ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಿಸಿಲಿನಿಂದ ಕಂಗೆಟ್ಟಿದ್ದ ಗಡಿಜಿಲ್ಲೆ ಚಾಮರಾಜನಗರ ವಿವಿಧೆಡೆ ಶುಕ್ರವಾರ ಸಂಜೆ ಭರ್ಜರಿ ಮಳೆಯಾಗಿದ್ದು ವರುಣಾಗಮನಕ್ಕೆ ಜನರು ಹರ್ಷಗೊಂಡಿದ್ದಾರೆ. ಚಾಮರಾಜನಗರ ತಾಲೂಕಿನ ಅರಕಲವಾಡಿ, ಚೆನ್ನಪ್ಪನಪುರ, ಕೆ.ಗುಡಿ ಅರಣ್ಯ ಪ್ರದೇಶ, ಹನೂರು ಪಟ್ಟಣ ಹಾಗೂ ಹನೂರು ತಾಲೂಕಿನ ಹೂಗ್ಯಂ, ಶಾಗ್ಯ ಗುಂಡ್ಲುಪೇಟೆ ಪಟ್ಟಣ ಮತ್ತು ತಾಲೂಕಿನ ಶಿವಪುರ, ಬೊಮ್ಮಲಾಪುರ, ಕೋಡಹಳ್ಳಿ, ಹಂಗಳ, ಮಾಡ್ರಹಳ್ಳಿ ಸುತ್ತಮುತ್ತಲು ಗುಡುಗು-ಸಿಡಿಲು ಆರ್ಭಟದೊಂದಿದೆ ಮಳೆ ಸುರಿದಿದೆ. ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಬೆಂಕಿ ಆತಂಕ ದೂರವಾಗಿದೆ.ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಜಿಲ್ಲೆಯ ಹಲವೆಡೆ ಮನೆ, ಬೆಳೆಗೆ ಹಾನಿಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ವಿಶೇಷ ಚೇತನ ಮಹಿಳೆಯ ಪೆಟ್ಟಿಗೆ ಅಂಗಡಿ ಮೇಲೆ ಬೇವಿನಮರ ಬಿದ್ದು ಸಂಪೂರ್ಣ ಜಖಂ ಆಗಿದೆ.
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಮನೆಗಳ ಛಾವಣಿ ಹಾರಿಹೋಗಿದ್ದು ಹನೂರು ತಾಲೂಕಿನ ಪುಷ್ಪಾಪುರ ಗ್ರಾಮದಲ್ಲೂ ಮನೆಗಳಿಗೆ ಹಾನಿಯಾಗಿವೆ.3 ಎಮ್ಮೆ ಸಾವು: ಹನೂರು ತಾಲೂಕಿನ ಶಾಗ್ಯ ಗ್ರಾಮದ ರತ್ಮಮ್ಮ ಎಂಬವರಿಗೆ ಸೇರಿದ 3 ಎಮ್ಮೆಗಳು ಸಿಡಿಲಿನ ಬಡಿತಕ್ಕೆ ಮೃತಪಟ್ಟಿವೆ. ರೈತ ಮಹಿಳೆ ತನ್ನ ಎಮ್ಮೆ ಕಳೆದುಕೊಂಡು ರೋಧಿಸುತ್ತಿದ್ದು ಎಲ್ಲರ ಮನಕಲಕುವಂತಿತ್ತು. ಹನೂರು ತಾಲೂಕಿನ ಹೂಗ್ಯಂನಲ್ಲಿ 15 ಎಕರೆ ಪರಂಗಿ, 20 ಎಕರೆ ಬಾಳೆ, ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ಲೋಕೇಶ್ ಎಂಬವರಿಗೆ ಸೇರಿದ ಬಾಳೆ, ನಾಗಶೆಟ್ಟಿ ಎಂಬವರ ಸಪೋಟಾ ತೋಟ ಬಿರುಗಾಳಿಗೆ ನೆಲಕಚ್ಚಿದೆ.ಭರಣಿ ಮಳೆಯಿಂದ ತಂಪಾದ ಇಳೆ:
ಗುಂಡ್ಲುಪೇಟೆ: ಭರಣಿ ಮಳೆಗೆ ಗುಂಡ್ಲುಪೇಟೆ ಪಟ್ಟಣ ಹಾಗೂ ಸುತ್ತ ಮುತ್ತ ಗಾಳಿ, ಮಳೆ ಜೋರಾಗಿ ಸುರಿದಿದೆ. ಭಾರಿ ಗಾಳಿಯಿಂದ ಗುಡಿಸಿಲಿನ ಮೇಲ್ಛಾವಣಿ, ವಿದ್ಯುತ್ ಕಂಬ, ಮರ ಧರೆಗೆ ಉರುಳಿವೆ. ಪಟ್ಟಣದಲ್ಲಿ ಶುಕ್ರವಾರ ಸಂಜೆ ಬೀಸಿದ ಗಾಳಿಗೆ ಪಟ್ಟಣದ ಜನತೆ ಕೆಲ ಕಾಲ ಆತಂಕ ಪಟ್ಟರು. ಗಾಳಿಯ ವೇಗಕ್ಕೆ ಜೋಡಿ ರಸ್ತೆಯ ವಿದ್ಯುತ್ ಕಂಬ ವಾಲುತ್ತಿದ್ದವು.ಪ್ರವಾಸಿ ಮಂದಿರದ ಬಳಿಯ ಆರ್‌ಟಿಒ ಕಚೇರಿ ಬಳಿ, ಹಳೇ ಪೊಲೀಸ್ ಠಾಣೆಯ ಮುಂದೆ ಮರ ಬಿದ್ದವು. ಕೇರಳ ರಸ್ತೆ ಸಿದ್ದಗಂಗ ಪೆಟ್ರೋಲ್ ಬಂಕ್ ಮುಂದೆ ತರಕಾರಿ ಗುಡಿಸಲಿನ ಮೇಲ್ಛಾವಣಿ ಹಾರಿ ಹೋಗಿವೆ, ಕೇರಳ ರಸ್ತೆಯ ಸೋಲಾರ್ ಸಿಗ್ನಲ್ ಲೈಟ್ ಕಂಬ ಮುರಿದಿದೆ. ಕೇರಳ ರಸ್ತೆ ಮಲ್ಲಯ್ಯನಪುರ ಗೇಟ್ ಬಳಿ ಮರವೊಂದು ಹೆದ್ದಾರಿ ಬದಿ ಮುರಿದು ಬಿದ್ದಿದೆ.
ತಾಲೂಕಿನ ಶಿವಪುರ ಗ್ರಾಮದ ವಿಕಲಚೇತನ ಭಾಗ್ಯ ನಡೆಸುತ್ತಿದ್ದ ಪೆಟ್ಟಿಗೆ ಅಂಗಡಿ ಮೇಲೆ ಮರ ಹಾಗೂ ವಿದ್ಯುತ್ ಕಂಬ ಬಿದ್ದಿದೆ. ಕೇರಳ ರಸ್ತೆಯ ಮಲ್ಲಯ್ಯನಪುರ ಗೇಟ್ ಹಾಗೂ ಕೂತನೂರು ಬಳಿಯ ಜಮೀನಿನಲ್ಲಿ ಮಳೆಯ ನೀರು ಚಿಕ್ಕ ಕೆರೆಯಂತೆ ಆಯಿತು. ಕೂತನೂರು ಬಳಿಯ ರೈತರೊಬ್ಬರ ಪಾಲಿ ಹೌಸ್ ನೆಲಕ್ಕುರುಳಿದೆ.ಮೈಸೂರು, ಊಟಿ ಹೆದ್ದಾರಿ ಬದಿ ವೆಂಕಟೇಶ್ವರ ಬಾರ್ ಮುಂದೆ ಮರ ಮುರಿದು ಬಿದ್ದಿದೆ. ಬೇಗೂರು ಭಾಗಕ್ಕೆ ಗಾಳಿ ಬೀಸಿತಾದರೂ ಮಳೆ ಬೀಳಲಿಲ್ಲ. ಕೆಲ ನಿಮಿಷ ತುಂತುರು ಮಳೆ ಬಿದ್ದಿದೆ. ಬೇಗೂರು ಭಾಗದ ರೈತರಿಗೆ ಈ ಕಡೆ ಮಳೆ ಆಗದಿದ್ದಕ್ಕೆ ಗ್ರಾಮಸ್ಥರು ನಿರಾಶರಾದರು.