3ಕ್ಕೆ. (ಲೀಡ್‌) ನಾಳೆ ಕುಂದೂರಲ್ಲಿ ಭದ್ರಾ ಅಚ್ಚುಕಟ್ಟು ರೈತರ ಸಭೆ: ಶಾಂತನಗೌಡ

| Published : Aug 08 2025, 01:00 AM IST

ಸಾರಾಂಶ

ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ಅಂತಾ ಬಿಜೆಪಿ ಕೆಲ ಮುಖಂಡರು ಆರೋಪ ಮಾಡಿದ್ದಾರೆ. ಇದರ ಸತ್ಯಾಸತ್ಯತೆ ಏನೆಂಬುದನ್ನು ಅಲ್ಲಿನ ಕಾಮಗಾರಿ ಬಗ್ಗೆ ವಿವರಣೆ ನೀಡಲು ಆ.9ರಂದು ಬೆಳಗ್ಗೆ 11ರಂದು ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಎದುರಿನ ಬಯಲಿನಲ್ಲಿ ರೈತರ ಬೃಹತ್ ಸಭೆ ಕರೆಯಲಾಗಿದೆ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದ್ದಾರೆ.

- 2 ತಿಂಗಳಿನಿಂದ ಬಿಜೆಪಿ ಅಪಪ್ರಚಾರಕ್ಕೆ ಕಾಂಗ್ರೆಸ್ ಶಾಸಕರಿಂದ ತಿರುಗೇಟು ನೀಡಲು ಸಿದ್ಧತೆ - - -

- ಕಾಂಗ್ರೆಸ್ಸಿನಿಂದಲೇ ಏತ ಯೋಜನೆ, ಕೆರೆ ಕಟ್ಟೆಗಳ ನಿರ್ಮಾಣ: ಕೆ.ಎಸ್.ಬಸವಂತಪ್ಪ

- ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಶೀಘ್ರವೇ ಪೂರ್ಣ: ಬಸವರಾಜ ಶಿವಗಂಗಾ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ಅಂತಾ ಬಿಜೆಪಿ ಕೆಲ ಮುಖಂಡರು ಆರೋಪ ಮಾಡಿದ್ದಾರೆ. ಇದರ ಸತ್ಯಾಸತ್ಯತೆ ಏನೆಂಬುದನ್ನು ಅಲ್ಲಿನ ಕಾಮಗಾರಿ ಬಗ್ಗೆ ವಿವರಣೆ ನೀಡಲು ಆ.9ರಂದು ಬೆಳಗ್ಗೆ 11ರಂದು ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಎದುರಿನ ಬಯಲಿನಲ್ಲಿ ರೈತರ ಬೃಹತ್ ಸಭೆ ಕರೆಯಲಾಗಿದೆ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ತಿಂಗಳಿನಿಂದ ಜಿಲ್ಲೆಯಲ್ಲಿ ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ, ಕಾಮಗಾರಿ ಕೈಗೊಂಡಿದ್ದಾರೆಂದು ಬಿಜೆಪಿಯವರು ಆರೋಪ ಮಾಡುತ್ತಿದ್ದರೂ, ನಾವು ಮೌನವಾಗಿದ್ದೆವು. ಇದೀಗ ಅಲ್ಲಿ ಏನಾಗಿದೆ, ಎಲ್ಲಿಂದ ನೀರನ್ನು ಒಯ್ಯಲಾಗುತ್ತಿದೆ ಎಂಬ ಬಗ್ಗೆ ಕುಂದೂರಿನ ರೈತರ ಸಭೆ ಮೂಲಕ ಸತ್ಯಾಂಶ ತಿಳಿಸಲಿದ್ದೇವೆ ಎಂದರು.

ಹೊನ್ನಾಳಿ, ಚನ್ನಗಿರಿ, ಮಾಯಕೊಂಡ ಕ್ಷೇತ್ರಗಳ ರೈತರು ಅಂದಿನ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಾನು, ಶಾಸಕರಾದ ಕೆ.ಎಸ್.ಬಸವಂತಪ್ಪ, ಬಸವರಾಜ ಶಿವಗಂಗಾ ಮೂವರೂ ರೈತ ಸಂಘಟನೆಗಳು, ರೈತ ಮುಖಂಡರನ್ನು ಸಹ ಸಭೆಗೆ ಆಹ್ವಾನಿಸುತ್ತಿದ್ದೇವೆ. ಕರಪತ್ರಗಳು, ಧ್ವನಿವರ್ಧಕಗಳ ಮೂಲಕ ಮೂರೂ ಕ್ಷೇತ್ರಗಳಲ್ಲಿ ರೈತರಿಗೆ ಶನಿವಾರದ ಕುಂದೂರು ಸಭೆಗೆ ಬರುವಂತೆ ಮನವಿ ಮಾಡುತ್ತಿದ್ದೇವೆ. ಕಾರ್ಣೀಕವನ್ನು ಇಲ್ಲಿ ಹೇಳುವುದಲ್ಲ. ಕುಂದೂರು ಶ್ರೀ ಆಂಜನೇಯ ದೇವಸ್ಥಾನ ಸಮ್ಮುಖದಲ್ಲಿ ರೈತರ ಮುಂದೆಯೇ ನಾನು ಕಾಮಗಾರಿ, ಭದ್ರಾ ಕಾಲುವೆ ಬಗ್ಗೆ ಕಾರ್ಣೀಕ ನುಡಿಯುವೆ ಎಂದು ಘೋಷಿಸಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಿಲ್ಲಾ ಸಚಿವರು ಹೀಗೆ ಎಲ್ಲರನ್ನೂ ನಾವು 2 ತಿಂಗಳಿಂದ ಭೇಟಿ ಮಾಡುತ್ತಲೇ ಬಂದಿದ್ದೇವೆ. 15 ದಿನಗಳ ಹಿಂದೆ ಕಾಡಾ ಸಮಿತಿ ಸಭೆಯಲ್ಲೂ ಭಾಗಿಯಾಗಿ ಚರ್ಚಿಸಿದ್ದೇವೆ. ಆದರೂ, ಬಿಜೆಪಿಯ ಕೆಲವರು ನಮ್ಮ ಕಾಂಗ್ರೆಸ್ ಮುಖಂಡರು, ಶಾಸಕರು, ರಾಜ್ಯ ಸರ್ಕಾರವನ್ನು ರೈತವಿರೋಧಿ ಎನ್ನುತ್ತ ನಮ್ಮ ಬುಡಕ್ಕೆ ವಿಷವಿಡಲು ಮುಂದಾದಾಗ ಇನ್ನು ಸಹಿಸಲು ಸಾಧ್ಯವಿಲ್ಲ. ನೇರವಾದ, ಸತ್ಯಕ್ಕೆ ಹತ್ತಿರವಾದ, ವಾಸ್ತವಾಂಶಗಳನ್ನು ಕುಂದೂರಿನ ಸಭೆಯಲ್ಲಿ ಬಿಡಿಸಲಿದ್ದೇವೆ. ಭದ್ರಾ ನದಿ, ಭದ್ರಾ ಡ್ಯಾಂ ಹಿನ್ನೀರಿನಿಂದ ತರೀಕೆರೆ, ಹೊಸದುರ್ಗಕ್ಕೆ ನೀರು ಕೊಡಲಾಗುತ್ತದೆ. ಪ್ರಾಜೆಕ್ಟ್ ಡಿಪಿಆರ್ ಸೇರಿದಂತೆ ಎಲ್ಲವನ್ನೂ ಸಭೆಯಲ್ಲಿ ಬಿಚ್ಚಿಡುತ್ತೇನೆ ಎಂದು ಡಿ.ಜಿ.ಶಾಂತನಗೌಡ ಸ್ಪಷ್ಟಪಡಿಸಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾತನಾಡಿ, ಭದ್ರಾ ನೀರನ್ನು ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ 2 ತಾಲೂಕಿಗೆ ಒಯ್ಯುವ ಕಾಮಗಾರಿ ವಿಚಾರದಲ್ಲಿ ವಿಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ. ಬುಧವಾರ ತಾವು ಮೂವರೂ ಭದ್ರಾ ಡ್ಯಾಂಗೆ ಭೇಟಿ ನೀಡಿದ್ದ ವೇಳೆಯೂ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ, ತಾಲೂಕುಗಳಿಗೆ ನೀರಿನ ತೊಂದರೆ ಆಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದರು.

ರಾಜ್ಯದಲ್ಲಿ ನೀರಾವರಿ ಯೋಜನೆ, ಕರೆ ಕಟ್ಟೆಗಳು, ಚೆಕ್ ಡ್ಯಾಂಗಳ ನಿರ್ಮಾಣವಾಗಿದ್ದರೆ ಅದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದ ಅವಧಿಗಳಲ್ಲಿ ಮಾತ್ರ. ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ, 22 ಕೆರೆಗಳ ಏತ ನೀರಾವರಿ ಯೋಜನೆ, ಜಗಳೂರಿನ 40 ಕೆರೆ ಸೇರಿದಂತೆ ಅನೇಕ ಯೋಜನೆ ಕಾಂಗ್ರೆಸ್ಸಿನ ಬಳುವಳಿ. ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೆರೆಗಳನ್ನು ತುಂಬಿಸಿ, ರೈತರ ಬದುಕನ್ನು ಹಸನುಗೊಳಿಸುವ, ಕುಡಿಯುವ ನೀರಿಗೆ ಸಮಸ್ಯೆ ಆಗಬಾರದೆಂಬ ಕಾಳಜಿಗೆ ನಾವು ಬದ್ಧ ಎಂದು ಹೇಳಿದರು.

ಚನ್ನಗಿರಿ ಶಾಸಕ ಬಸವರಾಜ ವಿ. ಶಿವಗಂಗಾ, ಕಾಂಗ್ರೆಸ್ ಮುಖಂಡರಾದ ಬಸವಾಪಟ್ಟಣ ಪಿ.ಜಿ. ನಾಗರಾಜ, ನಲ್ಕುದುರೆ ವಿಜಯ್ ಗೌಡ ಇತರರು ಇದ್ದರು.

- - -

(ಕೋಟ್‌) ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಯಿಂದ 84 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. 7 ಕೆರೆಗೆ ಪೈಪ್‌ ಲೈನ್ ಅಳವಡಿಸಲಾಗುತ್ತಿದೆ. ಕಳೆದ ಏಳೆಂಟು ವರ್ಷದಿಂದ ಪೈಪ್‌ ಲೈನ್ ನೀರಿನ ಒತ್ತಡಕ್ಕೆ ಅಲ್ಲಲ್ಲಿ ಒಡೆಯುತ್ತಿದ್ದು, ಇನ್ನೂ ಪ್ರಾಯೋಗಿಕವಾಗಿ ನೀರು ಬಿಡಲಾಗುತ್ತಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಂಡು, ಸಾಸ್ವೇಹಳ್ಳಿ ಏತ ಯೋಜನೆಯ ಲಾಭ ರೈತರಿಗೆ, ಜನರಿಗೆ ಆಗಲಿದೆ. - ಬಸವರಾಜ ವಿ.ಶಿವಗಂಗಾ, ಶಾಸಕ, ಚನ್ನಗಿರಿ ಕ್ಷೇತ್ರ

- - -

(ಟಾಪ್‌ ಕೋಟ್‌) ಸಿದ್ದರಾಮಯ್ಯ ಮೊದಲ ಸಲ ಸಿಎಂ ಆದಾಗ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಮಾಜಿ ಸಚಿವ ಎಚ್.ಆಂಜನೇಯ ಪ್ರಯತ್ನದಿಂದ ಜಗಳೂರು, ಭರಮಸಾಗರ ಕ್ಷೇತ್ರಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತರಲಾಯಿತು. ನಾವು ರೈತ ವಿರೋಧಿಯೆಂಬು ಬಿಜೆಪಿಯವರು ಆರೋಪಿಸುವುದು ಸರಿಯಲ್ಲ.

- ಕೆ.ಎಸ್. ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ

- - -

-7ಕೆಡಿವಿಜಿ3, 4.ಜೆಪಿಜಿ:

ದಾವಣಗೆರೆಯಲ್ಲಿ ಗುರುವಾರ ಕಾಂಗ್ರೆಸ್ ಶಾಸಕರಾದ ಡಿ.ಜಿ.ಶಾಂತನಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಸವರಾಜ ವಿ.ಶಿವಗಂಗಾ, ಕೆ.ಎಸ್.ಬಸವಂತಪ್ಪ ಇತರರು ಇದ್ದರು.