ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಭಗೀರಥ ಮಹರ್ಷಿಗಳ ತಾಳ್ಮೆ, ನಿರಂತರ ಪ್ರಯತ್ನ ನೆಮ್ಮಲ್ಲರಿಗೂ ದಾರಿ ದೀಪವಾಗಬೇಕು. ಹಿಡಿದ ಕೆಲಸವನ್ನು ಬೀಡದೆ ಸಾಧಿಸುವುದು ಎನ್ನುವುದಕ್ಕೆ ಭಗೀರಥ ಮಹರ್ಷಿಗಳು ನಿದರ್ಶನವಾಗಿದ್ದಾರೆ ಎಂದು ತುಮಕೂರು ನಗರ ಶಾಸಕ ಬಿ.ಜಿ.ಜ್ಯೋತಿ ಗಣೇಶ್ ತಿಳಿಸಿದ್ದಾರೆ.ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ತುಮಕೂರು ಜಿಲ್ಲಾ ಉಪ್ಪಾರರ (ಸಗರ ವಂಶ) ಸಂಘದ, ಭಗೀರಥ ಪತ್ತಿನ ಸಹಕಾರ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ತಮ್ಮ ಪೂರ್ವಜರ ಮುಕ್ತಿಗೋಸ್ಕರ ಶಿವನ ಕುರಿತು ತಪ್ಪಸ್ಸು ಮಾಡಿ, ಶಿವನಿಂದ ಗಂಗೆಯನ್ನು ಭೂ ಲೋಕಕ್ಕೆ ಕರೆತಂದವರು, ಇಂತಹ ಮಹಾಪುರುಷರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.ತಹಸೀಲ್ದಾರ್ ರಾಜೇಶ್ವರಿ ಮಾತನಾಡಿ, ಭಾರತೀಯ ಪುರಾಣದಲ್ಲಿ ಭಗೀರಥ ಮಹರ್ಷಿಗಳಿಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಜೀವಜಲ, ಗಂಗಾ ಮಾತೆ ಎಂದು ಪೂಜಿಸುವ ಗಂಗೆಯನ್ನು ಭೂಮಿಗೆ ತಂದುಕೊಟ್ಟುವರು ಭಗೀರಥ ಮಹರ್ಷಿಗಳು, ಇಂದು ನೀರಿಲ್ಲದೆ ಒಂದು ದಿನ ಕಳೆಯಲು ಸಾಧ್ಯವಿಲ್ಲ. ಭಗೀರಥ ಮಹರ್ಷಿಗಳ ಶ್ರದ್ದೆ, ಭಕ್ತಿ, ನಿಷ್ಠೆ, ತಾಳ್ಮೆ ಮತ್ತು ಸಹನೆಯನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕೆಂದರು.
ಭಾರತೀಯ ಪರಂಪರೆಯಲ್ಲಿ ಅನೇಕ ಮಹನೀಯರು ಆಗಿ ಹೋಗಿದ್ದಾರೆ. ಅವರಲ್ಲಿ ಕೆಲವರು ಮಾತ್ರ ಇಂದಿಗೂ ಜನ ಮಾನಸದಲ್ಲಿ ಉಳಿದ್ದಿದ್ದಾರೆ. ಇಲ್ಲಿ ವ್ಯಕ್ತಿಗಿಂತ ವ್ಯಕ್ತಿತ್ವ ಹೆಚ್ಚು ಮೌಲ್ಯವನ್ನು ಪಡೆದುಕೊಳ್ಳುತ್ತದೆ.ಜನರಲ್ಲಿ ಪೂಜ್ಯನೀಯರಾಗಿ ಉಳಿಯತ್ತಾರೆ.ಅಂತಹವರಲ್ಲಿ ಭಗೀರಥ ಮಹರ್ಷಿಯೂ ಒಬ್ಬರು. ಅವರ ವ್ಯಕ್ತಿತ್ವದ ಒಂದಾದರೂ ಅಂಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ದಾರಿಯಲ್ಲಿ ನಡೆಯೋಣ ಎಂದು ತಹಶೀಲ್ದಾರ್ ರಾಜೇಶ್ವರಿ ತಿಳಿಸಿದರು.ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಸಗರ ಚಕ್ರವರ್ತಿಯ ಕುಟುಂಬಕ್ಕೆ ಸೇರಿದ ಮಹರ್ಷಿ ಭಗೀರಥರು ಸ್ವಾಭಿಮಾನಿಯಾಗಿ, ಛಲ ಬೀಡದೆ ಹತ್ತಾರು ವರ್ಷಗಳ ಕಾಲ ಶಿವನನ್ನು ಕುರಿತು ತಪಸ್ಸು ಮಾಡಿ, ಗಂಗೆಯನ್ನು ಭೂಮಿಗೆ ತಂದು ತಮ್ಮ ಪೂರ್ವಜರಿಗೆ ಸದ್ಗತಿ ದೊರೆಯುವಂತೆ ಮಾಡಿದ ಮಹಾನುಭವ ಎಂದರು.
ಇಂದು ಸಹ ಹಲವು ವರ್ಷಗಳ ನಿರಂತರ ಪ್ರಯತ್ನಕ್ಕೆ ಭಗೀರಥ ಪ್ರಯತ್ನ ಎಂದು ಕರೆಯುವುದನ್ನು ನಾವು ಕಾಣಬಹುದು. ಅಂದೇ ನೀರಿಗಾಗಿ ಈ ಮಟ್ಟದ ಹೋರಾಟ ನಡೆದಿದೆ. ಹಾಗಾಗಿ ನಾವೆಲ್ಲರೂ ಪರಿಸರ ಸಮತೋಲನಕ್ಕೆ ಮುಂದಾಗಿ, ನೀರನ್ನು ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಶುದ್ಧ ನೀರು ನೀಡುವುದು ಭಗೀರಥ ಮಹರ್ಷಿಗಳಿಗೆ ನೀಡುವ ಕೊಡುಗೆ. ಉಪ್ಪಾರ ಸಮುದಾಯವರು ಶೈಕ್ಷಣಿಕವಾಗಿ ಬೆಳೆಯಲು ಎಲ್ಲಾ ರೀತಿಯಿಂದಲೂ ಮುಂದಾಗಬೇಕು ಎಂದರು.ತುಮಕೂರು ಜಿಲ್ಲಾ ಉಪ್ಪಾರರ (ಸಗರ ವಂಶ)ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಭಗೀರಥ ಸಗರ ವಂಶದ ಮೂಲ ಪುರುಷ. ಇಶ್ವಾಕು ವಂಶಕ್ಕೆ ಸೇರಿದ ಶ್ರೀರಾಮಚಂದ್ರ ಸಹ ನಮ್ಮವ. ಉಪ್ಪು ತೆಗೆಯುವುದು ಮಾರುವುದು ನಮ್ಮ ವೃತ್ತಿ. ಆದರೆ ಇಂದು ಉಪ್ಪು ದೊಡ್ಡ ಉದ್ಯಮವಾಗಿ ಬೆಳೆದು, ಉಪ್ಪಾರರಿಂದ ಬಹುದೂರ ಸರಿದಿದೆ. ಹಾಗಾಗಿ ಸಮುದಾಯದ ಜನರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಅವರು ಸಹ ಒಳ್ಳೆಯ ಹುದ್ದೆಗಳನ್ನು ಪಡೆಯುವಂತೆ ಮಾಡಬೇಕಾಗಿದೆ. ಅದಕ್ಕೆ ಶೈಕ್ಷಣಿಕವಾಗಿ ಸಮುದಾಯವನ್ನು ಮುಂದೆ ತರಲು ಒಗ್ಗಟ್ಟು ಪ್ರದರ್ಶನ ಅಗತ್ಯವಾಗಿದೆ.ಮುಂದಿನ ಜೂನ್ ಮೊದಲ ವಾರದಲ್ಲಿ ತುಮಕೂರಿನಲ್ಲಿ ದೊಡ್ಡ ಮಟ್ಟದಲ್ಲಿ ಭಗೀರಥ ಜಯಂತಿ ಆಚರಿಸಲು ಎಲ್ಲಾ ತಯಾರಿ ನಡೆದಿದೆ ಎಂದರು.
ಸಮುದಾಯದ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸರಕಾರಗಳಿಗೆ ತಮ್ಮ ಇರುವಿಕೆಯನ್ನು ಪ್ರಚುರ ಪಡಿಸಬೇಕಾಗಿದೆ. ಆಗ ಮಾತ್ರ ಸರಕಾರದಿಂದ ಶೈಕ್ಷಣಿಕ, ಅರ್ಥಿಕ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದರು.ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್, ತುಮಕೂರು ಜಿಲ್ಲಾ ಉಪ್ಪಾರ(ಸಗರ ವಂಶ) ಸಂಘದ ಅಧ್ಯಕ್ಷ ಸಿ.ಎಸ್. ಮಂಜುನಾಥ್, ಉಪಾಧ್ಯಕ್ಷರಾದ ರೇಣುಕಯ್ಯ, ಡಾ.ನಾಗೇಶ್,ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ನಾಗರಾಜು, ನಿರ್ದೇಶಕರುಗಳಾದ ಮೂಡ್ಲಗಿರಿಯಪ್ಪ,ಕೃಷ್ಣಮೂರ್ತಿ, ಸತೀಶ್ ಹೆಚ್.ಆರ್, ರಂಗನಾಥ್. ಎನ್.ಆರ್, ಶಿವಣ್ಣ ಬೇಕರಿ, ಹರೀಶ್ ಮೆಳೆಕೋಟೆ, ಲೋಕೇಶ್, ಚನ್ನಿಗರಾಯಪ್ಪ, ಅನಿಲ್, ರಾಮಚಂದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.