ಭಗವದ್ಗೀತೆ ಈ ಆಧುನಿಕ ಕಾಲದ ಅವಶ್ಯಕತೆಯಾಗಿದೆ. ಗೀತೆ ಇಂದಿನ ಆಧುನಿಕ ಜ್ಞಾನ - ವಿಜ್ಞಾನ - ತಂತ್ರಜ್ಞಾನಗಳಿಗೆ ತುಂಬಾ ಹತ್ತಿರವಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ಉಡುಪಿ: ಭಗವದ್ಗೀತೆ ಈ ಆಧುನಿಕ ಕಾಲದ ಅವಶ್ಯಕತೆಯಾಗಿದೆ. ಗೀತೆ ಇಂದಿನ ಆಧುನಿಕ ಜ್ಞಾನ - ವಿಜ್ಞಾನ - ತಂತ್ರಜ್ಞಾನಗಳಿಗೆ ತುಂಬಾ ಹತ್ತಿರವಾಗಿದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ಅವರು ಮಂಗಳವಾರ ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಸಂತ ಸಂದೇಶ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂತ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತಿದ್ದರು.

ನಾವು ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳನ್ನು ಒಪ್ಪಿಕೊಂಡಾಗಿದೆ, ನಮ್ಮ ಯುವಜನತೆ ದೇಶಬಿಟ್ಟು ಹೊರದೇಶಗಳಿಗೆ ಹೋಗುತಿದ್ದಾರೆ, ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ, ಆದ್ದರಿಂದ ಅನಿವಾರ್ಯವಾಗಿ ಅವರಿದ್ದಲ್ಲಿ ಹೋಗಿ, ಅವರಿಗೆ ಅರ್ಥವಾಗುವಂತೆ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ತಿಳಿಹೇಳಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ಯುವಜನತೆ ಸಂಸ್ಕೃತಿಯಿಂದ ದೂರವಾದರೇ ಅಪಾಯ ಕಾದಿದೆ ಎಂದವರು ಹೇಳಿದರು. ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಅಮೇರಿಕಾದಲ್ಲಿ, ಆಸ್ಟ್ರೇಲಿಯಾದಲ್ಲಿ ಮಠಗಳನ್ನು ಸ್ಥಾಪಿಸಿ, ಅಲ್ಲಿರುವ ಭಾರತೀಯರಿಗೆ ಗೀತೆಯ, ಸಂಸ್ಕೃತಿಯ ಸಂಸ್ಕಾರಗಳ ಮಹತ್ವವನ್ನು ಕಲಿಸುತ್ತಿದ್ದಾರೆ, ಇದು ಇಂದು ತೀರಾ ಅಗತ್ಯವಾದ ಕೆಲಸ ಎಂದು ಶ್ಲಾಘಿಸಿದರು.ಪರ್ಯಾಯ ಪುತ್ತಿಗೆ ಶ್ರೀಗಳು, ಕೇವಲ ಪೂಜೆಯಿಂದ ಮಾತ್ರವಲ್ಲ, ದೇವರ ಸಂದೇಶಗಳನ್ನು ಮನನ ಅಧ್ಯಯನ ಕೂಡ ಆರಾಧನೆಯೇ ಆಗಿದೆ, ಈ ಹಿನ್ನೆಲೆಯಲ್ಲಿ ತಾವು ಗೀತಾ ಪರ್ಯಾಯವನ್ನು ಸಂಕಲ್ಪಿಸಿದ್ದು, ಕೋಟ್ಯಾಂತರ ಮಂದಿಯಿಂದ ಗೀತೆಯ ಲೇಖನದ ಮೂಲಕ ಗೀತಾಚಾರ್ಯನ ಆರಾಧನೆಯು ಯಶಸ್ವಿಯಾಗಿ ಕೃಷ್ಣನಿಗೆ ಸಮರ್ಪಣೆಯಾಗುತ್ತಿದೆ ಎಂದರು.

ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಬಡಗುಬೆಟ್ಟು ಕೋಆಪರೇಟಿವ್‌ ಬ್ಯಾಂಕಿನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ದಂಪತಿ, ನ್ಯಾಯವಾದಿ ಪ್ರದೀಪ್ ಕುಮಾರ್ ದಂಪತಿ, ಖ್ಯಾತ ವೈದ್ಯರಾದ ಡಾ. ಹರಿಶ್ಚಂದ್ರ ಮತ್ತು ಡಾ. ವ್ಯಾಸರಾಜ ತಂತ್ರಿ, ಮುಂಬೈಯ ಉದ್ಯಮಿ ರಾಧಾಕೃಷ್ಣ ಆಚಾರ್ಯ ಅವರಿಗೆ ಶ್ರೀ ಕೃಷ್ಣಗೀತಾನುಗ್ರಹ ಪ್ರಶಸ್ತಿ ನೀಡಿ ಶ್ರೀಗಳು ಗೌರವಿಸಿದರು. ವಿದ್ವಾನ್ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.