ಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸಲು ಆರಂಭಿಸಿ ಒಂದೂವರೆ ತಿಂಗಳಾಗಿದೆ. ಆದರೂ ಕಾಲುವೆಗಳಲ್ಲಿ ನೀರು ಬಂದಿಲ್ಲವೆಂದು ನೀರಾವರಿ ಇಲಾಖೆ ಎಂಜಿನಿಯರ್‌ಗಳನ್ನುರೈತರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಕುಕ್ಕವಾಡ ಗ್ರಾಮದಲ್ಲಿ ನಡೆದಿದೆ.
- ನಾಲೆಗೆ ನೀರು ಹರಿಸಿ ಒಂದೂವರೆ ತಿಂಗಳಾದರೂ ತಲುಪದ ನೀರು: ಅಧಿಕಾರಿಗಳಿಗೆ ತೇಜಸ್ವಿ ಪಟೇಲ್, ಬಿ.ಎಂ.ಸತೀಶ, ರೈತರ ಗುಟುರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನೀರು ಹರಿಸಲು ಆರಂಭಿಸಿ ಒಂದೂವರೆ ತಿಂಗಳಾಗಿದೆ. ಆದರೂ ಕಾಲುವೆಗಳಲ್ಲಿ ನೀರು ಬಂದಿಲ್ಲವೆಂದು ನೀರಾವರಿ ಇಲಾಖೆ ಎಂಜಿನಿಯರ್‌ಗಳನ್ನುರೈತರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ತಾಲೂಕಿನ ಕುಕ್ಕವಾಡ ಗ್ರಾಮದಲ್ಲಿ ನಡೆದಿದೆ.ಕುಕ್ಕವಾಡ ಗ್ರಾಮದ ಕಬ್ಬು ಬೆಳೆಗಾರರ ಸಂಘದ ಕಚೇರಿಯಲ್ಲಿ ಮಂಗಳವಾರ ಸಂಘದ ಅಧ್ಯಕ್ಷ ತೇಜಸ್ವಿ ವಿ. ಪಟೇಲ್ ಅಧ್ಯಕ್ಷತೆಯಲ್ಲಿ ಭದ್ರಾ ನೀರನ್ನು ಸಮರ್ಪಕವಾಗಿ ಹರಿಸುವ ಬಗ್ಗೆ ನೀರಾವರಿ ಇಲಾಖೆ ಅಧಿಕಾರಿಗಳು, ರೈತರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಕಿಡಿಕಾರಿದರು.
ಸಂಘದ ಅಧ್ಯಕ್ಷ ತೇಜಸ್ವಿ ವಿ. ಪಟೇಲ್ ಮಾತನಾಡಿ, ಭದ್ರಾ ಡ್ಯಾಂನಿಂದ ನೀರು ಬರುತ್ತದೆಂದು ರೈತರು ಸಾಲಗಳ ಮಾಡಿ, ಬತ್ತದ ಬೀಜ ಚೆಲ್ಲಿ ಒಂದೂವರೆ ತಿಂಗಳೇ ಕಳೆಯಿತು. ರೊಳ್ಳೆ ಹೊಡೆದು, ನಾಟಿ ಮಾಡಲು ಕಾಲುವೆಗಳಿಗೆ ಇದುವರೆಗೂ ನೀರೇ ಬಂದಿಲ್ಲ. ಈಗಲೇ ಹೀಗಾದರೆ ಮುಂದೆ ರೈತರ ಗತಿ ಏನು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಉಗ್ರ ಹೋರಾಟ ಖಚಿತ:
ನೀರಿಗಾಗಿ ನಮ್ಮ ರೈತರು ಈಗ ವಿನಮ್ರವಾಗಿಯೇ ನಿಮಗೆ ವಿನಂತಿಸುತ್ತಿದ್ದಾರೆ. ನೀವು ಸಮರ್ಪಕವಾಗಿ ನೀರು ನಿರ್ವಹಣೆ ಮಾಡಿ, ಭದ್ರಾ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಬೇಕು. ಇದೇ ರೀತಿಯ ಅಸಡ್ಡೆ, ಬೇಜವಾಬ್ದಾರಿ ಮುಂದುವರಿಸಿದರೆ, ರೈತರು ಸಹನೆ ಕಳೆದುಕೊಂಡು ಉಗ್ರ ಹೋರಾಟ ನಡೆಸುವುದು ಖಚಿತ ಎಂದು ಎಚ್ಚರಿಸಿದರು.ಕುಕ್ಕುವಾಡದ ಮಾಜಿ ಪ್ರಧಾನ ಡಿ.ಮಲ್ಲೇಶಪ್ಪ ಮಾತನಾಡಿ, ನೀರಾವರಿ ಎಂಜಿನಿಯರ್‌ಗಳು ನೀರನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಏನಾದರೂ ಕೇಳಿದರೆ ತಾವೂ ರೈತರ ಮಕ್ಕಳು ಅಂತಲೇ ಹೇಳಿಕೊಂಡು ಅದೇ ಅನ್ನದಾತ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡಿ, ರೈತರನ್ನು ಸಂಕಷ್ಟಕ್ಕೆ ನೂಕುತ್ತಿದ್ದಾರೆ ಎಂದು ಆರೋಪಿಸಿದರು.
ದಾವಣಗೆರೆ ಜಿಲ್ಲೆಯಿಂದಲೇ ತೊಲಗಿರಿ:ಮುಖಂಡರಾದ ಗೋಣಿವಾಡ ಮಂಜುನಾಥ, ಕುಕ್ಕುವಾಡದ ಡಿ.ಸಿ.ದಿನೇಶ, ಡಿ.ಬಿ.ಶಂಕರ ಮಾತನಾಡಿ, ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ನಮಗೆ ನೀರು ಕೊಡಿ. ಇಲ್ಲದಿದ್ದರೆ ನೀರಾವರಿ ಇಲಾಖೆ ಅಧಿಕಾರಿಗಳು, ಎಂಜಿನಿಯರ್‌ಗಳು ನಿಮ್ಮ ಕಚೇರಿಯನ್ನು ಬಿಟ್ಟು, ನಮ್ಮ ದಾವಣಗೆರೆ ಜಿಲ್ಲೆಯಿಂದಲೇ ತೊಲಗಿರಿ ಎಂದು ಒಕ್ಕೊರಲಿನಿಂದ ತಾಕೀತು ಮಾಡಿದರು.
ಇಲಾಖೆ ಭರವಸೆ:ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಚನ್ನಬಸಪ್ಪ ಪ್ರತಿಕ್ರಿಯಿಸಿ, ದಾವಣಗೆರೆ ಭಾಗದಲ್ಲಿ ಹರಿಯುವ ಭದ್ರಾ ನಾಲೆಯಲ್ಲಿ ಫೆ.18ರಿಂದಲೇ ನಿಗದಿತ ಪ್ರಮಾಣದಲ್ಲಿ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಮತ್ತಿ ಹನುಮಂತಪ್ಪ, ಕಾರಿಗನೂರು ಮಂಜುನಾಥ ಪಟೇಲ್, ಗಂಗಾಧರಪ್ಪ, ಕುಕ್ಕುವಾಡದ ಜಿ.ಬಿ.ಜಗದೀಶ, ಎ.ರಾಜು, ಎಸ್.ಅಂಜಿನಪ್ಪ, ರೈತ ಸಂಘದ ಬಸವರಾಜ, ಮಂಜುನಾಥ, ಹೂವಿನಮಡು ನಾಗರಾಜ, ಶಶಿಕುಮಾರ, ರವಿಕುಮಾರ, ತುರ್ಚಘಟ್ಟ ಶ್ರೀನಿವಾಸ, ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಚನ್ನಬಸಪ್ಪ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ, ಸಹಾಯಕ ಎಂಜಿನಿಯರ್ ತಿಪ್ಪೇಸ್ವಾಮಿ, ಮಧು, ಸೆಕ್ಷನ್ ಆಫೀಸರ್ ರಘುವೀರ ಸೇರಿದಂತೆ ನೂರಾರು ರೈತರು ಸಭೆಯಲ್ಲಿದ್ದರು.- - -
(ಬಾಕ್ಸ್)* ನಿತ್ಯ 180 ಕ್ಯುಸೆಕ್ ನೀರು ಹರಿಸಿ ರೈತ ಮುಖಂಡ ಬಿ.ಎಂ. ಸತೀಶ ಕೊಳೇನಹಳ್ಳಿ ಮಾತನಾಡಿ, ನಮ್ಮ ವಲಯದಲಲಿ ನಿತ್ಯ 180 ಕ್ಯುಸೆಕ್ ನೀರು ಹರಿಯಬೇಕು. ಬಹಳ ಕಡಿಮೆ ಪ್ರಮಾಣದಲ್ಲಿ ನೀರು ಬರುತ್ತಿದೆ. ನೀರು ನಿರ್ವಹಣೆ ಮಾಡಬೇಕಾದ ಸೌಡಿಗಳಿಗೆ ತಿಂಗಳಿಗೆ ಸರಿಯಾಗಿ ಸಂಬಳವನ್ನೇ ಇಲಾಖೆ ಕೊಡುತ್ತಿಲ್ಲ. ಹೀಗಾಗಿ, ಸೌಡಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
- - -* ನೀರು ಕದಿಯುತ್ತಿದ್ದರೂ ಮೌನ
ತಾಪಂ ಮಾಜಿ ಅಧ್ಯಕ್ಷ ಕೆ.ಎನ್. ಮಂಜುನಾಥ ಮಾತನಾಡಿ, ಭದ್ರಾ ನಾಲೆಯಲ್ಲಿ ನೀರು ಹರಿಯುತ್ತಿದ್ದರೂ ಕೆಲವರು ಅಕ್ರಮವಾಗಿ ಪೈಪ್ ಅಳವಡಿಸಿಕೊಂಡು ನೀರು ಕದಿಯುತ್ತಿದ್ದಾರೆ. ಹೀಗಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಕಿವಿ, ಕಣ್ಣು, ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಇಂತಹ ನಿರ್ಲಕ್ಷ್ಯ ಧೋರಣೆ ಅಧಿಕಾರಿಗಳಿಂದ ಅಚ್ಚುಕಟ್ಟು ರೈತರ ಬದುಕಲು ಸಾಧ್ಯವೇ ಇಲ್ಲ ಎಂದರು.- - -
-17ಕೆಡಿವಿಜಿ1, 2.ಜೆಪಿಜಿ:ದಾವಣಗೆರೆ ತಾಲೂಕು ಕುಕ್ಕವಾಡ ಗ್ರಾಮದಲ್ಲಿ ಭದ್ರಾ ಅಚ್ಚುಕಟ್ಟು ರೈತರು, ನೀರಾವರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ರೈತ ಮುಖಂಡ ತೇಜಸ್ವಿ ವಿ.ಪಟೇಲ್ ಮಾತನಾಡಿದರು.