ಸಹಕಾರ ಸಂಘಗಳು ರೈತರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಇಂಥ ಸಂಸ್ಥೆಗಳಲ್ಲಿ ರೈತರು ಭಾಗವಹಿಸುವಿಕೆ ಹೆಚ್ಚಾಗಬೇಕು. ಪ್ರತಿ ಸಹಕಾರ ಸಂಘ ಆಯಾ ಸದಸ್ಯರ ಹಿತ ರಕ್ಷಣೆ ಮಾಡುವ ಜೊತೆಗೆ ತನ್ನ ಪ್ರದೇಶದ ಅಭಿವೃದ್ಧಿ ಜನರ ಪ್ರಗತಿಯನ್ನು ಬಯಸುತ್ತದೆ. ಸಹಕಾರ ಕ್ಷೇತ್ರದ ಪಿತಾಮಹಾ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರು ೧೯೦೫ರಲ್ಲಿ ಪ್ರಥಮವಾಗಿ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸಹಕಾರಿ ಕೃಷಿ ಸಂಘವನ್ನು ಸ್ಥಾಪನೆ ಮಾಡಿದರು.
ಕನ್ನಡಪ್ರಭ ವಾರ್ತೆ, ಚಾಮರಾಜನಗರ
ರೈತರ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಉತ್ತಮವಾದ ಅಸ್ತ್ರವಾಗಿದ್ದು, ಪ್ರತಿ ಹಳ್ಳಿಗಳಲ್ಲಿ ಸಹಕಾರ ಸಂಘಗಳ ಸ್ಥಾಪನೆಯಿಂದ ನೆಮ್ಮದಿ ಬದಕು ರೂಪಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಆದ ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.ತಾಲೂಕಿನ ಕುದೇರಿನ ಚಾಮುಲ್ ಅವರಣದಲ್ಲಿ ಕರ್ನಾಟಕ ರಾಜ್ಯ ಮಹಾಮಂಡಲ ನಿ. ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ೭೩ನೇ ಸಹಕಾರ ಸಪ್ತಾಹ-೨೦೨೬ ಸಹಕಾರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರ ಸಂಘಗಳು ರೈತರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಇಂಥ ಸಂಸ್ಥೆಗಳಲ್ಲಿ ರೈತರು ಭಾಗವಹಿಸುವಿಕೆ ಹೆಚ್ಚಾಗಬೇಕು. ಪ್ರತಿ ಸಹಕಾರ ಸಂಘ ಆಯಾ ಸದಸ್ಯರ ಹಿತ ರಕ್ಷಣೆ ಮಾಡುವ ಜೊತೆಗೆ ತನ್ನ ಪ್ರದೇಶದ ಅಭಿವೃದ್ಧಿ ಜನರ ಪ್ರಗತಿಯನ್ನು ಬಯಸುತ್ತದೆ. ಸಹಕಾರ ಕ್ಷೇತ್ರದ ಪಿತಾಮಹಾ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರು ೧೯೦೫ರಲ್ಲಿ ಪ್ರಥಮವಾಗಿ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸಹಕಾರಿ ಕೃಷಿ ಸಂಘವನ್ನು ಸ್ಥಾಪನೆ ಮಾಡಿದರು. ಅವರ ದೂರದೃಷ್ಟಿತ್ವದಿಂದ ಸಂಘಗಳು ಬಲಿಷ್ಠವಾಗಿ ಬೆಳೆದಿವೆ. ಇದೇ ಮಾದರಿಯಲ್ಲಿ ಡಾ. ವರ್ಗಿಸ್ ಕುರಿಯನ್ ಗುಜರಾತ್ನಲ್ಲಿ ಹಾಲಿನ ಡೇರಿಯನ್ನು ಆರಂಭಿಸಿ, ದೇಶದಾದ್ಯಂತ ಸಹಕಾರ ಸಂಘಗಳ ಮೂಲಕ ಹಾಲು ಖರೀದಿ ಮಾಡಿ ಮಾರಾಟ ಮಾಡುವ ಜೊತೆಗೆ ಸಂಸ್ಕರಣೆಯನ್ನು ಮಾಡಿ ಹಾಲಿನ ಹೊಳೆ ಹರಿಸಿದರು. ಹೀಗಾಗಿ ಅವರನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಪಿತಾಮಹ ಎಂದು ಕರೆಯಾಗುತ್ತಿದೆ. ಇಂಥ ಸಹಕಾರ ಸಂಘಗಳು ಇನ್ನು ಹೆಚ್ಚಿನ ರೀತಿಯಲ್ಲಿ ಬೆಳೆಯಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಸಹಕಾರ ಕ್ಷೇತ್ರ ರಾಜಕೀಯೇತರವಾಗಿ ಬೆಳೆಯುವ ಮೂಲಕ ಎಲ್ಲರು ಅಭಿವೃದ್ಧಿಯತ್ತ ಸಾಗೋಣ ಎಂದು ತಿಳಿಸಿದರು.
ಚಾಮುಲ್ ಅಧ್ಯಕ್ಷ ಎಂ. ನಂಜುಂಡಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಹಕಾರ ಕ್ಷೇತ್ರಗಳು ಹಾಲು ಉತ್ಪಾದಕರ ಸಹಕಾರ ಸಂಘಗಳು ದೊಡ್ಡ ಕ್ರಾಂತಿಯನ್ನು ಮಾಡಿವೆ. ಇಂಥ ಸಹಕಾರ ಸಂಘಗಳು ಪ್ರತಿ ಹಳ್ಳಿಹಳ್ಳಿಗಳಲ್ಲಿ ಸ್ಥಾಪನೆಗೊಂಡು ರೈತರು ಅಭಿವೃದ್ಧಿಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಚಾಮರಾಜನಗರದಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣಕ್ಕೆ ದಿ.ಎಚ್.ಎಸ್. ಮಹದೇವಪ್ರಸಾದ್ ಅವರು ಪ್ರಮುಖರು. ಅವರನ್ನು ಸ್ಮರಿಸಿಕೊಳ್ಳುವ ಜೊತೆಗೆ ಜಿಲ್ಲೆಯ ಅಭಿವೃದ್ದಿಗೆ ಅವರು ಸೇವೆ ಹೆಚ್ಚಿನದ್ದಾಗಿದೆ. ಕುದೇರಿನಲ್ಲಿ ಒಕ್ಕೂಟದ ರಚನೆಯಾದ ಬಳಿಕ ಜಿಲ್ಲೆಯ ಅಭಿವೃದ್ಧಿ ವೇಗವು ಸಹ ಹೆಚ್ಚಾಗಿದೆ. ಒಕ್ಕೂಟವು ೧.೫೦ ಲಕ್ಷ ಲೀಟರ್ ಹಾಲು ಸಂಗ್ರಹದಿಂದ ಆರಂಭವಾಗಿ ಈಗ ಪ್ರತಿ ದಿನ ೩.೫೦ ಲಕ್ಷ ಲೀಟರ್ಗೂ ಹೆಚ್ಚು ಹಾಲು ಶೇಖರಣೆಯಾಗುತ್ತಿದೆ. ಹಾಲಿನ ಮಾರಾಟದ ಜೊತೆಗೆ ಉಪ ಉತ್ಪನ್ನಗಳ ತಯಾರಿಕೆಯೊಂದಿಗೆ ಡೇರಿ ಲಾಭದಲ್ಲಿ ಮುಂದೂವರಿಯುತ್ತಿದೆ. ಇಂಥ ಡೇರಿಗಳು ಸಹಕಾರ ಸಂಘದ ಮೂಲ ಉದ್ದೇಶವನ್ನು ಹೊಂದಿವೆ. ನಾವು ಸಹ ಸಹಕಾರ ಕ್ಷೇತ್ರಗಳಲ್ಲಿ ಸೇವೆ ಮಾಡಿದ ಫಲವಾಗಿ ಸಹಕಾರ ರತ್ನ ಪ್ರಶಸ್ತಿ ಲಭಿಸಿರುವುದು ಹೆಮ್ಮ ತಂದಿದೆ ಎಂದು ಹೇಳಿದರು.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಎಚ್.ಎಂ. ಬಸವಣ್ಣ, ಮುದ್ದಯ್ಯ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರವು ಬಹಳ ವಿಸ್ತಾರವಾಗಿ ಬೆಳೆಯುತ್ತಿದೆ. ಸಹಕಾರ ಕ್ಷೇತ್ರವನ್ನು ರಾಜಕೀಯದಿಂದ ದೂರ ಇರಿಸಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯವಾಗಿ ಗೆಲುವು ಸೋಲು ಇರುತ್ತದೆ. ಮಾರನೇ ದಿನದಿಂದೇ ಎಲ್ಲರು ಸಹಕಾರಿಗಳು ಎಂಬ ಭಾವನೆಯೊಂದಗೆ ದುಡಿಯಬೇಕು. ಹಿರಿಯ ಸಹಕಾರಿಗಳ ಶ್ರಮ ಮತ್ತು ನಿಸ್ವಾರ್ಥ ಸೇವೆಯಿಂದ ಇಂದು ಸಹಕಾರ ಸಂಘಗಳು ಪ್ರಬಲವಾಗುತ್ತಿದೆ. ಇನ್ನು ಮುಂದಿನ ಪೀಳಿಗೆಗೆ ಸಮರ್ಥವಾಗಿ ತಲುಪಿಸುವ ಬಲಿಷ್ಠವಾಗಿ ಸಹಕಾರ ಕ್ಷೇತ್ರವನ್ನು ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ಸಂಘಗಳಲ್ಲಿ ಹೆಚ್ಚು ಜನರು ಸದಸ್ಯತ್ವವನ್ನು ಹೊಂದುವ ನಿಟ್ಟಿನಲ್ಲಿ ಅಧ್ಯಕ್ಷರು, ಕಾರ್ಯನಿರ್ವಾಹಕರು ಶ್ರಮಿಸಬೇಕು. ನಿಮ್ಮಂಥರದಿಂದ ಮಾತ್ರ ಸಹಕಾರ ಕ್ಷೇತ್ರ ಬೆಳೆಸಲು ಸಾಧ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಸವಣ್ಣ, ಯೂನಿಯನ್ ನಿರ್ದೇಶಕ ಮುದ್ದಯ್ಯ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯುನಿಯನ್ ಉಪಾಧ್ಯಕ್ಷ ರಾಯಪ್ಪನ್, ಚಾಮುಲ್ ಮಾಜಿ ಅಧ್ಯಕ್ಷ ನಾಗೇಂದ್ರ ವೈ.ಸಿ. ನಿರ್ದೇಶಕರಾದ ಸದಾಶಿವಮೂರ್ತಿ, ಶಾಹುಲ್ ಅಹಮದ್, ಆರ್. ನಾಗಯ್ಯ, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಸಿ. ಶ್ರೀಧರ್, ಸಹಕಾರ ಸಂಘಗಳ ಉಪ ನಿಬಂಧಕ ಜ್ಯೋತಿಅರಸ್, ನಿಬಂಧಕರಾದ ಪಿ. ಶೋಭಾ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾಕರಾದ ಕೆ.ಲಿಂಗರಾಜು, ಮಂಜು ಯೂನಿಯನ್ ನಿರ್ದೇಶಕರಾದ ಜಿ. ಮಡಿವಾಳಪ್ಪ, ಎಂ.ಎಂ. ಪ್ರಭುಸ್ವಾಮಿ, ಅಮಚವಾಡಿ ನಾಗಸುಂದರ, ಮಹದೇವಪ್ರಭು, ಮುದ್ದಯ್ಯ, ಬಸವಣ್ಣ, ದಾಕ್ಷಾಯಿಣಿ, ಜಯರಾಮ್, ಸಹಕಾರ ಸಂಘಗಳ ಉಪ ಯುನಿಯನ್ ಸಿಇಓ ಮನುಜ, ಮ್ಯಾನೇಜರ್ ಮಲ್ಲಿಕಾರ್ಜುನ್, ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮೊದಲಾದವರು ಇದ್ದರು.