ಭದ್ರಾ ಮೇಲ್ದಂಡೆ: ಹಿರಿಯೂರು ಬಂದ್‌ಗೆ ಪೂರ್ಣ ಬೆಂಬಲ

| Published : Feb 22 2024, 01:53 AM IST

ಸಾರಾಂಶ

ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ಹಿರಿಯೂರು ಬಂದ್ ಗೆ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿದ್ದವು. ಬಸ್ಸುಗಳು ಊರು ಪ್ರವೇಶಿಸದೆ ಹೆದ್ದಾರಿಯಲ್ಲಿ ಹಾದು ಹೋದವು. ಇದರಿಂದಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಶಾಲಾ ಕಾಲೇಜುಗಳು, ಕೆಲ ಬ್ಯಾಂಕುಗಳು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಜನರಿಲ್ಲದೇ ಬಿಕೋ ಎಂದವು. ರಸ್ತೆಗಳು ನಿರ್ಜನವಾಗಿ ಕಂಡವು, 9 ಗಂಟೆಗೆ ವೇಳೆಗೆ ನಿಧಾನವಾಗಿ ಹಿರಿಯೂರು ಸ್ತಬ್ಧವಾಯಿತು.

ಹಿರಿಯೂರು: ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ಹಿರಿಯೂರು ಬಂದ್ ಗೆ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿದ್ದವು. ಬಸ್ಸುಗಳು ಊರು ಪ್ರವೇಶಿಸದೆ ಹೆದ್ದಾರಿಯಲ್ಲಿ ಹಾದು ಹೋದವು. ಇದರಿಂದಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಶಾಲಾ ಕಾಲೇಜುಗಳು, ಕೆಲ ಬ್ಯಾಂಕುಗಳು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಜನರಿಲ್ಲದೇ ಬಿಕೋ ಎಂದವು. ರಸ್ತೆಗಳು ನಿರ್ಜನವಾಗಿ ಕಂಡವು, 9 ಗಂಟೆಗೆ ವೇಳೆಗೆ ನಿಧಾನವಾಗಿ ಹಿರಿಯೂರು ಸ್ತಬ್ಧವಾಯಿತು.

ರೈತ ಸಂಘ, ದಸಂಸ, ವಕೀಲರ ಸಂಘ, ಕನ್ನಡಪರ ಸಂಘಟನೆಗಳು ಸೇರಿದಂತೆ 55ಕ್ಕೂ ಹೆಚ್ಚು ಸಂಘಗಳು ಬಂದ್‌ಗೆ ಬೆಂಬಲ ನೀಡಿದ್ದವು. ಬಂದ್ ಅಂಗವಾಗಿ ನಗರ ಗಾಂಧಿ ವೃತ್ತದಲ್ಲಿ ಎರಡು ತಾಸಿಗೂ ಹೆಚ್ಚು ಕಾಲ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಲಾಯಿತು. ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಂತರ ಗಾಂಧಿ ವೃತ್ತದಲ್ಲಿ ಸಭೆ ನಡೆಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ, ಕೇಂದ್ರ ಮೀಸಲಿಟ್ಟ 5300 ಕೋಟಿ ರು. ಹಣ ಬರಲಿಲ್ಲ. ರಾಜ್ಯ ಸರ್ಕಾರ ಭದ್ರಾ ಯೋಜನೆಗೆ ಬಜೆಟ್‌ನಲ್ಲಿ ನಯಾಪೈಸೆ ಕೊಟ್ಟಿಲ್ಲ. ಅಚ್ಚರಿ ಎಂದರೆ ಜವನನಗೊಂಡನ ಹೋಬಳಿಯಲ್ಲಿ ನೀರು ಬರುತ್ತದೆ ಎಂದು ಡ್ರಿಪ್ ಕೆಲಸ ಶುರು ಮಾಡಿದ್ದಾರೆ. ಮೊದಲು ವಿವಿ ಸಾಗರಕ್ಕೆ ನೀರು ತರುವಂತಹ ಯೋಜನೆಗೆ ಹಣ ಹಾಕುವ ಕೆಲಸ ಮಾಡಲಿ. ಈಗಿರುವ 2 ಟಿಎಂಸಿ ಜೊತೆಗೆ ಇನ್ನೂ ಮೂರು ಟಿಎಂಸಿ ನೀರು ಮೀಸಲು ಇಡಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ ಮಾತನಾಡಿ, ಮಧ್ಯ ಕರ್ನಾಟಕ ಭಾಗದ ಬಯಲು ಸೀಮೆಗೆ ನೀರು ಹರಿಸುವ ಹೋರಾಟಕ್ಕೆ 20 ವರ್ಷ ದಾಟಿತು. ಭದ್ರಾ ಯೋಜನೆಗೆ ತೊಡಕಾಗಿರುವ ಅಬ್ಬಿನಹೊಳಲು ಬಳಿಯ ಭೂಸ್ವಾಧೀನ ಆಗಬೇಕು. ಸರ್ಕಾರ ಈ ಸಮಸ್ಯೆ ಬಗೆಹರಿಸದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ. ಹಣ ನೀಡದ ಕಾರಣ ಗುತ್ತಿಗೆದಾರರು ಕೈಬಿಟ್ಟು ಹೋಗಿದ್ದಾರೆ. ಆದ್ದರಿಂದ ಆದಷ್ಟು ಬೇಗ ಹಣ ಮೀಸಲಿಟ್ಟು ಕಾಮಗಾರಿ ಮುಗಿಸಬೇಕು ಎಂದರು.

ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಗಟ್ಟದ ಸಿದ್ದವೀರಪ್ಪ ಮಾತನಾಡಿ, ಕಳೆದ 17 ದಿನಗಳಿಂದ ಜಿಲ್ಲಾ ಕೇಂದ್ರದಲ್ಲಿ ಅನಿರ್ದಿಷ್ಟ ಧರಣಿ ನಡೆಯುತ್ತಿದೆ. ಅಲ್ಲಿಗೆ ಇದುವರೆಗೂ ಒಬ್ಬೇ ಒಬ್ಬ ರಾಜಕಾರಣಿ ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ. ಯೋಜನೆಗೆ ಅನುಮತಿ ನೀಡಿ 17 ವರ್ಷ ಕಳೆದರೂ ಕಾಮಗಾರಿ ಪೂರ್ಣವಾಗಿಲ್ಲ. ಬಿಜೆಪಿಯ 5300 ಕೋಟಿ ರು. ಬಿಡುಗಡೆಯದ್ದು, ಮೋಸದ ಮಾತುಗಳು ಎಂಬುದು ಸಾಬೀತಾಗುತ್ತಿದೆ. ಭದ್ರಾ ಮೇಲ್ದಂಡೆಯ ಹಣ ದುರ್ಬಳಕೆ ಆದ ನಿದರ್ಶನಗಳು ಸಹ ಇವೆ. ಕಾಮಗಾರಿ ಮುಗಿಸದಿದ್ದರೆ ಎಲ್ಲಾ ಪಕ್ಷಗಳಿಗೂ ನಕಾರಾತ್ಮಕ ಉತ್ತರ ಕೊಡಬೇಕಾಗುತ್ತದೆ ಎಂದರು.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಮಾತನಾಡಿ, ಹೋರಾಟವನ್ನು ಉಗ್ರ ರೂಪಕ್ಕೆ ಕೊಂಡೊಯ್ಯುವ ಅನಿವಾರ್ಯತೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ಒದಗಿಸದೆ ಸತಾಯಿಸುತ್ತಿವೆ. ಅಬ್ಬಿನಹೊಳಲು ಗ್ರಾಮದ 1.8 ಕಿಮೀ ಭೂ ಸ್ವಾಧೀನ ಮಾಡಲು ಅಲ್ಲಿನ ಶಾಸಕರು ತೊಡರುಗಾಲು ಹಾಕಿದ್ದಾರೆ. ಮುಂದಿನ ತಿಂಗಳು ಎರಡನೇ ವಾರ ನೀರಾವರಿ ಹೋರಾಟ ಸಮಿತಿಯ ಜಿಲ್ಲಾಮಟ್ಟದ ಸಭೆ ಕರೆದು ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು. ಹೆದ್ದಾರಿ ತಡೆ ಚಳವಳಿ, ಜೈಲ್ ಭರೋಗೂ ಸಿದ್ಧವಿರುವುದಾಗಿ ಹೇಳಿದರು.

ಸಭೆಯ ನಂತರ ಉಪ ವಿಭಾಗಾಧಿಕಾರಿ ಕಾರ್ತಿಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ರಾಜ್ಯ ಸರ್ಕಾರದ ಇಚ್ಚಾಶಕ್ತಿ ಕೊರತೆ ಹಾಗೂ ಕೇಂದ್ರದ ಹುಸಿ ಭರವಸೆಗಳಿಂದಾಗಿ ಕುಂಟುತ್ತಾ ಸಾಗಿದೆ. 22 ಸಾವಿರ ಕೋಟಿ ರುಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿಗೆ ಇದುವರೆಗೂ ರಾಜ್ಯ ಸರ್ಕಾರ ಮಾಡಿದ ವೆಚ್ಚ 10 ಸಾವಿರ ಕೋಟಿ ರು. ದಾಟಿಲ್ಲ. ಕಾಮಗಾರಿ ಆರಂಭವಾಗಿ 20 ವರ್ಷಗಳು ಕಳೆದಿದ್ದು ಇನ್ನೂ ಪೂರ್ಣಗೊಂಡಿಲ್ಲ.

ವಿವಿ ಸಾಗರ ಜಲಾಶಯ ಕಳೆದ 83 ವರ್ಷಗಳ ನಂತರ ತುಂಬಿ ಕೋಡಿ ಬಿದ್ದಿದೆ. ಇದು ಈ ಭಾಗದ ರೈತರಲ್ಲಿ ಸಂತಸ ತಂದಿತ್ತಾದರೂ ಜಲಾಶಯ ನಿತ್ಯ ಬರಿದಾಗುತ್ತಾ ಸಾಗಿರುವುದು ಅತಂಕ ತಂದಿದೆ. ಮೈಸೂರು ಮಾಹರಾಣಿ ತನ್ನ ಬಂಗಾರ ಒತ್ತೆಯಿಟ್ಟು ಜಲಾಶಯ ನಿರ್ಮಿಸಿ ರಾಜಮನೆತನದ ಕಾಳಜಿ ತೋರಿದ್ದರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಿಕೊಂಡ ನಂತರ ರಾಜಸತ್ತೆಯ ಕಾಳಜಿಗಳು ವ್ಯಕ್ತವಾಗಿಲ್ಲ. ರಾಜಸತ್ತೆ ನಿರ್ಮಿಸಿದ ಜಲಾಶಯವ ಭರ್ತಿ ಮಾಡಲು ಇಂದಿನ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರುತ್ತಿಲ್ಲವೆಂದು ಮನವಿಯಲ್ಲಿ ದೂರಲಾಗಿದೆ.

ಭದ್ರಾ ಮೇಲ್ದಂಡೆ ಯೋಜನೆಯಡಿ ಕನಿಷ್ಟ 5 ಟಿಎಂಸಿ ನೀರು ಮೀಸಲಿಡುವಂತೆ ಹಿರಿಯೂರು ತಾಲೂಕಿನ ಜನತೆ ದಶಕಗಳ ಕಾಲ ಹೋರಾಟ ಮಾಡಿದರೂ ಸರ್ಕಾರ ಕಿವಿಗೊಟ್ಟಿಲ್ಲ. ಎರಡು ಟಿಎಂಸಿಯಷ್ಟು ಒದಗಿಸಲಾಗಿದೆ. ಭದ್ರಾ ಅವಕಾಶದ ಜೊತೆಗೆ ಎತ್ತಿನ ಹೊಳೆಯಿಂದಲೂ ವಿವಿ ಸಾಗರಕ್ಕೆ ನೀರು ಹರಿಸುವ ಸಾಧ್ಯತೆಗಳಿದ್ದುವಿವಿ ಸಾಗರಕ್ಕೆ ಕನಿಷ್ಠ ಐದು ಟಿಎಂಸಿ ನೀರು ಬೇಕೆಂದು ಸಮಿತಿ ತನ್ನ ಹಕ್ಕು ಮಂಡಿಸುತ್ತದೆ. ಭದ್ರಾ ಮೇಲ್ದಂಡೆ ಕಾಮಗಾರಿ ಆರಂಭವಾದ ದಶಕದ ನಂತರ ಕೈಗೆತ್ತಿಕೊಳ್ಳಲಾದ ಎತ್ತಿನಹೊಳೆ ಯೋಜನೆ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ ಭದ್ರೆ ಮಾತ್ರ ಕುಂಟುತ್ತಾ ಸಾಗಿದೆ. ಮಧ್ಯ ಕರ್ನಾಟಕ ಪ್ರತಿನಿಧಿಸುತ್ತಿರುವ ರಾಜಕಾರಣಿಗಳು ಈ ಸಂಗತಿ ಅರ್ಥ ಮಾಡಿಕೊಳ್ಳದೇ ಇರುವುದು ವಿಷಾಧನೀಯ. ಶಾಸನ ಸಭೆಯಲ್ಲಿ ಗಟ್ಟಿಯಾಗಿ ಮಾತನಾಡದೆ ಕಿವುಡ, ಮೂಗರಂತೆ ವರ್ತಿಸುತ್ತಿದ್ದಾರೆ. ಜನಾಶಯಗಳಿಗೆ ವಿರುದ್ದವಾಗಿ ನಡೆದುಕೊಳ್ಳುತ್ತಿದ್ದಾರೆ. ಹಸಿ ಸುಳ್ಳುಗಳ ಹೇಳಿ, ಓಟಿನ ರಾಜಕಾರಣ ಮಾಡಿಕೊಂಡು ಅಡ್ಡಾಡುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಲ ಮಂಡಿಸಿದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಬಗ್ಗೆ ಸ್ಪಷ್ಟ ನಿಲುವು ತಾಳದೇ ಇರುವುದು ನೋವಿನ ಸಂಗತಿ. ಕೇಂದ್ರ ಸರ್ಕಾರ 5300 ಕೋಟಿ ರುಪಾಯಿ ಬಿಡುಗಡೆ ಮಾಡುವ ಸಂಬಂಧ ಒತ್ತಡ ಹೇರಲಾಗುವುದು ಎಂಬ ಒಂದು ಸಾಲಿನ ಸಂಗತಿಯ ಬಜೆಟ್ ನಲ್ಲಿ ತೋರಿಸಲಾಗಿದೆ. ಆದರೆ ಭದ್ರಾ ಮೇಲ್ದಂಡೆ ಕಾಮಗಾರಿಯ ಮುಗಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ತನ್ನ ಬದ್ದತೆ ಪ್ರದರ್ಶಿಸಿಲ್ಲ.

ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾ.3ರಂದು ಭದ್ರಾ ಕಾಮಗಾರಿ ವೀಕ್ಷಣೆಗೆ ಆಗಮಿಸುತ್ತಿದ್ದಾರೆ.ಯೋಜನಾ ಪ್ರದೇಶಕ್ಕೆ ಹೆಜ್ಚೆ ಇಡುವ ಮುನ್ನ ಕಾಮಗಾರಿ ಪೂರ್ಣಗೊಳಿಸಲು ಅಗತ್ಯದ ಅನುದಾನ ಘೋಷಣೆ, ಭೂ ಸ್ವಾಧೀನ ಪ್ರಕ್ರಿಯೆ ತೊಡಕು ನಿವಾರಣೆಗಳ ಬಗ್ಗೆ ದೃಢ ನಿರ್ಧಾರ ಕೈಗೊಳ್ಳಬೇಕು. ಕಾಟಾಚಾರದ ಭೇಟಿ ನೀಡಿ ಮತ್ತೆ ಜನರ ಕಣ್ಣೊರೆಸುವ ತಂತ್ರ ಮಾಡಬಾರದೆಂದು ಉಪ ವಿಭಾಗಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಬಂದ್ ಅಂಗವಾಗಿ ನಡೆದ ಪ್ರತಿಭಟನಾ ಮೆರವಣಿಗೆ ಸಭೆಯಲ್ಲಿ ಪಾಲ್ಗೊಂಡವರು: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಚಿತ್ರದುರ್ಗ ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಹಿರಿಯೂರು ತಾಲೂಕು ಅಧ್ಯಕ್ಷ ಬಿ.ಓ.ಶಿವಕುಮಾರ್, ಆರ್.ಬಿ.ನಿಜಲಿಂಗಪ್ಪ, ನಿವೃತ್ತ ಡಿವೈಎಸ್ಪಿಗಳಾದ ಸೈಯದ್ ಇಸಾಕ್, ಮಹಾಂತರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ರಂಗೇನಹಳ್ಳಿ ರಾಮಚಂದ್ರಪ್ಪ, ಜೆಡಿಎಸ್ ಮುಖಂಡರಾದ ಎನ್.ಹನುಮಂತರಾಯಪ್ಪ, ಕಂದಿಕೆರೆ ಯಶೋಧರ, ರವೀಂದ್ರಪ್ಪ, ಕೇಶವಮೂರ್ತಿ, ಮುಖಂಡರಾದ ಎನ್.ಬಸವರಾಜ್, ಹೆಗ್ಗೆರೆ ಮಂಜುನಾಥ್, ಎಂ.ಎಲ್.ಗಿರಿಧರ್, ಕೆ.ರಾಮಚಂದ್ರ, ಎನ್.ಸಿ.ಕುಮಾರ್, ಕರವೇ ರಾಮಕೃಷ್ಣಪ್ಪ, ಜೀವೇಶ್, ಆರನಕಟ್ಟೆ ಶಿವಕುಮಾರ್, ಕೆ.ಟಿ.ಶಿವಕುಮಾರ್, ಎಚ್.ಆರ್.ತಿಮ್ಮಯ್ಯ, ತಿಮ್ಮರಾಜ್, ಸಿದ್ದರಾಮಣ್ಣ, ಬಬ್ಬೂರು ಸುರೇಶ್, ವಿಠ್ಠಲ್ ಪಾಂಡುರಂಗ