2026 ಶ್ರೀ ಭಗವದ್ಗೀತಾ ಅಭಿಯಾನದಲ್ಲಿ ಶ್ರೀ ಭಗವದ್ಗೀತೆಯ ಎರಡನೇ ಅಧ್ಯಾಯ ಸಾಂಖ್ಯಯೋಗೋ ನಾಮ ಕಂಠಪಾಠ ಮಾಡುವ ಮೂಲಕ ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿದೆ. ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಂಠಪಾಠ ಮತ್ತು ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಸೊಂದ ಸ್ವರ್ಣವಲ್ಲಿ ಮಹಾಸಂಸ್ಥಾನ ಕಳೆದ 21 ವರ್ಷಗಳಿಂದ ಶ್ರೀ ಭಗವದ್ಗೀತಾ ಅಭಿಯಾನ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಕಡೆ ಆಚರಿಸಿಕೊಂಡು ಬರುತ್ತಿದೆ ಎಂದು ಚಾಮರಾಜನಗರ ಜಿಲ್ಲಾ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಗೌರವಾಧ್ಯಕ್ಷರಾದ ಜಿ.ಎಂ. ಹೆಗಡೆ ತಿಳಿಸಿದರು.ನಗರದ ಸೇವಾ ಭಾರತಿ ಶಾಲಾ ಆವರಣದಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ಶ್ರೀ ಸೋಂದ ಸ್ವರ್ಣವಲ್ಲಿ ಮಹಾಸಂಸ್ಥಾನ ಶ್ರೀ ಸರ್ವಜ್ಞೆಂದ್ರ ಸರಸ್ವತಿ ಪ್ರತಿಷ್ಠಾನದ ಶ್ರೀ ಭಗವದ್ಗೀತಾ ಅಭಿಯಾನ - 2026 ಕಾರ್ಯಕ್ರಮ ಉದ್ಘಾಟಿಸಿ, ಸಾವಿರಾರು ಸಂಖ್ಯೆಯಲ್ಲಿ ಏಕಕಾಲದಲ್ಲಿ ಶ್ರೀ ಭಗವದ್ಗೀತೆಯ ಪಠಣವನ್ನು ಮಾಡಿ ಭಗವದ್ಗೀತೆ ಅರ್ಥ ಮತ್ತು ಶ್ಲೋಕ ವಾಚನದ ಮೂಲಕ ಮನುಷ್ಯ ತನ್ನ ಏಕಾಗ್ರತೆ, ಶಕ್ತಿ, ಸಾಮರ್ಥ್ಯ, ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ತಿಳಿಸಿದರು.
2026 ಶ್ರೀ ಭಗವದ್ಗೀತಾ ಅಭಿಯಾನದಲ್ಲಿ ಶ್ರೀ ಭಗವದ್ಗೀತೆಯ ಎರಡನೇ ಅಧ್ಯಾಯ ಸಾಂಖ್ಯಯೋಗೋ ನಾಮ ಕಂಠಪಾಠ ಮಾಡುವ ಮೂಲಕ ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿದೆ. ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಕಂಠಪಾಠ ಮತ್ತು ಭಾಷಣ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಅಧ್ಯಾಪಕ ಅಭಿಲಾಶ್ ಮಾತನಾಡಿ ಎರಡನೆಯ ಅಧ್ಯಾಯದಲ್ಲಿ 72 ಶ್ಲೋಕಗಳು ಇವೆ. ಪ್ರತಿಯೊಬ್ಬರು ಶ್ರದ್ಧೆಯಿಂದ ಭಗವದ್ಗೀತೆ ಶ್ಲೋಕ ಹೇಳುವ ಮತ್ತು ಅರ್ಥ ವಿವರಣೆ ತಿಳಿದುಕೊಳ್ಳಬೇಕು. ಭಗವದ್ಗೀತೆ ಹೇಳಿಕೊಡುವುದು ಎಷ್ಟು ಮುಖ್ಯವೋ, ಅಷ್ಟೇ ಕಲಿಯುವುದು ಬಹಳ ಮುಖ್ಯ. ಎರಡು ತಿಂಗಳ ಅವಕಾಶದಲ್ಲಿ ನಾವೆಲ್ಲರೂ ಕಲಿತು ಭಗವದ್ಗೀತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರಭಾರತಿಗೆ ಅರ್ಪಿಸೋಣ ಎಂದು ತಿಳಿಸಿದರು.
ಶ್ರೀ ಭಗವದ್ ಗೀತಾ ಅಭಿಯಾನದ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ, ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ಖಜಾಂಚಿ ಹಾಗೂ ಸೇವಾ ಭಾರತಿ ಸಂಸ್ಥೆ ಸದಸ್ಯ ಎಸ್. ಬಾಲಸುಬ್ರಹ್ಮಣ್ಯಂ , ಮುಖ್ಯ ಶಿಕ್ಷಕರು, ಅಧ್ಯಾಪಕರು ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸೇವಾಭಾರತಿ ಸಂಸ್ಥೆ ಆಡಳಿತಾಧಿಕಾರಿ ಎಸ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು.