ಸಾರಾಂಶ
ಜಗಳೂರಿನ 18423 ಹೆಕ್ಟೇರಿಗೆ ಮೈಕ್ರೋ ಇರಿಗೇಷನ್ । 9 ಕೆರೆಗಳಿಗೆ 2.4 ಟಿಎಂಸಿ ನೀರು ಬಳಕೆ । ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ
ಚಿಕ್ಕಪ್ಪನಹಳ್ಳಿ ಷಣ್ಮುಖಕನ್ನಡಪ್ರಭ ವಾರ್ತೆ ಚಿತ್ರದುರ್ಗ
ದೇಶದಲ್ಲಿಯೇ ಅಪರೂಪದ ಕೊಂಡು ಕುರಿಗಳ ತಳಿ ಹೊಂದಿರುವ ಜಗಳೂರು ತಾಲೂಕಿನಲ್ಲಿ ಭದ್ರೆ ಕೇವಲ ಕಲರವ ಸ್ವರೂಪ ಪಡೆದಿದ್ದಾಳೆಯೇ ವಿನಹ ರಭಸವನ್ನೇನು ಸೃಷ್ಟಿಸಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಡಿ ಕನಿಷ್ಠವೆಂದರೂ ಶೇ.10 ರಷ್ಟಾದರೂ ನೀರಿನ ಪಾಲು ಪಡೆಯಬೇಕಿದ್ದ ಜಗಳೂರು ಶೇ.7ಕ್ಕೆ ಸೀಮಿತವಾಗಿ ಜನ ಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯ ಸ್ಪಷ್ಟವಾಗಿ ದಾಖಲು ಮಾಡಿದೆ. ಆಳುವ ಸರ್ಕಾರಗಳ ಮಲತಾಯಿ ಧೋರಣೆ ಸಾಬೀತುಪಡಿಸಿದೆ.ಭದ್ರಾ ಮೇಲ್ದಂಡೆ ವ್ಯಾಪ್ತಿಯ ಜಗಳೂರು, ಮೊಳಕಾಲ್ಮುರು, ಚಳ್ಳಕೆರೆ ತಾಲೂಕುಗಳು ಬರಪೀಡಿತ ಪ್ರದೇಶದ ಪಟ್ಟಿಯಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಪ್ರತಿ ಮೂರು ವರ್ಷಕ್ಕೊಮ್ಮೆ ಇಲ್ಲಿನ ರೈತಾಪಿ ಜನರ ಅನ್ನದ ತಟ್ಟೆಯಲ್ಲಿ ಬರದ ತುತ್ತುಗಳು ಗ್ಯಾರಂಟಿ ಅನ್ನುವಷ್ಟರ ಮಟ್ಟಿಗೆ ಕರಾಳ ವಾಸ್ತವತೆ ಇದ್ದು ವರ್ಷದಿಂದ ವರ್ಷಕ್ಕೆ ವಿಸ್ತೃತ ಸ್ವರೂಪ ಪಡೆದುಕೊಂಡು ಸಾಗಿದೆ.
ನಂಜುಂಡಪ್ಪ ವರದಿ ಪ್ರಕಾರ ಜಗಳೂರು ಅತೀ ಹಿಂದುಳಿದ ತಾಲೂಕಿನ ಜೊತೆಗೆ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶವೆಂಬ ಹಣೆಪಟ್ಟಿ ಅಂಟಿಸಿಕೊಂಡಿದೆ. ಶೇ.75 ರಷ್ಟು ರೈತರು ಮಳೆಯಾಶ್ರಿತ ಕೃಷಿಕರು. ಅಂತರ್ಜಲ ಕಡಿಮೆಯಿರುವ ಕಾರಣ ಪ್ಲೋರೈಡ್ ಸಮಸ್ಯೆ ತಾಲೂಕನ್ನು ಇನ್ನಿಲ್ಲದಂತೆ ಬಾಧಿಸುತ್ತಿದೆ.ಭದ್ರಾ ಮೇಲ್ದಂಡೆಯಡಿ ಜಗಳೂರು ಪ್ರಾಂತ್ಯಕ್ಕೆ ನೀರು ನೀಡಲು ಪ್ರತ್ಯೇಕ ಶಾಖಾ ಕಾಲುವೆ ಸೃಷ್ಟಿಸಲಾಗಿದ್ದರೂ ಅದು ಕೊಳವೆ ಮಾರ್ಗ ಎನ್ನುವುದು ವಿಶೇಷ. ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಬಳಿ ಇರುವ ಚಿತ್ರದುರ್ಗ ತೆರೆದ ಶಾಖಾ ಕಾಲುವೆ 120 ಕಿಮೀ ಚೈನೇಜ್ ಬಳಿಯಿಂದ ಜಗಳೂರು ಶಾಖಾ ಕಾಲುವೆ ಆರಂಭವಾಗುತ್ತದೆ. 2.15 ಮೀಟರ್ ಸುತ್ತಳತೆಯ ಪೈಪ್‌ಲೈನ್ ಮೂಲಕ ಸಂಗೇನಹಳ್ಳಿ ಕೆರೆಗೆ ನೀರು ಒಯ್ಯಲಾಗುತ್ತದೆ. ಸಂಗೇನಹಳ್ಳಿ ಬಳಿ ಬಿದರೆಕೆರೆ, ಮತ್ತೊಂದು ದೊಣೆಹಳ್ಳಿ ಕಡೆಗೆ ಪೈಪ್‌ಲೈನ್ ಕಾಲುವೆ ಕವಲು ಒಡೆಯುತ್ತದೆ. ಬಿದರಕೆರೆಯಿಂದ ಜಗಳೂರು ಟೌನ್ ವರೆಗೂ ಮೈಕ್ರೋ ಇರಿಗೇಷನ್ ಮೂಲಕ ಜಮೀನುಗಳಿಗೆ ನೀರುಣಿಸಲಾಗುತ್ತದೆ.
ಜಗಳೂರು ತಾಲೂಕಿನ 9 ಕೆರೆಗಳಿಗೆ ನೀರು ತುಂಬಿಸಲು ಹಾಗೂ 62 ಹಳ್ಳಿಗಳ 18423 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಗುರುತ್ವಾಕರ್ಷಣೆ ಪೈಪ್‌ಲೈನ್ ಮುಖಾಂತರ ನೀರು ಹರಿಯಲಿದೆ.ಅಚ್ಚುಕಟ್ಟು ಪ್ರದೇಶದಲ್ಲಿ ಪ್ರತಿ 500 ಹೆಕ್ಟೇರ್ ಪ್ರದೇಶಕ್ಕೆ ಒಂದು ವಲಯವನ್ನಾಗಿ ವಿಂಗಡಿಸಿ, ಪಂಪ್ ಹೌಸ್ ನಿರ್ಮಾಣ ಮಾಡಿ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಇದಕ್ಕಾಗಿ 38 ಪಂಪ್ ಹೌಸ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ.
ಭದ್ರಾ ಮೇಲ್ದಂಡೆ ವ್ಯಾಪ್ತಿಗೆ ಬರುವ ಜಗಳೂರಿನ 9 ಕೆರೆಗಳುಸಂಗೇನಹಳ್ಳಿ, ಜಮ್ಮಾಪುರ, ನಿಟ್ಟೂರು, ಬಿದರಕೆರೆ, ರಸ್ತೆ ಮಾಕುಂಟೆ,ಕೊರಟಿಕೆರೆ, ಮೇದಗಿನಕೆರೆ,ಜಗಳೂರು, ಭರಮ ಸಮುದ್ರ.
ಭದ್ರಾ ಮೇಲ್ಡಂಡೆಯಡಿ ನೀರು ಹಂಚಿಕೆ ಮಾಡುವಾಗಲೇ ಜಗಳೂರಿಗೆ ಘೋರ ಅನ್ಯಾಯ ಮಾಡಲಾಗಿದೆ. ಬಾಯಿ ಇದ್ದವರು ಬಡಿದುಕೊಂಡರು ಅನ್ನುವ ಹಾಗೆ ಒಂದಿಷ್ಟು ದನಿ ಇರುವ ತಾಲೂಕಿನವರು ಹೆಚ್ಚಿಗೆ ನೀರು ಪಡೆದಿದ್ದಾರೆ. ಭವಿಷ್ಯದಲ್ಲಿ ಕೃಷ್ಣಾ ಕೊಳ್ಳದಲ್ಲಿ ಲಭ್ಯವಾಗುವ ಹೆಚ್ಚುವರಿ ನೀರನ್ನು ಜಗಳೂರು ತಾಲೂಕಿಗೆ ಹಂಚಿಕೆ ಮಾಡಬೇಕು. ದ್ರೋಹ ಮಾಡಬಾರದು.ಜಗಳೂರು ಯಾದವರೆಡ್ಡಿ, ಚಿಂತಕ, ಭದ್ರಾ ಮೇಲ್ದಂಡೆ ಹೋರಾಟಗಾರ.