ಭದ್ರಾವತಿ ಮೀನು ಮಾರುಕಟ್ಟೆಗೆ ಇನ್ನೀಗ ಹೈಟೆಕ್‌ ಕಳೆ

| Published : Jun 15 2024, 01:08 AM IST / Updated: Jun 15 2024, 01:09 AM IST

ಸಾರಾಂಶ

10 ಕೋಟಿ ರು. ವೆಚ್ಚದಲ್ಲಿ ಭದ್ರಾವತಿ ನಗರದಲ್ಲಿ ಹೈಟೆಕ್ ಮೀನು ಮಾರುಕಟ್ಟೆಗೆ ಸರ್ಕಾರ ಅಸ್ತು , ಸಿದ್ಧತೆ ನಡೆದಿದೆ. ಮೀನು ಮರಿ ಪಾಲನೆಗೆ ಇಲಾಖೆಯೂ ಸನ್ನದ್ಧವಾಗಿದ್ದು, ಇದರಿಂದಾಗಿ ಮೂಲ ಮೀನು ಸಾಕಾಣಿಕೆ ಹಾಗೂ ಮಾರಾಟಕ್ಕೆ ಅನುಕೂಲವಾಗಿದೆ.

* ಅನಂತಕುಮಾರ್

ಕನ್ನಡಪ್ರಭ ವಾರ್ತೆ ಭದ್ರಾವತಿ

ರಾಜ್ಯ ಸರ್ಕಾರ ನಗರದಲ್ಲಿ ಸುಮಾರು ೧೦ ಕೋ. ರು. ವೆಚ್ಚದಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಅಸ್ತು ಎಂದಿದ್ದು, ಸಿದ್ಧತೆಗಳು ನಡೆದಿವೆ. ಪರಿಣಾಮ ತಾಲೂಕಿನಲ್ಲಿ ಭವಿಷ್ಯದಲ್ಲಿ ಮೀನು ಮಾರುಕಟ್ಟೆಗೆ ಹೆಚ್ಚಿನ ಬೇಡಿಕೆ ಬರಲಿದ್ದು, ಇದಕ್ಕೆ ಮೀನುಗಾರಿಕೆ ಇಲಾಖೆ ಸಹ ಪೂರಕವಾಗಿ ಸನ್ನದ್ಧವಾಗಬೇಕಿದೆ.

ಇದರಿಂದಾಗಿ ಮೂಲ ಮೀನು ಸಾಕಾಣಿಕೆ ಹಾಗೂ ಮಾರಾಟ, ಸಾಗಾಣಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರಿಗೆ ಮತ್ತು ಮೀನು ಕೃಷಿ ಕೈಗೊಳ್ಳುತ್ತಿರುವ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆದರೆ ಹಲವಾರು ಕಾರಣಗಳಿಂದ ಈ ವ್ಯಾಪ್ತಿಯಲ್ಲಿ ಪ್ರಸ್ತುತ ನಿರೀಕ್ಷಿತ ಮಟ್ಟದಲ್ಲಿ ಮೀನು ಉತ್ಪಾದನೆ ಸಾಧ್ಯವಾಗುತ್ತಿಲ್ಲ.

ಮೀನು ಸಾಕಾಣಿಕೆ, ಮಾರಾಟ ಮತ್ತು ಸಾಗಾಣಿಕೆ ಹಾಗೂ ಕೃಷಿ ಮೀನುಗಾರಿಕೆಯಿಂದ ಒಟ್ಟು ಸುಮಾರು ೬ ಸಾವಿರಕ್ಕೂ ಹೆಚ್ಚು ಜನರು ಬದುಕು ಕಟ್ಟಿಕೊಂಡಿ ದ್ದಾರೆ. ಪ್ರಸ್ತುತ ಹೊರ ರಾಜ್ಯದ ಮೀನು ಸ್ಥಳೀಯ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸಿದ್ದು, ಬಹಳಷ್ಟು ಜನರ ಬದುಕಿಗೆ ಆಧಾರವಾಗಿದೆ. ಇದನ್ನು ರಾಜ್ಯ ಸರ್ಕಾರ ಮನಗಂಡು ಈ ವ್ಯಾಪ್ತಿಯಲ್ಲಿ ಮೀನು ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.

ಇನ್ನು, ಸಹಕಾರ ಸಂಘದಿಂದ ಅಧಿಕೃತವಾಗಿ ನೋಂದಾಯಿಸಿಕೊಂಡಿರುವ ಭದ್ರಾ ಮೀನುಗಾರರ ಸಹಕಾರ ಮತ್ತು ತುಂಗಾ-ಭದ್ರ ಮೀನುಗಾರರ ಸಹಕಾರ ಈ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ನಡುವೆ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರು ಸಹ ಮೀನು ಸಾಕಾಣಿಕೆ ಸಹಕಾರ ಸಂಘ ರಚಿಸಿಕೊಂಡಿ ದ್ದಾರೆ. ತಾಲೂಕಿನಲ್ಲಿ ಮೀನುಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು ೪೭ ಕೆರೆಗಳಿದ್ದು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಸುಮಾರು ೩೦೦ ಕೆರೆಗಳಿವೆ. ಕೆರೆ ಗಳಲ್ಲಿ ಮೀನು ಸಾಕಾಣಿಕೆಗೆ ಅವಕಾಶ ಕಲ್ಪಿಸಿಕೊಡಲಾಗಿದ್ದು, ಮೀನುಗಾರಿಕೆ ಇಲಾಖೆ ತನ್ನ ಅಧೀನದಲ್ಲಿರುವ ಕೆರೆಗಳಲ್ಲಿ ಗುತ್ತಿಗೆ ಮೂಲಕ ಮೀನು ಸಾಕಾಣಿಕೆಗೆ ಅವಕಾಶ ನೀಡುತ್ತಿದೆ. ಸರ್ಕಾರವೂ ಹಲವಾರು ಯೋಜನೆಗಳನ್ನು ರೂಪಿಸಿದ್ದರೂ ಸಹ ಈ ವ್ಯಾಪ್ತಿಯಲ್ಲಿ ಉತ್ಪಾದನೆ ಪ್ರಮಾಣ ಹೆಚ್ಚಾಗುತ್ತಿಲ್ಲ.

ಇನ್ನು, ಮೀನುಗಾರಿಕೆ ಇಲಾಖೆ ತಾಲೂಕಿನ ಬಿಆರ್‌ಪಿಯಲ್ಲಿ ಅತಿದೊಡ್ಡ ಮೀನು ಮರಿ ಉತ್ಪಾದನೆ ಹಾಗೂ ತರಬೇತಿ ಕೇಂದ್ರ ಹೊಂದಿದ್ದು, ಸಾಕಾಣಿಕೆ ವೃತ್ತಿಯಲ್ಲಿ ತೊಡಗಿರುವವರು ಹಾಗೂ ರೈತರು ಈ ಕೇಂದ್ರದಿಂದ ಮೀನು ಮರಿಗಳನ್ನು ಪಡೆದು ಕೊಳ್ಳಬಹುದಾಗಿದೆ. ಅಲ್ಲದೆ ಇಲಾಖೆಯ ಸ್ಥಳೀಯ ಕೇಂದ್ರಗಳಲ್ಲಿ ಮೀನು ಮರಿಗಳನ್ನು ತಂದು ಸುಮಾರು ೪೫ ರಿಂದ ೬೦ ದಿನಗಳವರೆಗೆ ಪಾಲನೆ ಮಾಡುವ ಮೂಲಕ ಬಿತ್ತನೆಗೆ ನೀಡಲಾಗುತ್ತಿದೆ. ವರ್ಷದಲ್ಲಿ ಸುಮಾರು ೧೦ ತಿಂಗಳ ಕಾಲ ಈ ಕಾರ್ಯ ನಡೆಯುತ್ತಿದೆ.

ಮೀನು ಉತ್ಪಾದನೆಯಲ್ಲಿ ಇಲಾಖೆ ಪಾತ್ರ ಹೆಚ್ಚಿನದ್ದಾಗಿದ್ದು, ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ಸಮರ್ಪಕವಾಗಿ ತಲುಪಿಸುವ ಜೊತೆಗೆ ಈ ಭಾಗದಲ್ಲಿ ಮೀನುಗಾರಿಕೆಗೆ ಸಂಬಂಧಿಸಿದಂತೆ ಆಧುನಿಕ ಕೌಶಲ್ಯ ತರಬೇತಿಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ನಿರುದ್ಯೋಗಿ ಯುವ ಸಮುದಾಯವನ್ನು ಇಲಾಖೆ ಸೆಳೆಯಬೇಕಾಗಿದೆ. ಇದಕ್ಕೆ ಪೂರಕವಾಗಿ ಕೃಷಿ ಹಾಗೂ ನೀರಾವರಿ ಸೇರಿದಂತೆ ಇತರೆ ಇಲಾಖೆಗಳು ಸಹ ಕೈಜೋಡಿಸಬೇಕಾಗಿದೆ. ಇನ್ನು, ಈ ಭಾಗದಲ್ಲಿ ಮೀನು ಉತ್ಪಾದನೆ ಪ್ರಮಾಣ ಕಡಿಮೆ ಇದ್ದು, ಪ್ರಸ್ತುತ ಆಂಧ್ರ ಮೀನು ಇಲ್ಲಿ ಮೂಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರ ಬದುಕಿಗೆ ಆಧಾರ ವಾಗಿದೆ. ಮೀನು ಮಾರಾಟ ಹಾಗೂ ಸಾಗಾಣಿಕೆ ವೃತ್ತಿಯಲ್ಲಿ ತೊಡಗಿರುವವರಿಗೆ ಮೂಲ ಸೌಕರ್ಯಗಳ ಕೊರತೆ ಎದುರಾಗಿದ್ದು, ಇದೀಗ ಸರ್ಕಾರ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಮುಂದಾಗಿರುವುದು ಹೆಚ್ಚಿನ ಅನುಕೂಲವಾಗಲಿದೆ ಎನ್ನುತ್ತಾರೆ ಭದ್ರಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಮುರುಗನ್‌.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮೋಹನ್ ಮಾತನಾಡಿ, ಇಲಾಖೆ ವತಿಯಿಂದ ಮೀನು ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇಲಾಖೆಯ ಅಧೀನದಲ್ಲಿರುವ ಕೆರೆಗಳಲ್ಲಿ ಮೀನು ಸಾಕಾಣಿಕೆಗೆಯಲ್ಲಿ ಹಾಗೂ ಕೃಷಿ ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಅಗತ್ಯವಿರುವ ಮೀನು ಮರಿಗಳನ್ನು ಪೂರೈಸಲಾಗುತ್ತಿದೆ. ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರಿಗಾಗಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸಮರ್ಪಕವಾಗಿ ತಲುಪಿಸಲಾಗುತ್ತಿದೆ ಎಂದರು.