ನೈತಿಕ ಶಿಕ್ಷಣಕ್ಕಾಗಿ ಭಗವದ್ಗೀತಾ ಅಭಿಯಾನ: ಡಾ. ಶಂಕರ ಭಟ್ಟ ಬಾಲೀಗದ್ದೆ

| Published : Nov 30 2024, 12:47 AM IST

ನೈತಿಕ ಶಿಕ್ಷಣಕ್ಕಾಗಿ ಭಗವದ್ಗೀತಾ ಅಭಿಯಾನ: ಡಾ. ಶಂಕರ ಭಟ್ಟ ಬಾಲೀಗದ್ದೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣದ ವಿದ್ಯಾರ್ಥಿಗಳಿಗೆ ಮೂರು ಹಂತಗಳಲ್ಲಿ ೭ ಸ್ಪರ್ಧೆಗಳು ನಡೆಯಲಿವೆ. ಡಿ. ೨ರಂದು ೧೦ ಗಂಟೆಗೆ ತಾಲೂಕು ಮಟ್ಟದ ಸ್ಪರ್ಧೆಗಳು ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ, ಜಿಲ್ಲಾ ಮಟ್ಟದ ಸ್ಪರ್ಧೆಗಳು ಡಿ. ೭ರಂದು ಶಿರಸಿಯ ಲಯನ್ಸ್ ಶಾಲೆಯಲ್ಲಿ, ಡಿ. ೧೧ರಂದು ರಾಜ್ಯಮಟ್ಟದ ಸ್ಪರ್ಧೆಗಳು ವಿಜಯಪುರದಲ್ಲಿ ಶ್ರೀಗಳ ಸಮ್ಮುಖದಲ್ಲಿ ನಡೆಯಲಿದೆ.

ಯಲ್ಲಾಪುರ: ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಭಗವದ್ಗೀತಾ ಅಭಿಯಾನ, ಜಿಲ್ಲೆ ಮತ್ತು ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅಭಿಯಾನದ ರಾಜ್ಯ ಸಮಿತಿ ಪ್ರಮುಖ ಡಾ. ಶಂಕರ ಭಟ್ಟ ಬಾಲೀಗದ್ದೆ ತಿಳಿಸಿದರು.

ನ. ೨೯ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವ್ಯಕ್ತಿತ್ವ ವಿಕಸನ, ನೈತಿಕ ಶಿಕ್ಷಣ, ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯದ ಉದ್ದೇಶದಿಂದ ಕಳೆದ ೧೮ ವರ್ಷಗಳಿಂದ ಶ್ರೀಗಳ ನೇತೃತ್ವದಲ್ಲಿ ರಾಜ್ಯಾದ್ಯಂತ ಅಭಿಯಾನ ನಡೆಯುತ್ತಿದೆ. ಈ ವರ್ಷ ೯ನೇ ಅಧ್ಯಾಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿವರ್ಷ ಒಂದು ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಅಭಿಯಾನ ನಡೆಸಲಾಗುತ್ತಿದ್ದು, ಈ ಬಾರಿ ವಿಜಯಪುರ ಜಿಲ್ಲೆ ಮುಖ್ಯ ಕೇಂದ್ರವಾಗಿದೆ. ಸ್ವತಃ ಶ್ರೀಗಳು ಸಾನ್ನಿಧ್ಯ ವಹಿಸುತ್ತಿದ್ದಾರೆ ಎಂದರು.

ಅಂಕೋಲಾ, ಮುಂಡಗೋಡ ತಾಲೂಕಿನ ಕೆಲ ಭಾಗಗಳನ್ನೂ ಯಲ್ಲಾಪುರ ತಾಲೂಕಿನ ಜೊತೆಯಲ್ಲೇ ಸೇರಿಸಿಕೊಳ್ಳಲಾಗಿದೆ. ಕಳೆದ ಅಕ್ಟೋಬರ್ ೨೬ರಂದು ಪ್ರಶಿಕ್ಷಣದೊಂದಿಗೆ ಆರಂಭವಾದ ಅಭಿಯಾನ, ನ. ೪ರಂದು ಅಧಿಕೃತವಾಗಿ ಉದ್ಘಾಟನೆಗೊಂಡಿತು. ಈವರೆಗೆ ೩೦೦ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೂ ೧೦೦ ಕೇಂದ್ರಗಳಲ್ಲಿ ನಡೆಯಲಿದೆ. ಕುಣಬಿ, ಗೌಳಿ, ಸಿದ್ದಿ, ಮರಾಠಿ ಸಮುದಾಯದವರು ಹೆಚ್ಚಾಗಿರುವ ಭಾಗಗಳಲ್ಲಿ ವಿಶಿಷ್ಟ ಕೇಂದ್ರಗಳ ಮೂಲಕ ಭಗವದ್ಗೀತೆಯ ಬೋಧನೆ ನಡೆಯುತ್ತಿದೆ ಎಂದರು.ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಶಿಕ್ಷಣದ ವಿದ್ಯಾರ್ಥಿಗಳಿಗೆ ಮೂರು ಹಂತಗಳಲ್ಲಿ ೭ ಸ್ಪರ್ಧೆಗಳು ನಡೆಯಲಿವೆ. ಡಿ. ೨ರಂದು ೧೦ ಗಂಟೆಗೆ ತಾಲೂಕು ಮಟ್ಟದ ಸ್ಪರ್ಧೆಗಳು ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ, ಜಿಲ್ಲಾ ಮಟ್ಟದ ಸ್ಪರ್ಧೆಗಳು ಡಿ. ೭ರಂದು ಶಿರಸಿಯ ಲಯನ್ಸ್ ಶಾಲೆಯಲ್ಲಿ, ಡಿ. ೧೧ರಂದು ರಾಜ್ಯಮಟ್ಟದ ಸ್ಪರ್ಧೆಗಳು ವಿಜಯಪುರದಲ್ಲಿ ಶ್ರೀಗಳ ಸಮ್ಮುಖದಲ್ಲಿ ನಡೆಯಲಿದೆ ಎಂದರು. ಜಿಲ್ಲಾ ಸಂಚಾಲಕ ಕೆ.ಜಿ. ಬೋಡೆ ಮಾತನಾಡಿ, ಪಕ್ಕದ ಧಾರವಾಡ ಜಿಲ್ಲೆಯ ಕಲಘಟಗಿ ಕೆಲವು ಭಾಗಗಳಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಶ್ರದ್ಧೆಯಿಂದ ಆ ಭಾಗದ ಜನರು ಭಾಗವಹಿಸುತ್ತಿದ್ದಾರೆ ಎಂದರು.ತಾಲೂಕು ಅಭಿಯಾನ ಸಮಿತಿ ಅಧ್ಯಕ್ಷ ಜಿ.ಎನ್. ಭಟ್ಟ ತಟ್ಟಿಗದ್ದೆ ಮಾತನಾಡಿ, ಈ ಬಾರಿ ಅಭಿಯಾನದ ಜಿಲ್ಲಾ ಮಟ್ಟದ ಸಮರ್ಪಣಾ ಕಾರ್ಯಕ್ರಮ ಯಲ್ಲಾಪುರದಲ್ಲಿ ಜ. ೪ರಂದು ನಡೆಯಲಿದೆ. ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದರು. ಜಿಲ್ಲಾ ಸಮಿತಿ ಸದಸ್ಯ ಶಂಕರ ಭಟ್ಟ ತಾರೀಮಕ್ಕಿ ಉಪಸ್ಥಿತರಿದ್ದರು.