ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲೋಕ ಕಲ್ಯಾಣಕ್ಕಾಗಿ 15ರಂದು ಕಾವೇರಿ ಕ್ಷೇತ್ರ ಭಾಗಮಂಡಲದ ಟ್ರಸ್ಟ್ ಜಾಗದಲ್ಲಿ 12ನೇ ವರ್ಷದ ‘ಚಂಡಿಕಾ ಹೋಮ’ ಒಳಗೊಂಡಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಮುದ್ದಂಡ ಬಿ.ದೇವಯ್ಯ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 7 ಗಂಟೆಯಿಂದ ಶ್ರೀ ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ, ಶತರುದ್ರ ಪಠಣ ಹಾಗೂ ಚಂಡಿಕಾ ಹೋಮ ನಡೆಯಲಿದೆ. ಜಿಲ್ಲೆಯ ಕೊಡವ ಮತ್ತು ಅಮ್ಮಕೊಡವ ಜನಾಂಗ ಬಾಂಧವರು ಒಂದಾಗಿ ಸೇರಿ ಟ್ರಸ್ಟ್ ಸಹಯೋಗದಲ್ಲಿ ಚಂಡಿಕಾ ಹೋಮ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ಹಿಂದೆ ಅಷ್ಟಮಂಗಲ ಪ್ರಶ್ನೆಯ ಸಂದರ್ಭ ಕಂಡು ಬಂದ ದೋಷಗಳ ನಿವಾರಣೆಗಾಗಿ ನಿರಂತರವಾಗಿ ಚಂಡಿಕಾ ಯಾಗ ನಡೆಸಿಕೊಂಡು ಬರಲಾಗುತ್ತಿದೆ. ಧಾರ್ಮಿಕಕಾರ್ಯ ಮುಂದೆಯೂ ನಡೆಸಿಕೊಂಡು ಹೊಗಬೇಕೆಂದು ಇದ್ದಲ್ಲಿ ಅದಕ್ಕೂ ಟ್ರಸ್ಟ್ ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದರು.
ಕೋಟಿ ಅನುದಾನ :ಭಾಗಮಂಡಲದಲ್ಲಿ ಟ್ರಸ್ಟ್ ಹೊಂದಿರುವ 50 ಸೆಂಟ್ ಜಾಗದಲ್ಲಿ 4.50 ಸೆಂಟ್ ಜಾಗದಲ್ಲಿ ಟ್ರಸ್ಟ್ ಕಟ್ಟಡ ನಿರ್ಮಾಣಕ್ಕೆ ಒಂದೂವರೆ ವರ್ಷದ ಹಿಂದೆಯೇ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಎಂಎಲ್‌ಸಿ ಸುಜಾ ಕುಶಾಲಪ್ಪ ಸಹಕಾರ ಮತ್ತು ಪ್ರಯತ್ನಗಳಿಂದ 1 ಕೋಟಿ ರು. ಅನುದಾನ ಲಭ್ಯವಾಗಿದೆ. ಇದರ ಸಹಕಾರದೊಂದಿಗೆ ಕಟ್ಟಡ ನಿರ್ಮಾಣ ಮಾಡಲಾಗುತ್ತದೆಂದು ಮಾಹಿತಿಯನ್ನಿತ್ತರು. ಟ್ರಸ್ಟ್ ಖಜಾಂಚಿ ತೋಲಂಡ ಸೋಮಯ್ಯ ಮಾತನಾಡಿ, ಉದ್ದೇಶಿತ ಕಟ್ಟಡದಲ್ಲಿ ಟ್ರಸ್ಟ್‌ನ ಕಚೇರಿ, ಸಭಾಂಗಣ ಸೇರಿದಂತೆ ಕ್ಷೇತ್ರಕ್ಕೆ ಭೇಟಿ ನಿಡುವ ಭಕ್ತಾದಿಗಳಿಗೆ ಅಗತ್ಯವಾದ ಕೆಲ ಸೌಲಭ್ಯಗಳನ್ನು ಒದಗಿಸಲು ಉದ್ದೇಶಿಸಲಾಗಿದೆಯೆಂದು ಮಾಹಿತಿ ನೀಡಿದರು.
ಟ್ರಸ್ಟಿಗಳಾದ ನಾಯಕಂಡ ಅಯ್ಯಣ್ಣ, ನೆರೆಯಂಡಮ್ಮಂಡ ಪ್ರಭು, ಹಂಚೆಟ್ಟಿರ ಮನು ಮುತ್ತಪ್ಪ, ಕುಶ್ಮೀರ ಶ್ಯಾಮಲ ಸುದ್ದಿಗೋಷ್ಠಿಯಲ್ಲಿದ್ದರು.