ಸಾರಾಂಶ
ಹೊಳಲ್ಕೆರೆ: ಭದ್ರಾ ಮೇಲ್ದಂಡೆ ಯೋಜನೆ ನೀರು ಬಯಲು ಸೀಮೆ ರೈತರ ಬದುಕಿಗೆ ಆಶಾಕಿರಣ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಈಚಗಟ್ಟ ಸಿದ್ಧವೀರಪ್ಪ ಹೇಳಿದರು.
ಚಿತ್ರದುರ್ಗ ಜಿಲ್ಲೆ ರೈತರು ಮುತ್ತಿನಕೊಪ್ಪದಿಂದ ಭದ್ರಾ ಕಾಮಗಾರಿ ವೀಕ್ಷಣೆಗೆ ತೆರಳುವ ಸಂದರ್ಭದಲ್ಲಿ ಹೊಳಲ್ಕೆರೆಯಲ್ಲಿ ರೈತರುನ್ನದ್ದೇಶಿಸಿ ಮಾತನಾಡಿದರು.ಶಾಂತಿ ಸಮಾಧಾನದಿಂದ ಜಿಲ್ಲೆಯ ರೈತರು ಭದ್ರಾ ಕಾಮಗಾರಿ ವೀಕ್ಷಣೆ ಮಾಡಿ ಮುಂದಿನ ಹೋರಾಟದ ರೂಪುರೇಷೆ ಚರ್ಚಿಸಲು ಸಲಹೆ ಮಾರ್ಗದರ್ಶನ ನೀಡಬೇಕು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ 32 ದಿನಗಳ ಕಾಲ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಳಿಸಲು ನಡೆಸಿದ ಸತ್ಯಾಗ್ರಹ ಚಳುವಳಿಗೆ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುತ್ತಿಗೆ ಸಂದರ್ಭ ಕೇಂದ್ರ ಸಚಿವ ಎನ್.ನಾರಾಯಣ ಸ್ವಾಮಿ ಆಗಮಿಸಿ ಕೇಂದ್ರದ 5000 ಕೋಟಿ ರು. ಅನುದಾನ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಅಜ್ಜಂಪುರದಿಂದ ಅಬ್ಬಿನಹೊಳೆ ಮಾರ್ಗದ ಭದ್ರಾ ಮೇಲ್ದಂಡೆ ಕಾಮಗಾರಿ ಚಾನಲ್ ನಿರ್ಮಾಣ ಕಾರ್ಯ ಆದಷ್ಟು ಬೇಗ ಮುಗಿಯಬೇಕಿದೆ ಎಂದರು.
ರೈತರಿಗೆ ನೀರು ಜೀವನಾಧಾರ ಸರ್ಕಾರಗಳು ನೀರು ನೀಡಿದರೆ ಸಾಕಷ್ಟು ಬೆಳೆ ಬೆಳೆದು ರೈತರು ಬಡತನದ ಬೇಗೆಯಿಂದ ಹೊರಬರುತ್ತಾರೆ. 8 ವರ್ಷಗಳಿಂದಲೂ ಕುಂಟುತ್ತಾ ಸಾಗುತ್ತಿರುವ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ ಮಾಡುವ ಮೂಲಕ ರೈತರೆಲ್ಲ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹಾಕಬೇಕಾಗಿದೆ. ಜಿಲ್ಲೆಯ ಎಲ್ಲ ತಾಲೂಕಿನ ರೈತರು ಸಮಾಧಾನದಿಂದ ಕಾಮಗಾರಿ ವೀಕ್ಷಣೆ ಮಾಡಿ ಮುಂದಿನ ಹೋರಾಟದ ರೂಪರೇಷೆ ಚಿಂತಿಸೋಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ, ಕಾರ್ಯದರ್ಶಿ ಬಸವರಾಜಪ್ಪ, ಹೊಳಲ್ಕೆರೆ ತಾಲ್ಲೋಕು ಅಧ್ಯಕ್ಷ ಸತೀಶ್, ನಗರ ರೈತ ಸಂಘ ಅಧ್ಯಕ್ಷ ರಂಗಸ್ವಾಮಿ ಕಾರ್ಯದರ್ಶಿ ಅಜಯ್, ಬಸವನಕುಂಟೆ ನಾಗರಾಜ್, ರಂಗಸ್ವಾಮಿ ತಾಲೂಕಿನ ರೈತ ಸಂಘದ ಪದಾಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು.
ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲೂಕಿನ ರೈತರು ಮುತ್ತಿನಕೊಪ್ಪದಿಂದ ಭದ್ರಾ ಕಾಮಗಾರಿ ವೀಕ್ಷಣೆಗೆ ತೆರಳುವ ಸುಮಾರು 150ಕ್ಕೂ ಹೆಚ್ಚು ರೈತರು ವಾಹನ ಗಳಲ್ಲಿ ತೆರಳಿದರು.