ಪ್ರಸ್ತುತ ಚಾಮುಲ್ ಅಧ್ಯಕ್ಷರಾಗಿರುವ ನಂಜುಂಡ ಸ್ವಾಮಿ ಅವರು ಡೇರಿ ಮಟ್ಟದಿಂದ ಒಕ್ಕೂಟದವರೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಪರಿಗಣಿಸಿ ಸರ್ಕಾರ ಅವರಿಗೆ "ಕರ್ನಾಟಕ ಸಹಕಾರ ರತ್ನ "ಪ್ರಶಸ್ತಿ ನೀಡಿರುವುದಕ್ಕೆ ಜಿಲ್ಲೆಯವರಾದ ನಾವು ಹೆಮ್ಮೆ ಪಡುವಂತಹ ವಿಷಯವಾಗಿದೆ.

ಕನ್ನಡಪ್ರಭವಾರ್ತೆ ಚಾಮರಾಜನಗರ

ಯಾವುದೇ ಒಂದು ಊರಿನಲ್ಲಿ ಶಾಲೆ, ಕೆರೆ ಜೊತೆಗೆ ಸಹಕಾರ ಸಂಘವಿದ್ದರೆ ಆ ಊರು ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ ಹೇಳಿದರು.

ತಾಲೂಕಿನ ಕುದೇರಿನಲ್ಲಿರುವ ಚಾಮೂಲ್‌ನಲ್ಲಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಚಾಮೂಲ್ ನಿರ್ದೇಶಕರು ಹಾಗೂ ವಿವಿಧ ಸಂಘ ಸಂಸ್ಥೆ ಮುಖಂಡರಿಂದ ಸನ್ಮಾನ ಸ್ವೀಕರಿಸಿದ ಅವರು, ಗ್ರಾಮದಲ್ಲಿ ಸಹಕಾರ ಸಂಘಗಳಿದ್ದರೆ ಆ ಗ್ರಾಮದ ರೈತರ ಹಾಗೂ ಅಲ್ಲಿನ ಜನರ ಅಭ್ಯುದಯಕ್ಕೆ ಸಾಕಷ್ಟು ಸಹಕಾರಿಯಾಗಲಿದೆ. ಹೀಗಾಗಿ ಪ್ರತಿಯೊಬ್ಬರು ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದು, ಅಲ್ಲಿ ಹಂತ ಹಂತವಾಗಿ ಹುದ್ದೆಗಳನ್ನು ಅಲಂಕರಿಸಿ, ಮೇಲ್ಮಟ್ಟಕ್ಕೆ ಬೆಳೆದಾಗ ಸರ್ಕಾರ ಅವರನ್ನು ಗುರುತಿಸಲು ಸಹಕಾರಿಯಾಗಲಿದೆ. ಇದೆ ಸಿದ್ಧಾಂತದ ಅಡಿಯಲ್ಲಿ ನಾನು ಸಹ ಹಳ್ಳಿ ಮಟ್ಟದಿಂದ ರಾಜ್ಯಮಟ್ಟದವರೆಗೂ ಸುಮಾರು 40 ವರ್ಷಗಳ ಕಾಲ ಹಾಲು ಒಕ್ಕೂಟಕ್ಕಾಗಿ ದುಡಿದಿದ್ದೇನೆ. ಸರ್ಕಾರ ನನ್ನ ಸೇವೆಯನ್ನು ಗುರುತಿಸಿ ಕರ್ನಾಟಕ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿದೆ ಎಂದು ತಿಳಿಸಿದರು.

ಎಲ್ಲ ಅಭಿವೃದ್ಧಿ ಯೋಜನೆಗಳಿಗೂ ಸಹಕಾರ ಸಂಸ್ಥೆ ಮೂಲವಾಗಿದೆ. ಸಹಕಾರ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷಗಳಿಗೆ ಸೀಮಿತವಾಗಬಾರದು ಎಂದು ಕಿವಿಮಾತು ಹೇಳಿದರು.

ದಲಿತ ಸಂಘಟನೆ ಮುಖಂಡ ಬಸವನಪುರ ರಾಜಶೇಖರ್ ಮಾತನಾಡಿ, ಪ್ರಸ್ತುತ ಚಾಮುಲ್ ಅಧ್ಯಕ್ಷರಾಗಿರುವ ನಂಜುಂಡ ಸ್ವಾಮಿ ಅವರು ಡೇರಿ ಮಟ್ಟದಿಂದ ಒಕ್ಕೂಟದವರೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆ ಪರಿಗಣಿಸಿ ಸರ್ಕಾರ ಅವರಿಗೆ "ಕರ್ನಾಟಕ ಸಹಕಾರ ರತ್ನ "ಪ್ರಶಸ್ತಿ ನೀಡಿರುವುದಕ್ಕೆ ಜಿಲ್ಲೆಯವರಾದ ನಾವು ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಾಮುಲ್ ವ್ಯವಸ್ಥಾಕ ನಿರ್ದೇಶಕ‌ ಶ್ರೀಧರ್, ಮುಖಂಡರಾದ ಮದುವನಹಳ್ಳಿ ಕುಮಾರ್, ನರಸಿಂಹಮೂರ್ತಿ, ಭಾಗ್ಯಮ್ಮ, ಮರಪ್ಪ, ರೇವಣ್ಣ, ಕುಮಾರ್ ಮಂಗಲ, ಯರಿಯೂರು ನಾಗೇಂದ್ರ ಸೇರಿದಂತೆ ಇತರರು ಇದ್ದರು.