ಸಾರಾಂಶ
ಆ. ೩೧ರಂದು ನಂಜನಗೂಡಿನಲ್ಲಿ ತಾಲೂಕು ಉಪ್ಪಾರ ಸಂಘದ ವತಿಯಿಂದ ಶ್ರೀ ಭಗೀರಥ ಜಯಂತಿ -೨೦೨೫ ಹಾಗೂ ಶ್ರೀ ಭಗೀರಥ ಭವನ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಆ. ೩೧ರಂದು ನಂಜನಗೂಡಿನಲ್ಲಿ ತಾಲೂಕು ಉಪ್ಪಾರ ಸಂಘದ ವತಿಯಿಂದ ಶ್ರೀ ಭಗೀರಥ ಜಯಂತಿ -೨೦೨೫ ಹಾಗೂ ಶ್ರೀ ಭಗೀರಥ ಭವನ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್ ತಿಳಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆ. 31ರಂದು ಬೆಳಗ್ಗೆ 10.30ಗಂಟೆಗೆ ನಂಜನಗೂಡು ಮತ್ತು ಚಾಮರಾಜನಗರ ರಸ್ತೆಯ ಬಳಿ ನಡೆಯುವ ಶ್ರೀ ಭಗೀರಥ ಭವನ ಶಂಕುಸ್ಥಾಪನೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಡಾ. ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ಮಧ್ಯಾಹ್ನ ೩ ಗಂಟೆಗೆ ವೇದಿಕೆ ಕಾರ್ಯಕ್ರಮ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಮುಂಭಾಗ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಭಗೀರಥ ಭಾವಚಿತ್ರಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಡಾ. ಎಚ್.ಸಿ.ಮಹದೇವಪ್ಪ ಪುಷ್ಪಾರ್ಚನೆ ಮಾಡಲಿದ್ದು, ನಾಮಫಲಕ ಅನಾವರಣವನ್ನು ರಾಜ್ಯ ಉಪ್ಪಾರ ಸಂಘ ಹಾಗೂ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ನೆರವೇರಿಸಲಿದ್ದಾರೆ ಎಂದರು.ಅಧ್ಯಕ್ಷತೆಯನ್ನು ಶಾಸಕ ದರ್ಶನ್ ಧ್ರುವನಾರಾಯಣ ವಹಿಸಲಿದ್ದಾರೆ. ಬೆಳಗ್ಗೆ ೧೧ ಗಂಟೆಗೆ ಜೂನಿಯರ್ ಕಾಲೇಜು ಮುಂಭಾಗದಿಂದ ವೇದಿಕೆಯವರೆಗೆ ನಡೆಯುವ ಭಗೀರಥ ಭಾವಚಿತ್ರ ಮೆರವಣಿಗೆಗೆ ಸಂಸದ ಸುನೀಲ್‌ಬೋಸ್ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಅನಿಲ್‌ಚಿಕ್ಕಮಾಧು, ಎಚ್.ಎಂ.ಗಣೇಶ್ ಪ್ರಸಾದ್, ಕೆ.ರವಿಶಂಕರ್, ಮಾಜಿ ಶಾಸಕರಾದ ಬಿ.ಹರ್ಷವರ್ಧನ್, ಕಳಲೆ ಕೇಶವಮೂರ್ತಿ ಭಾಗವಹಿಸಲಿದ್ದಾರೆ ಎಂದರು.ನಂಜನಗೂಡಿನಲ್ಲಿ ಸಮುದಾಯ ಭವನ ನಿರ್ಮಿಸಲು ಹಲವಾರು ಬಾರಿ ಮನವಿ ಮಾಡಲಾಗಿತ್ತು, ಸುಮಾರು ೨೫ ರಿಂದ ೩೦ ಸಾವಿರ ಜನ ಸೇರುವ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಉಪ್ಪಾರ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಗಡಿಕಟ್ಟೆ ಯ. ಸಿ.ಕೆ. ಮಹದೇವಶೆಟ್ಟಿ, ಸಿ.ಎಸ್. ನಾಗರಾಜು, ಶಿವಕುಮಾರ್, ಶ್ರೀನಿವಾಸ್ ಇದ್ದರು.