆದರೆ, ನನ್ನ ಆತ್ಮೀಯ ಸ್ನೇಹಿತ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ನಮ್ಮ ಖಾಸಗಿ ಜೀವನದ ಬಗ್ಗೆ ಸುಳ್ಳು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಿವೇದಿತಾ ಅವರಿಗೆ ಬೇರೆಯವರೊಂದಿಗೆ ಸಂಬಂಧ ಇದೆ, ಮಗು ಮಾಡಿಕೊಳ್ಳಲು ಒಪ್ಪುತ್ತಿಲ್ಲ, ಹಣದ ವಿಚಾರದಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ, ಚಂದನ್ ಶೆಟ್ಟಿ ವಿದೇಶಕ್ಕೆ ಹೋದಾಗ ನಿವೇದಿತಾ ಗೌಡ ಅವರನ್ನು ಯಾಕೆ ಕರೆದುಕೊಂಡು ಹೋಗಿಲ್ಲ ಎಂದು ಕಪೋಲಕಲ್ಪಿತ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಆ ವ್ಯಕ್ತಿ ನನಗೆ ಸ್ನೇಹಿತನೂ ಅಲ್ಲ, ಆತ್ಮೀಯನೂ ಅಲ್ಲ. ಹೀಗಾಗಿ ತನ್ನ ಸುಳ್ಳು ಹೇಳಿಕೆಗಳನ್ನು ಇಲ್ಲಿಗೇ ನಿಲ್ಲಿಸದಿದ್ದರೆ ಕಾನೂನಿನ ಮೂಲಕ ಆತನಿಗೆ ಉತ್ತರ ಕೊಡುತ್ತೇನೆ’ ಎಂದರು.
ಇದೇ ವಿಚಾರವಾಗಿ ಬೇಸರ ತೋಡಿಕೊಂಡ ನಿವೇದಿತಾ ಗೌಡ, ‘ನಮ್ಮ ಜೀವನದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ನಮ್ಮ ಪೋಷಕರು ನಮಗೇ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಆದರೆ, ಒಬ್ಬ ವ್ಯಕ್ತಿ ಮಾತ್ರ ನಮ್ಮನ್ನು ಗುರಿಯಾಗಿಸಿಕೊಂಡು ತಪ್ಪು ಮಾಹಿತಿಗಳನ್ನು ಹೇಳುತ್ತಿದ್ದಾರೆ. ಇದು ಮುಂದುವರಿದರೆ ನಾನು ವೈಯಕ್ತಿಕವಾಗಿ ಆ ವ್ಯಕ್ತಿ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ’ ಎಂದು ಎಚ್ಚರಿಕೆ ಕೊಟ್ಟರು.‘ನಾವಿಬ್ಬರೂ ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಇನ್ನೊಬ್ಬ ವ್ಯಕ್ತಿ ಕಾರಣ ಎಂದು ಅವರೊಂದಿಗೆ ನಿವೇದಿತಾಗೆ ಸಂಬಂಧ ಇದೆ ಎನ್ನುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಯೂಟ್ಯೂಬ್ ಚಾನಲ್‌ಗಳಲ್ಲಿ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದಾರೆ. ದಯವಿಟ್ಟು ಈ ರೀತಿ ಮಾಡಬೇಡಿ. ತಮ್ಮ ನಡೆಯಿಂದ ಇನ್ನೊಬ್ಬರ ಸಂಸಾರ ಹಾಳು ಮಾಡುವಂತಹ ಸುದ್ದಿಗಳನ್ನು ಮಾಡಬೇಡಿ. ಆ ವ್ಯಕ್ತಿಯ ಮನೆಗೆ ನಾವಿಬ್ಬರೂ ಸಾಕಷ್ಟು ಬಾರಿ ಹೋಗಿದ್ದೇವೆ. ಅವರು ನಮಗೆ ಫ್ಯಾಮಿಲಿ ಸ್ನೇಹಿತರು. ಅವರಿಗೂ ಕುಟುಂಬ, ಮಕ್ಕಳು, ಹೆಂಡತಿ ಇದ್ದಾರೆ. ಈ ರೀತಿ ಸುಳ್ಳು ಸುದ್ದಿಗಳನ್ನು ಕಟ್ಟಿ ಹಬ್ಬಿಸಬೇಡಿ’ ಎಂದು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಮನವಿ ಮಾಡಿಕೊಂಡರು.
‘ನಮ್ಮಿಬ್ಬರ ಜೀವನ ಶೈಲಿ ಬೇರೆ, ಜೀವನವನ್ನು ನೋಡುವ ಮತ್ತು ಅರ್ಥ ಮಾಡಿಕೊಂಡಿರುವ ರೀತಿ ಬೇರೆ. ಇದರಿಂದ ನಮ್ಮಿಬ್ಬರ ನಡುವೆ ಪ್ರತಿದಿನ ಮನಸ್ತಾಪ ಬರುತ್ತಿತ್ತು. ನಾನು ಬೆಳಗ್ಗೆ ಬೇಗ ಏಳುತ್ತಿದ್ದೆ, ನಿವೇದಿತಾ ರಾತ್ರಿ ತಡವಾಗಿ ಮಲಗಿ ಲೇಟಾಗಿ ಏಳುತ್ತಿದ್ದರು. ಇಬ್ಬರಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ . ಆದರೂ ಪರಸ್ಪರ ಅರ್ಥ ಮಾಡಿಕೊಂಡು ಜತೆಯಾಗಿ ಹೋಗುವ ಪ್ರಯತ್ನ ಮಾಡಿದ್ದೆವು. ಆದರೆ ಅದು ಆಗಲಿಲ್ಲ. ಹೀಗಾಗಿ ನಾವಿಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನ ಮಾಡಿಕೊಂಡಿದ್ದೇವೆ. ಇದರ ಹೊರತಾಗಿ ಬೇರೆ ಯಾವುದೇ ಕಾರಣಗಳಿಲ್ಲ. ಮಕ್ಕಳು ಮಾಡಿಕೊಳ್ಳುವ ವಿಚಾರ, ನಿವೇದಿತಾ ನನ್ನಿಂದ ಜೀವನಾಂಶ ಕೇಳಿರುವುದು, ಬೇರೊಬ್ಬರ ಜತೆಗೆ ಸಂಬಂಧ ಇದೆ... ಹೀಗೆ ಕೇಳಿ ಬರುತ್ತಿರುವ ಎಲ್ಲವೂ ಸುಳ್ಳು ಸುದ್ದಿಗಳು. ನಮ್ಮ ಖಾಸಗಿ ಜೀವನ ಮತ್ತು ನಿರ್ಧಾರವನ್ನು ದಯವಿಟ್ಟು ಗೌರವಿಸಿ’ ಎಂದು ಚಂದನ್ ಶೆಟ್ಟಿ ಮನವಿ ಮಾಡಿಕೊಂಡರು.ಪತ್ರಿಕಾಗೋಷ್ಠಿಯಲ್ಲಿ ಇಬ್ಬರೂ ಯಾರ ಹೆಸರನ್ನೂ ಉಲ್ಲೇಖಿಸಲಿಲ್ಲ.