60 ವರ್ಷಗಳಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಮನ ಗೆದ್ದಿರುವ ಭದ್ರಾವತಿ ಆಕಾಶವಾಣೆ

| N/A | Published : Feb 08 2025, 12:34 AM IST / Updated: Feb 08 2025, 12:29 PM IST

60 ವರ್ಷಗಳಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜನಮನ ಗೆದ್ದಿರುವ ಭದ್ರಾವತಿ ಆಕಾಶವಾಣೆ
Share this Article
  • FB
  • TW
  • Linkdin
  • Email

ಸಾರಾಂಶ

  ಭದ್ರಾವತಿ ಆಕಾಶವಾಣಿ ಕೇಂದ್ರ ಒಂದು ಕಾಲದಲ್ಲಿ ಶ್ರೋತೃಗಳ ಮನೆಮಾತಾಗಿತ್ತು. ತಾಂತ್ರಿಕವಾಗಿ ಸಾಕಷ್ಟು ಬೆಳವಣಿಗೆಗಳ ನಡುವೆಯೂ ತನ್ನ ತನವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಕುವೆಂಪು ವಿ.ವಿ ವಿಶ್ರಾಂತ ಕುಲಸಚಿವ ಡಾ. ಶ್ರೀಕಂಠ ಕೂಡಿಗೆ ಪ್ರಶಂಸೆ ವ್ಯಕ್ತಪಡಿಸಿದರು

ಭದ್ರಾವತಿ: ಕಳೆದ 60 ವರ್ಷಗಳಲ್ಲಿ ನೂರಾರು ಉಪಯುಕ್ತ ಹಾಗೂ ಜನಪ್ರಿಯ ಕಾರ್ಯಕ್ರಮಗಳನ್ನು ನೀಡುವ ಮೂಲಕ ಭದ್ರಾವತಿ ಆಕಾಶವಾಣಿ ಕೇಂದ್ರ ಒಂದು ಕಾಲದಲ್ಲಿ ಶ್ರೋತೃಗಳ ಮನೆಮಾತಾಗಿತ್ತು. ತಾಂತ್ರಿಕವಾಗಿ ಸಾಕಷ್ಟು ಬೆಳವಣಿಗೆಗಳ ನಡುವೆಯೂ ತನ್ನ ತನವನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಕುವೆಂಪು ವಿ.ವಿ ವಿಶ್ರಾಂತ ಕುಲಸಚಿವ ಡಾ. ಶ್ರೀಕಂಠ ಕೂಡಿಗೆ ಪ್ರಶಂಸೆ ವ್ಯಕ್ತಪಡಿಸಿದರು.

ಶುಕ್ರವಾರ ನಗರದ ಜೆಪಿಎಸ್ ಕಾಲೋನಿಯ ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಉತ್ತಮ ಅಧಿಕಾರಿಗಳು ಕಾರ್ಯನಿರ್ವಹಿಸುವ ಮೂಲಕ ಜನರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ ಅತ್ಯುತ್ತಮ ನೂರಾರು ಕಲಾವಿದರು ಕಾರ್ಯಕ್ರಮಗಳನ್ನು ನೀಡುವ ಮೂಲಕ ಇಂದಿಗೂ ಶ್ರೋತೃಗಳ ಮನದಾಳದಲ್ಲಿ ಉಳಿದುಕೊಂಡಿದ್ದಾರೆ. 

ಸಾವಿರಾರು ಕಲಾವಿದರು ಈ ಆಕಾಶವಾಣಿ ಕೇಂದ್ರದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ ಎಂದರು. ಬದಲಾದ ಕಾಲಘಟ್ಟದಲ್ಲಿ ಇದೀಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಸವಾಲುಗಳನ್ನು ಆಕಾಶವಾಣಿ ಕೇಂದ್ರ ಎದುರಿಸುವಂತಾಗಿದೆ. ಈ ನಡುವೆಯೂ ಹೊಸ ತಂತ್ರಜ್ಞಾನಗಳಿಗೆ ಹೊಂದಿಕೊಂಡು ಮುನ್ನಡೆಯುತ್ತಿರುವುದು ಬಹಳ ಸಂತೋಷದ ಸಂಗತಿಯಾಗಿದೆ ಎಂದರು. ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಕೆ.ಸಿ.ಶಶಿಧರ್ ಮಾತನಾಡಿ, ದೇಶದಲ್ಲಿ ಕೃಷಿಗೆ ಸಂಬಂಧಿಸಿದಂತೆ ರೈತಬಂಧುಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿ ಸ್ವಾವಲಂಬನೆ ಬದುಕಿಗೆ ಬಹುದೊಡ್ಡ ಕೊಡುಗೆ ಈ ಆಕಾಶವಾಣಿ ಕೇಂದ್ರ ನೀಡಿದೆ ಎಂದರು. 

ಕುವೆಂಪು ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಕೆ.ಆರ್.ಮಂಜುನಾಥ್ ಮಾತನಾಡಿ, ಎಲೆಮರೆಕಾಯಿಯಂತಿರುವ ಎಷ್ಟೋ ಪ್ರತಿಭೆಗಳಿಗೆ ಈ ಆಕಾಶವಾಣಿ ಕೇಂದ್ರ ವೇದಿಕೆಯನ್ನು ಕೊಟ್ಟು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದರಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ ಎಂದರು. 

ಭದ್ರಾವತಿ ಮತ್ತು ಚಿತ್ರದುರ್ಗ ಆಕಾಶವಾಣಿ ಕೇಂದ್ರಗಳ ಕಾರ್ಯಕ್ರಮ ಮುಖ್ಯಸ್ಥ ಎಸ್.ಆರ್ ಭಟ್ ಮಾತನಾಡಿ,ಇನ್ನು ಕೆಲವೇ ದಿನಗಳಲ್ಲಿ ಆಕಾಶವಾಣಿಯ ಪ್ರಸಾರಣ ಸಾಮರ್ಥ್ಯ, ಶಿವಮೊಗ್ಗದಲ್ಲಿ ಸ್ಥಾಪನೆಯಾಗುತ್ತಿರುವ ೧೦ ಕಿಲೋ ವ್ಯಾಟ್ ಸಾಮರ್ಥ್ಯದ ಎಫ್.ಎಂ ಟ್ರಾನ್ಸ್‌ಮೀಟರ್‌ನಿಂದಾಗಿ ಹೆಚ್ಚು ವ್ಯಾಪ್ತಿಯನ್ನು ತಲುಪಲಿದೆ. ಈ ಕಾರ್ಯದಲ್ಲಿ ಸಂಸದ ಬಿ.ವೈ.ರಾಘವೇಂದ್ರರವರ ಶ್ರಮ ಹೆಚ್ಚಿನದ್ದಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನೆಲ್ಲಿಕಟ್ಟೆ ಸಿದ್ದೇಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಿ.ಗೋಪಿನಾಥ್, ಪಿ.ಇ.ಎಸ್ ಶಿಕ್ಷಣ ಸಂಸ್ಥೆಗಳ ಸಮೂಹ ಆಡಳಿತ ಮಂಡಳಿ ಮುಖ್ಯ ಸಂಯೋಜಕ ಡಾ.ಆರ್.ನಾಗರಾಜ್, ಶಿವಮೊಗ್ಗ ಐಎಂಎ ಕಾರ್ಯದರ್ಶಿ ಹಾಗೂ ಸುಬ್ಬಯ್ಯ ಸಮೂಹ ಸಂಸ್ಥೆ ಸಿಇಒ ಡಾ.ವಿನಯ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಂತರ ಕಥಾ ಸ್ವರ್ಧೆಯಲ್ಲಿ ವಿಜೇತರಾದ ದೀಪ್ತಿ ಭದ್ರಾವತಿ, ಶ್ರೇಯ ಕೆ.ಎಂ ಹಾಗೂ ಸಂತೆಬೆನ್ನೂರು ಫೈಜ್ ನಟರಾಜ್ ಮತ್ತು ಪಾಕ ಸ್ಪರ್ಧೆಯಲ್ಲಿ ವಿಜೇತರಾದ ಗಿರಿಜಾ ಹೆಗಡೆ, ಎಂ.ಎನ್.ಸುಶೀಲ, ಡಾ.ಮೈತ್ರೇಯಿ ಅವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು. ಆಕಾಶವಾಣಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದವರಿಗೆ ಮತ್ತು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.