ಡಿಸೆಂಬರ್‌ 14ರಿಂದ ವಿಜಯಪುರದಲ್ಲಿ ಭಗವದ್ಗೀತಾ ಅಭಿಯಾನ

| Published : Nov 11 2024, 11:50 PM IST

ಸಾರಾಂಶ

ಹುಬ್ಬಳ್ಳಿಯಿಂದಲೇ ಆರಂಭವಾಗಿರುವ ಭಗವದ್ಗೀತಾ ಅಭಿಯಾನ, ರಾಜ್ಯಾದ್ಯಂತ ವಿಸ್ತರಿಸಿದೆ. ಕಾರ್ತಿಕ ಮಾಸದಲ್ಲಿ ಪಠಿಸುವ ಮಂತ್ರ, ಮಾಡುವ ಜಪ ಹಾಗೂ ಸಮರ್ಪಿಸುವ ಪೂಜೆ- ಪುನಸ್ಕಾರಗಳು ದ್ವಿಗುಣ ಫಲ ನೀಡುತ್ತವೆ.

ಹುಬ್ಬಳ್ಳಿ:

ವಿಜಯಪುರ ಜಿಲ್ಲೆಯಲ್ಲಿ ಡಿ. 14ರಂದು ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮ ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸೋಂದಾ ಸ್ವರ್ಣವಲ್ಲಿ ಸಂಸ್ಥಾನ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ತಿಳಿಸಿದರು.

ಇಲ್ಲಿನ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಸೋಮವಾರ ಭಗವದ್ಗೀತೆಯ 9ನೇ ಅಧ್ಯಾಯದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಹುಬ್ಬಳ್ಳಿಯಿಂದಲೇ ಆರಂಭವಾಗಿರುವ ಭಗವದ್ಗೀತಾ ಅಭಿಯಾನ, ರಾಜ್ಯಾದ್ಯಂತ ವಿಸ್ತರಿಸಿದೆ. ಕಾರ್ತಿಕ ಮಾಸದಲ್ಲಿ ಪಠಿಸುವ ಮಂತ್ರ, ಮಾಡುವ ಜಪ ಹಾಗೂ ಸಮರ್ಪಿಸುವ ಪೂಜೆ- ಪುನಸ್ಕಾರಗಳು ದ್ವಿಗುಣ ಫಲ ನೀಡುತ್ತವೆ. ಹೀಗಾಗಿ ಸದ್ಯ ವಿಜಯಪುರ ಜಿಲ್ಲೆಯನ್ನು ಕೇಂದ್ರೀಕರಿಸಿಕೊಡು ಗೀತಾಭಿಯಾನ ಆಯೋಜಿಸಲಾಗುತ್ತಿದೆ ಎಂದರು.

ಗೀತೆಯಿಂದ ಮಾನಸಿಕ ಧೈರ್ಯ:

ಕೊರೋನಾ ಪರಿಸ್ಥಿತಿಯ ಬಳಿಕ ಜನರ ಮಾನಸಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸಣ್ಣ ಪುಟ್ಟ ಕಾಯಿಲೆಗಳಿಗೂ ಹೆದರುವಂತಾಗಿದೆ. ಅನೇಕರು ಖಿನ್ನತೆಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂಥವರಿಗೆ ಮಾನಸಿಕ ಧೈರ್ಯ ತುಂಬುವಲ್ಲಿ ಭಗವದ್ಗೀತೆ ಸಹಕಾರಿಯಾಗಲಿದೆ. ಭಗವದ್ಗೀತೆಯನ್ನು ಕೇಳುವುದು, ಪಠಿಸುವುದು ಮತ್ತು ಅದರ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮನಸ್ಸು ಪ್ರಫುಲ್ಲಗೊಂಡು, ಜೀವನ ಧೈರ್ಯ, ಚೈತನ್ಯದಿಂದ ಕೂಡಿರಲಿದೆ ಎಂದರು.

ದಿನ ಕಳೆದಂತೆ ಅಧೈರ್ಯ, ಚಿಂತೆ ಎಂಬ ಕಸ ಮನಸ್ಸಿನಲ್ಲಿ ತುಂಬಿಕೊಳ್ಳುತ್ತದೆ. ಅದನ್ನು ನಿತ್ಯವೂ ಜಪ, ತಪ, ಪೂಜೆ-ಪುನಸ್ಕಾರಗಳಿಂದ ಹೊರ ಹಾಕಬೇಕು. ಮನದ ಕಸವನ್ನು ಹೊರ ಹಾಕುವುದರಿಂದ ಆಯುಸ್ಸು ಹೆಚ್ಚಾಗಿ, ಸಾಧನೆಗೆ ಪ್ರೇರಣೆಯಾಗುತ್ತದೆ. ಭಗವದ್ಗೀತೆಯನ್ನು ಪಠಿಸುವುದಿರಲಿ, ಅದನ್ನು ಕೇಳದ ದೊಡ್ಡ ಸಮುದಾಯವೇ ಇದೆ. ಆ ಸಮುದಾಯಕ್ಕೆ ಭಗವದ್ಗೀತೆಯ ಉಪಾಸನೆ ಮಾಡುವುದನ್ನು ಹಚ್ಚುವುದೇ ಭಗವದ್ಗೀತಾ ಅಭಿಯಾನದ ಮುಖ್ಯ ಉದ್ದೇಶ ಎಂದರು.

ಈ ಸಂದರ್ಭದಲ್ಲಿ ಸುದರ್ಶನ ಹೇಮಾದ್ರಿ, ಶ್ರೀಕಾಂತ ಹೆಗಡೆ, ವಿ.ಎಂ. ಭಟ್ಟ, ಎ.ಸಿ. ಗೋಪಾಲ, ಶಾಂತಾರಾಮ ಭಟ್ಟ, ಗೋಪಾಲಕೃಷ್ಣ ಹೆಗಡೆ, ವೀಣಾ ಹೆಗಡೆ, ಅರುಣಕುಮಾರ ಹಬ್ಬು, ಜಿ.ಆರ್. ಭಟ್ಟ ಹಾಗೂ ಮನೋಹರ ಪರ್ವತಿ ಸೇರಿದಂತೆ ಹಲವರಿದ್ದರು.