ಸಾರಾಂಶ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಎಬಿಆರ್‌ಕೆ ಯೋಜನೆಗಳ ಕುರಿತ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.
ಕನ್ನಡಪ್ರಭವಾರ್ತೆ, ಚಿತ್ರದುರ್ಗ
ಗಣಿ ಬಾಧಿತ ಪ್ರದೇಶದಲ್ಲಿ ಶ್ವಾಶಕೋಶ ಸೋಂಕುಗಳ ಬಗ್ಗೆ ಎಚ್ಚರ ವಹಿಸಬೇಕು. ಕೆಎಂಇಆರ್‌ಸಿ(ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ) ನಿಧಿಯಡಿ ಜಿಲ್ಲೆಯ ಗಣಿ ಬಾಧಿತ ಪ್ರದೇಶದಲ್ಲಿನ ಆರೋಗ್ಯ ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗುವುದು. ಗಣಿ ಕಂಪನಿಗಳ ಜೊತೆ ಗಣಿ ಬಾಧಿತ ಪ್ರದೇಶದಲ್ಲಿ ಕ್ಷಯರೋಗ ಪತ್ತೆ ಕಾರ್ಯಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಜಿಲ್ಲಾ ಕ್ಷಯರೋಗಾಧಿಕಾರಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನೆ ಹಾಗೂ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಯೋಜನೆಗಳ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಕ್ಷಯರೋಗವು ವಾಸಿಯಾಗಬಹುದಾದ ಖಾಯಿಲೆಯಾಗಿದೆ. ಜನರಲ್ಲಿ ಕ್ಷಯರೋಗ ಬಗ್ಗೆ ಇರುವ ಕಳಂಕ ಭಾವನೆಯನ್ನು ದೂರಗೊಳಿಸಬೇಕು. ಆರಂಭದಲ್ಲಿ ಕ್ಷಯರೋಗ ಪತ್ತೆಯಾದರೆ, ಸೊಂಕು ಹರಡುವುದನ್ನು ತಪ್ಪಿಸಬಹುದು. ಜಿಲ್ಲೆಯಲ್ಲಿ ಕ್ಷಯರೋಗಿಗಳ ಮರಣ ಪ್ರಮಾಣವು ರಾಜ್ಯ ಸರಾಸರಿಗಿಂತ ಹೆಚ್ಚಿದೆ. ಇದನ್ನು ಕಡಿಮೆ ಮಾಡಬೇಕು. ಕ್ಷಯರೋಗ ಪತ್ತೆ ಮನೆ ಮನೆ ಸರ್ವೆಕಾರ್ಯ ಕೈಗೊಳ್ಳುವಂತೆ ಹೇಳಿದರು.
ಕೆಎಂಇಆರ್‌ಸಿ ಅನುದಾನದಲ್ಲಿ ಕ್ಷಯರೋಗ ಪತ್ತೆಗೆ ಬೇಕಾದ ಯಂತ್ರೋಪಕರಣಗಳ ಖರೀದಿಗೆ ಯೋಜನೆ ರೂಪಿಸಿ. ಅಗತ್ಯವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಿಎಸ್‌ಆರ್ ನಿಧಿಯಡಿ ಖಾಸಗಿ ಕಂಪನಿಗಳಿಂದ ಯಂತ್ರೋಪಕರಣ ಪಡೆಯುವಂತೆ ಸೂಚಿಸಿದರು. ಜಿಲ್ಲೆಯಲ್ಲಿ 1024 ಕ್ಷಯರೋಗಿಗಳಿದ್ದು, ಇವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. 2023ನೇ ಸಾಲಿನಲ್ಲಿ 32,735 ಜನರಿಗೆ ಕ್ಷಯರೋಗ ಪತ್ತೆ ಕಾರ್ಯ ಮಾಡಲಾಗಿದೆ. 2024ರ ಜೂನ್ ವರೆಗೆ 27,702 ಜನರಿಗೆ ಕ್ಷಯಪತ್ತೆ ಕಾರ್ಯ ನಡೆಸಲಾಗಿದೆ ಎಂದು ಜಿಲ್ಲಾ ಕ್ಷಯರೋಗಾಧಿಕಾರಿ ಡಾ.ಸುಧಾ.ಸಿ.ಒ ಸಭೆಯಲ್ಲಿ ಮಾಹಿತಿ ನೀಡಿದರು.ಎಬಿಆರ್‌ಕೆ ಯೋಜನೆಯನ್ನು ಸರ್ಮಪಕವಾಗಿ ಅನುಷ್ಠಾನ ಮಾಡಬೇಕು. ಯೋಜನೆ ಫಲಾನುಭವಿಗಳು ಚಿಕತ್ಸೆಗೆ ಬರುವಾಗ ತಪ್ಪದೇ ಆಧಾರ್ ಹಾಗೂ ಪಡಿತರ ಚೀಟಿ ತರುವಂತೆ ಪ್ರಚಾರ ನೀಡಬೇಕು. ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ನಿಗದಿ ಪಡಿಸಿದ ಕೆಲಸದ ವೇಳೆಯಲ್ಲಿ ಆಸ್ಪತ್ರೆಯಲ್ಲಿದ್ದು ರೊಗಿಗಳಿಗೆ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ಆಸ್ಪತ್ರೆ ಹೊರಗಡೆ ರೋಗಿಗಳಿಗೆ ಔಷಧ ಚೀಟಿ ಬರೆದು ಕೊಡಬಾರದು. ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆದವರಿಂದ ನಿಗದಿತ ನಮೂನೆ ರೂಪಿಸಿ ಹಿಮ್ಮಾಯಿತಿ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಸುವರ್ಣ ಆರೋಗ್ಯ ಟ್ರಸ್ಟ್ ಜಿಲ್ಲಾ ಸಂಯೋಜಕ ಚಂದ್ರಶೇಖರ್, ಜಿಪಂ ಉಪಕಾರ್ಯದರ್ಶಿ ಕೆ.ತಿಮ್ಮಪ್ಪ , ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರವೀಂದ್ರ, ಖಾಸಗಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರು ಇದ್ದರು.
ವಿವಿಧ ಆರೋಗ್ಯ ಯೋಜನೆಗಳ ಮಾಹಿತಿ ನೀಡಿ: ಜಿಪಂ ಸಿಇಒ ಎಸ್.ಜೆ ಸೋಮಶೇಖರ್ ಅವರು ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಸೇರಿದಂತೆ ವಿವಿಧ ಆರೋಗ್ಯ ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ಶಿಕ್ಷಣ ಸಂವಹನ ಹಾಗೂ ಜಾಗೃತಿ ಕಾರ್ಯಕ್ರಮ ನಡೆಸುವಂತೆ ತಿಳಿಸಿದರು.