ಬದುಕಿನ ಮಾರ್ಗದರ್ಶಿಯಾಗಿ ಭಗವದ್ಗೀತೆ ಲೋಕಮಾನ್ಯ: ಶರಣ್ ಪಂಪ್‌ವೆಲ್

| Published : Apr 01 2024, 12:45 AM IST / Updated: Apr 01 2024, 12:46 AM IST

ಸಾರಾಂಶ

ಮೂಡುಬಿದಿರೆ ಪ್ರಖಂಡ ವಿಶ್ವ ಹಿಂದೂಪರಿಷತ್, ಜಬರಂಗದಳ, ಮಾತೃಶಕ್ತಿ, ದುರ್ಗಾ ವಾಹಿನಿ ವತಿಯಿಂದ ಸ್ವರಾಜ್ಯ ಮೈದಾನದ ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ ಜರುಗಿದ 21ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಭಗವದ್ಗೀತೆ ಎನ್ನುವುದು ಬದುಕಿನ ಮಾರ್ಗದರ್ಶಿ ಎನ್ನುವುದನ್ನು ಜಗತ್ತು ಒಪ್ಪಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಲೋಕಾ ಸಮಸ್ತಾ ಸುಖಿನೋ ಭವಂತು ಎನ್ನುವ ಹಿಂದೂಗಳು ಸಹಬಾಳ್ವೆ, ಸಾಮರಸ್ಯ, ಸೌಹಾರ್ದತೆ, ಜಾತ್ಯತೀತೆಯನ್ನು ಬದುಕಿನ ಭಾಗವಾಗಿಸಿಕೊಂಡವರು ಎಂದು ವಿಶ್ವ ಹಿಂದೂಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

ಅವರು ಮೂಡುಬಿದಿರೆ ಪ್ರಖಂಡ ವಿಶ್ವ ಹಿಂದೂಪರಿಷತ್, ಜಬರಂಗದಳ, ಮಾತೃಶಕ್ತಿ, ದುರ್ಗಾ ವಾಹಿನಿ ವತಿಯಿಂದ ಸ್ವರಾಜ್ಯ ಮೈದಾನದ ಶ್ರೀ ಆದಿಶಕ್ತಿ ದೇವಸ್ಥಾನದ ವಠಾರದಲ್ಲಿ ಜರುಗಿದ 21ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆಯ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಈ ನೆಲದಲ್ಲಿ ವ್ಯವಹಾರ ಸಹಿತ ಇನ್ನಿತರ ಕಾರಣಗಳಿಂದ ಬಂದವರು ಹಿಂದೂ ಸಮಾಜವದಲ್ಲಿ ಶಾಂತಿ ಸಾಮರಸ್ಯವನ್ನು ಕದಡುವ ಕೆಲಸ ಮಾಡಿದರೆ ಸಹಿಸಲಾಗುವುದಿಲ್ಲ. ಕೃಷ್ಣ ಶಾಂತಿಗೆ ಮೊದಲ ಆದ್ಯತೆ ನೀಡಿದ್ದ. ಅದನ್ನೂ ತಿರಸ್ಕರಿಸಿದವರಿಗೆ ಯುದ್ಧದ ಮೂಲಕ ತಕ್ಕ ಪಾಠ ಕಲಿಸಿದ ಆದರ್ಶ ಇತಿಹಾಸ ನಮ್ಮದು. ನಮ್ಮೊಂದಿಗಿದ್ದು ಸಮಾಜದ ಸಾಮರಸ್ಯ ಕೆಡಿಸುವವರ ಸವಾಲೆದುರಿಸಲು ಬರೇ ಸರಕಾರಗಳನ್ನು ನಂಬಿ ಕೂರುವುದಲ್ಲ. ನಾವೆಲ್ಲರೂ ಸನ್ನದ್ಧರಾಗಿರಬೇಕು ಎಂದರು.

ಉದ್ಯಮಿ ಕೆ. ಶ್ರೀಪತಿ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೂಡುಬಿದಿರೆ ತಾಲೂಕು ಸಂಘ ಚಾಲಕ ವಿವೇಕಾನಂದ ಕಾಮತ್ ಸಂಪಿಗೆ, ದುರ್ಗಾವಾಹಿನಿಯ ಸಂಯೋಜಕಿ ರಂಜಿನಿ, ಪ್ರಧಾನ ಅರ್ಚಕ ಶಿವಾನಂದ ಶಾಂತಿ ಇದ್ದರು.

ಸ್ವಾತಿ ಬೋರ್ಕರ್ ವಂದೇ ಮಾತರಂ ಹಾಡಿದರು. ವಿಹಿಂಪ ಕಾರ್ಯಾಧ್ಯಕ್ಷ ಕೆ.ಶ್ಯಾಮ ಹೆಗ್ಡೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸುಚೇತನ್ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಅನ್ನ ಸಂತರ್ಪಣೆ, ಹನುಮಗಿರಿ ಮೇಳದವರಿಂದ ಯಕ್ಷಗಾನ ಬಯಲಾಟ ಜರುಗಿತು.