ಭದ್ರಾವತಿ: ಅದ್ಧೂರಿಯಾಗಿ ನಡೆದ ವೀರಾಂಜನೇಯ ಸ್ವಾಮಿ ರಥೋತ್ಸವ

| Published : Mar 16 2025, 01:49 AM IST

ಸಾರಾಂಶ

ಭದ್ರಾವತಿ: ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಭದ್ರಾವತಿ: ಶ್ರೀ ಕ್ಷೇತ್ರ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ರಥೋತ್ಸವ ಶನಿವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಪ್ರತಿ ವರ್ಷದಂತೆ ಈ ಬಾರಿ ಸಹ ದೇವಸ್ಥಾನದ ಆವರಣದಿಂದ ಆರಂಭಗೊಂಡ ರಥೋತ್ಸವ ಮಧ್ಯಾಹ್ನ ೧೨.೪೫ಕ್ಕೆ ಗ್ರಾಮದ ಅಗಸೆ ಬಾಗಿಲಿನವರೆಗೆ ಬಂದು ತಲುಪಿತು.

ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ಸ್ವಾಮಿಗೆ ಜಯಘೋಷಗಳನ್ನು ಹಾಕಿದರು. ಭಜನಾ ಮಂಡಳಿ ಸದಸ್ಯರಿಂದ ಭಜನೆ ನಡೆಯಿತು. ಸ್ವಾಮಿ ಪ್ರತಿಷ್ಠಾಪನೆಗೊಂಡ ಅಲಂಕೃತ ಭವ್ಯ ರಥಕ್ಕೆ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಅಲ್ಲದೆ ಓಂಕಾರ ಚಿತ್ತಾರ ಹಾಗೂ ಆಯೋಧ್ಯೆ ಶ್ರೀರಾಮನ ಬಿಲ್ಲು-ಬಾಣ ಬಿಡಿಸಿ ಕರ್ಪೂರ ಹಚ್ಚಿ ಭಕ್ತಿಯಿಂದ ಕುಣಿದು ಸಂಭ್ರಮಿಸಲಾಯಿತು.

ರಥೋತ್ಸವ ನಂತರ ಅನ್ನ ಸಂತರ್ಪಣೆ ನೆರವೇರಿತು. ಅಲ್ಲದೆ ಸೇವಾಕರ್ತರಿಂದ ಮಜ್ಜಿಗೆ, ಪಾನಕ, ಕಲ್ಲು ಸಕ್ಕರೆ ಸೇರಿದಂತೆ ಇನ್ನಿತರೆ ಪ್ರಸಾದ ವಿತರಣೆ ನಡೆಯಿತು.

ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು, ಸುಣ್ಣದಹಳ್ಳಿ, ಮಾರುತಿ ನಗರ, ಮೊಸರಹಳ್ಳಿ, ತಾಷ್ಕೆಂಟ್ ನಗರ, ಎರೇಹಳ್ಳಿ, ಆನೆಕೊಪ್ಪ, ಬಾರಂದೂರು, ಉಜ್ಜನಿಪುರ, ಕಾಗದನಗರ, ಜೆಪಿಎಸ್ ಕಾಲೋನಿ ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು.