ಸಾರಾಂಶ
ಉಪ್ಪರಿಗೇನಹಳ್ಳಿಯ ಗುಂಡಿಹಳ್ಳದಲ್ಲಿ ನೂತನ ಚೆಕ್‍ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
5 ಕೋಟಿ ರು. ವೆಚ್ಚದ ಚೆಕ್ ಡ್ಯಾಂ ಗೆ ಭೂಮಿ ಪೂಜೆ ನೆರವೇರಿಸಿ ಶಾಸಕ ಚಂದ್ರಪ್ಪ ಭರವಸೆಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಮುಂದಿನ ಆಗಸ್ಟ್ 15ರ ಒಳಗೆ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳಿಗೆ ಭದ್ರಾ ಮೇಲ್ಡಂಡೆಯ ಯೋಜನೆಯಡಿ ನೀರು ತುಂಬಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.ತಾಲೂಕಿನ ಉಪ್ಪರಿಗೇನಹಳ್ಳಿ ಗ್ರಾಮದಲ್ಲಿ 5 ಕೋಟಿ ರು. ವೆಚ್ಚದಲ್ಲಿ ಗುಂಡಿ ಹಳ್ಳದಲ್ಲಿ ನೂತನ ಚೆಕ್‍ಡ್ಯಾಂ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಅಧಿವೇಶನದಲ್ಲಿ ತಾವು ಗಲಾಟೆ ಮಾಡಿದ್ದರಿಂದ ಸರ್ಕಾರ ಆ.15 ರೊಳಗೆ ಕೆರೆ ತುಂಬಿಸುವ ಭರವಸೆ ನೀಡಿದೆ ಎಂದರು.
ಹೊಳಲ್ಕೆರೆ ತಾಲೂಕಿನ ಕೆರೆಗಳ ಬಂದೋಬಸ್ತ್ ಗಾಗಿ 200 ಕೋಟಿ ರು. ಅನುದಾನ ಒದಗಿಸಿದ್ದೇನೆ. ಹಾಲೇನಹಳ್ಳಿ ಬಳಿ ಡ್ಯಾಂ ಕಟ್ಟಿಸಿ ಹಿರಿಯೂರಿನ ವಾಣಿವಿಲಾಸ ಸಾಗರದಿಂದ ನೀರು ತಂದು ತಾಲೂಲೂಕಿನಾದ್ಯಂತ ಪ್ರತಿ ಮನೆ ಮನೆಗೆ ಶುದ್ಧ ಕುಡಿವ ನೀರು ಪೂರೈಸಲು 367 ಕೋಟಿ ರು. ಖರ್ಚು ಮಾಡುತ್ತಿದ್ದೇನೆ. ಚುನಾವಣೆಯಲ್ಲಿ ಮತ ಹಾಕಿದವರು, ಹಾಕದವರು ಎಲ್ಲರನ್ನು ಸಮಾನವಾಗಿ ಕಾಣುವ ಜವಾಬ್ದಾರಿ ನನ್ನ ಮೇಲಿದೆ ಎಂದು ಹೇಳಿದರು.ತೇಕಲವಟ್ಟಿ, ಎನ್.ಜಿ.ಹಳ್ಳಿ, ತಾಳ್ಯ, ದುಮ್ಮಿ, ಅರಿಶಿನಘಟ್ಟ ಸೇರಿ 9 ಕಡೆ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣವಾಗುತ್ತಿದೆ. ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ ದೊಡ್ಡ ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣಕ್ಕಾಗಿ 500 ಕೋಟಿ ರು. ಖರ್ಚು ಮಾಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುವುದು. ಇದರಿಂದ ಎಲ್.ಕೆಜಿಯಿಂದ ಹಿಡಿದು ಪಿಯು ವರೆಗೆ ಒಂದೆ ಕಡೆ ಹಳ್ಳಿಗಾಡಿನ ಮಕ್ಕಳು ಓದಲು ಅನುಕೂಲವಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಯಶೋಧಮ್ಮ, ಉಪಾಧ್ಯಕ್ಷೆ ಬಿ.ರಮ್ಯ ಕೆಂಚೆಗೌಡರು, ಚಂದ್ರಣ್ಣ, ಗ್ರಾಪಂ ಸದಸ್ಯರಾದ ಪ್ರಸನ್ನಕುಮಾರ್, ದ್ಯಾಮಣ್ಣ, ನಟರಾಜ್, ಸುರೇಶ್, ವಿಜಯಮ್ಮ, ಕಲ್ಲೇಶಣ್ಣ, ಸುಬಾನ್ ಇದ್ದರು.