ಭಾಗಮಂಡಲ ಮೇಲು ಸೇತುವೆ ವಾಹನ ಸಂಚಾರಕ್ಕೆ ಮುಕ್ತ

| Published : May 04 2024, 12:34 AM IST

ಭಾಗಮಂಡಲ ಮೇಲು ಸೇತುವೆ ವಾಹನ ಸಂಚಾರಕ್ಕೆ ಮುಕ್ತ
Share this Article
  • FB
  • TW
  • Linkdin
  • Email

ಸಾರಾಂಶ

ಭಾಗಮಂಡಲದಲ್ಲಿ ನಿರ್ಮಾಣವಾಗಿರುವ ಕೊಡಗಿನ ಏಕೈಕ ಮೇಲು ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ. ಸುಮಾರು ಆರು ವರ್ಷಗಳ ಬಳಿಕ ಕಾಮಗಾರಿ ಮುಕ್ತಾಯಗೊಳ್ಳುತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇಲು ಸೇತುವೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಅತಿ ಹೆಚ್ಚು ಮಳೆ ಬಂದ ಸಂದರ್ಭ ದ್ವೀಪವಾಗಿ ಇಡೀ ಊರಿನ ಸಂಪರ್ಕ ಕಳೆದುಕೊಳ್ಳುವುದರೊಂದಿಗೆ ಗ್ರಾಮಸ್ಥರ ಓಡಾಡಕ್ಕೆ ತೊಂದರೆಯಾಗುತ್ತಿದ್ದ ಭಾಗಮಂಡಲದಲ್ಲಿ, ಈ ಬಾರಿಯ ಮಳೆಗಾಲಕ್ಕೆ ಜನರಿಗೆ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ.

ಭಾಗಮಂಡಲದಲ್ಲಿ ನಿರ್ಮಾಣವಾಗಿರುವ ಕೊಡಗಿನ ಏಕೈಕ ಮೇಲು ಸೇತುವೆ ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ.

ಸುಮಾರು ಆರು ವರ್ಷಗಳ ಬಳಿಕ ಕಾಮಗಾರಿ ಮುಕ್ತಾಯಗೊಳ್ಳುತ್ತಿದೆ. ಒಂದಷ್ಟು ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ವಾಹನಗಳ ಸಂಚಾರಕ್ಕೆ ಈಗಾಗಲೇ ಮೇಲು ಸೇತುವೆಯಲ್ಲಿ ಅವಕಾಶ ಮಾಡಲಾಗಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇಲು ಸೇತುವೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.

ಭಾಗಮಂಡಲದಲ್ಲಿ ಮೇಲುಸೇತುವೆ ನಿರ್ಮಾಣದಿಂದಾಗಿ ಈ ಬಾರಿಯ ಮಳೆಗಾಲದಲ್ಲಿ ಈ ಭಾಗದ ಜನರಿಗೆ ತುಂಬಾ ಅನುಕೂಲವಾಗಿದೆ. ಭಾರಿ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಭಾಗಮಂಡಲ ಜಲಾವೃತವಾಗುವುದು ಸಾಮಾನ್ಯ. ತ್ರಿವೇಣಿ ಸಂಗಮ ಮುಳುಗಡೆಯಾಯಿತೆಂದರೆ ತಲಕಾವೇರಿ, ಕೋರಂಗಾಲ, ಅಯ್ಯಂಗೇರಿ, ನಾಪೋಕ್ಲು ಮತ್ತು ಚೇರಂಗಾಲ ಸೇರಿದಂತೆ ಹಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತವೆ. ಇದರಿಂದ ಈ ಭಾಗದ ನಿವಾಸಿಗಳು ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಅನುಭವಿಸುತ್ತಾರೆ. ಸೇತುವೆ ಇತಿಹಾಸ:

2018ರಿಂದ ಈ ಭಾಗದಲ್ಲಿ ಪ್ರವಾಹ ಮತ್ತು ಭೂಕುಸಿತ ಸಾಮಾನ್ಯವಾಗಿದೆ. 2018ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ. ಜಾರ್ಜ್‌ ಭಾಗಮಂಡಲದಲ್ಲಿ ಮೇಲ್ಸೇತುವೆ ಮಾಡುವುದಾಗಿ ಘೋಷಿಸಿದ್ದರು.

ನಂತರ ಸುಮಾರು ರು.34 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಒಂದು ವರ್ಷದೊಳಗೆ ಮುಗಿಯಬೇಕಾಗಿದ್ದ ಮೇಲ್ಸೇತುವೆ ಕಾಮಗಾರಿ ಆರು ವರ್ಷ ಕಳೆದರೂ ಕೂಡ ಪೂರ್ಣಗೊಂಡಿರಲಿಲ್ಲ‌. ಗುತ್ತಿಗೆದಾರರು ಕಾಮಗಾರಿ ವಿಳಂಬ ಮಾಡುತ್ತಿದ್ದರು.

2019 ರಲ್ಲಿ ಕೋರಂಗಾಲದಲ್ಲಿ ಭೂಕುಸಿತವಾಗಿ ಒಂದೇ ಸ್ಥಳದಲ್ಲಿ 5 ಜನರು ಭೂಸಮಾಧಿಯಾಗಿದ್ದರು. ಈ ದುರ್ಘಟನೆ ಸಂಭವಿಸಿದ ಸ್ಥಳವನ್ನು ತಲುಪಬೇಕಾಗಿದ್ದ ರಕ್ಷಣಾ ಪಡೆಗಳು, ಸ್ಥಳೀಯರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.

ರಸ್ತೆ ಮುಳುಗಡೆಯಾಗಿದ್ದರಿಂದ ಯಾವುದೇ ವಾಹನಗಳ ಓಡಾಟವೂ ಸಾಧ್ಯವಾಗಿರಲಿಲ್ಲ. 2020 ರ ಆಗಸ್ಟ್ ತಿಂಗಳಲ್ಲೂ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದುಬಿದ್ದಿತ್ತು. ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಮತ್ತು ಕುಟುಂಬದ ಐವರು ಭೂ ಸಮಾಧಿಯಾಗಿದ್ದರೂ. ಆಗಲೂ ಕೂಡ ಬಾರಿ ಮಳೆ ಸುರಿಯುತ್ತಿದ್ದರಿಂದ ಭಾಗಮಂಡಲದ ತ್ರಿವೇಣಿ ಸಂಗಮ ಮುಳುಗಡೆಯಾಗಿತ್ತು. ಭಾಗಮಂಡಲದಿಂದ ತಲಕಾವೇರಿವರೆಗೆ ಹಲವು ಕಡೆಗಳಲ್ಲಿ ಭೂಕುಸಿತವಾಗಿದ್ದರಿಂದ ಜೆಸಿಬಿ ಮತ್ತು ಇತರೆ ವಾಹನಗಳನ್ನು ತೆಗೆದುಕೊಂಡ ಹೋಗಿ ರಸ್ತೆ ತೆರವು ಮಾಡಲು ಪರದಾಡಬೇಕಾಗಿತ್ತು. ಹೀಗಾಗಿ ಭಾಗಮಂಡಲದಲ್ಲಿದ್ದ ಪ್ರವಾಹದ ನೀರನ್ನು ದಾಟಿ ಮುಂದೆ ಹೋಗಲು ಎರಡು ದಿನಗಳೇ ಕಾಯಬೇಕಾಗಿತ್ತು.

2018ರಲ್ಲಿ ಮೇಲ್ಸೇತುವೆ ಕಾಮಾಗಾರಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತಾದರೂ ಆರು ವರ್ಷವಾದರೂ ಪೂರ್ಣಗೊಂಡಿರಲಿಲ್ಲ. ಮಳೆಯಿಂದ ಕಾಮಗಾರಿಗೆ ತೊಂದರೆ, ಕೊರೋನಾ ಸಮಸ್ಯೆ, ಜಾಗದ ಸಮಸ್ಯೆ ಹಾಗೂ ಗುತ್ತಿಗೆದಾರರು ಕೆಲಸ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಕಾಮಗಾರಿ ನಡೆದಿದೆ. ಇದಕ್ಕೆ ಸಾರ್ವಜನಿಕರಿಂದ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಮಳೆಗಾಲದ ಸಂದರ್ಭ ಭಾಗಮಂಡಲದಲ್ಲಿ ಪ್ರವಾಹ ಉಂಟಾಗಿ ಬೋಟ್ ಗಳ ಮೂಲಕ ಜನರನ್ನು ಸಾಗಿಸಲಾಗುತ್ತಿತ್ತು. ಇದಲ್ಲದೆ ಜೀವ ಕೈಯಲ್ಲಿಡಿದು ಪ್ರವಾಹ ನೀರಿನಲ್ಲೇ ಗ್ರಾಮಸ್ಥರು ನಡೆದಾಡುವ ಪರಿಸ್ಥಿತಿ ಎದುರಾಗಿತ್ತು.

ಇದೀಗ ಮೇಲುಸೇತುವೆಯಿಂದಾಗಿ ಭಾಗಮಂಡಲ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರಿಗೆ ಮಳೆಗಾಲದಲ್ಲಿ ತುಂಬಾ ಅನುಕೂಲವಾಗಿದೆ.

ಭಾಗಮಂಡಲ ಪ್ರದೇಶ ದ್ವೀಪವಾದರೆ ಭಾಗಮಂಡಲ ಸೇರಿದಂತೆ ಐಯ್ಯಂಗೇರಿ, ಸಣ್ಣಪುಲಿಕೋಟು, ತಾವೂರು, ತಣ್ಣಿಮಾನಿ, ಚೇರಂಗಾಲ, ಕೋರಂಗಾಲ ಗ್ರಾಮದ ನಿವಾಸಿಗಳಿಗೆ ತೊಂದರೆಯಾಗುತ್ತಿತ್ತು. ಈ ಭಾಗದ ಮಕ್ಕಳಿಗೆ ಶಾಲೆಗೆ ತೆರಳಲು ಕೂಡ ಸಮಸ್ಯೆಯಾಗುತ್ತಿತ್ತು. .................ಭಾಗಮಂಡಲದಲ್ಲಿ ಇದೀಗ ಮೇಲು ಸೇತುವೆ ಸಂಚಾರಕ್ಕೆ ಮುಕ್ತಗೊಂಡಿದೆ. ಮಳೆಗಾಲದಲ್ಲಿ ಜೀವ ಕೈಯಲ್ಲಿಡಿದು ಹರಿವ ನದಿಯಲ್ಲೇ ನಡೆದಾಡುತ್ತಿದ್ದೆವು. ಶಾಲಾ ಮಕ್ಕಳಿಗೂ ತೊಂದರೆಯಾಗುತ್ತಿತ್ತು. ಇದೀಗ ಮೇಲು ಸೇತುವೆಯಿಂದಾಗಿ ಭಾಗಮಂಡಲ ಜನತೆ ಹಾಗೂ ಭಕ್ತರಿಗೆ ತುಂಬಾ ಅನುಕೂಲವಾಗಿದೆ.

-ಭರತ್, ಭಾಗಮಂಡಲ ನಿವಾಸಿ.

.........

ಈ ಬಾರಿಯ ಮಳೆಗಾಲಕ್ಕೆ ಭಾಗಮಂಡಲ ಮೇಲು ಸೇತುವೆ ಮುಕ್ತವಾಗಿದೆ. ಈಗಾಗಲೇ ವಾಹನ ಸಂಚಾರ ಆಗುತ್ತಿದೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇಲುಸೇತುವೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.

-ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ.