ಭಗವಂತ ಖೂಬಾರಿಂದ ಬ್ರಿಮ್ಸ್‌ ಕಾರ್ಮಿಕರ ಹಣ ಲೂಟಿ: ಈಶ್ವರ ಖಂಡ್ರೆ

| Published : Apr 21 2024, 02:29 AM IST

ಭಗವಂತ ಖೂಬಾರಿಂದ ಬ್ರಿಮ್ಸ್‌ ಕಾರ್ಮಿಕರ ಹಣ ಲೂಟಿ: ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊರಗುತ್ತಿಗೆ ದಲಿತ ಕಾರ್ಮಿಕರಿಗೆ ₹5-6 ಸಾವಿರ ಸಂಬಳ ನೀಡಿದ್ದ ಸಚಿವ ಭಗವಂತ ಖೂಬಾ. ದಲಿತರ ಹಣ ಲೂಟಿ ಹೊಡೆದಿರುವ ಖೂಬಾರನ್ನು ಈ ಬಾರಿ ಎಲ್ಲ ದಲಿತ ಮತದಾರರೂ ತಿರಸ್ಕರಿಸುತ್ತಾರೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಭಗವಂತ ಖೂಬಾ ತಮ್ಮದೇ ಪಕ್ಷದ ರಾಜ್ಯ ಸರ್ಕಾರ ಇದ್ದಾಗ, ತಮ್ಮ ಪ್ರಭಾವ ಬೀರಿ ತಮ್ಮ ಸಹೋದರರಿಗೆ ಬ್ರಿಮ್ಸ್ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯ ಹೊರಗುತ್ತಿಗೆ ಕೊಡಿಸಿದರು. ಬಡ ಹೊರಗುತ್ತಿಗೆ ದಲಿತ ಕಾರ್ಮಿಕರಿಗೆ ಕನಿಷ್ಠ 16 ಸಾವಿರ ರು. ಸಂಬಳ ಕೊಡಬೇಕು. ಆದರೆ, ಕೇವಲ 5-6 ಸಾವಿರ ರು. ಸಂಬಳ ನೀಡಿ ಬಡ ದಲಿತರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಪತ್ರಿಕಾ ಭವನದಲ್ಲಿ ಶನಿವಾರ ಮಾತನಾಡಿದ ಅವರು, ಕಾರ್ಮಿಕರ ಪಿಎಫ್ ಹಣ ಕಟ್ಟಿಲ್ಲ. ಇಎಸ್‌ಐ ಹಣ ಕಟ್ಟಿಲ್ಲ. ಈ ಬಗ್ಗೆ ದಲಿತ ಸಂಘಟನೆಗಳೆ ದೂರು ನೀಡಿವೆ. ಈ ದೂರಿನ ಆಧಾರದ ಮೇಲೆ ಕಲಬುರಗಿ ಸಹಾಯಕ ಕಾರ್ಮಿಕ ಆಯುಕ್ತರು ಇವರದೇ ರಾಜ್ಯ ಸರ್ಕಾರ ಇದ್ದಾಗ 2021ರಲ್ಲಿ ನೋಟಿಸ್ ನೀಡಿ, 1948ರ ಕನಿಷ್ಠ ವೇತನ ಕಾಯಿದೆ ಉಲ್ಲಂಘನೆ ಆಗಿದೆ. 7 ದಿನಗಳೊಳಗಾಗಿ ಬಾಕಿ ಹಣ 38 ಲಕ್ಷ ರು.ಗಳನ್ನು ಕಾರ್ಮಿಕರಿಗೆ ಪಾವತಿ ಮಾಡಿ ಎಂದು ಹೇಳಿದ್ದಾರೆ. ದಲಿತರ ಹಣ ಲೂಟಿ ಹೊಡೆದಿರುವ ಖೂಬಾರನ್ನು ಈ ಬಾರಿ ಎಲ್ಲ ದಲಿತ ಮತದಾರರೂ ತಿರಸ್ಕರಿಸುತ್ತಾರೆ ಎಂದರು.

ಬೆಳೆ ವಿಮೆ ನೀಡದೆ ಸುಳ್ಳು ಮಾತು: ಬೆಳೆ ವಿಮೆ ಯೋಜನೆಯಡಿ ಬೀದರ್ ಜಿಲ್ಲೆಯಲ್ಲಿ 1200 ಕೋಟಿ ರು. ಪರಿಹಾರ ನೀಡಲಾಗಿದೆ ಎಂದು ಹೇಳಿರುವ ಭಗವಂತ ಖೂಬಾ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಜಿಲ್ಲೆಯ ರೈತರು ಕಟ್ಟಿರುವ ಕಂತೆಷ್ಟು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಕಂತಿನ ಪಾಲೆಷ್ಟು, ವಿಮಾ ಕಂಪನಿಗಳು ಒಟ್ಟು ಎಷ್ಟು ಹಣ ಸಂಗ್ರಹಿಸಿ, ಎಷ್ಟು ಪರಿಹಾರ ನೀಡಿದ್ದಾರೆ ಎಂದು ಬಹಿರಂಗ ಪಡಿಸಲಿ ಎಂದರು.

ಡಿಸಿಸಿ ಬ್ಯಾಂಕ್ ಕುರಿತು ಸುಳ್ಳು ಆರೋಪ: ನಮ್ಮ ಕುಟುಂಬದ ಮೇಲೆ ಬರೀ ಸುಳ್ಳು ಆರೋಪ ಮಾಡಿದ್ದಾರೆ. ಡಿಸಿಸಿ ಬ್ಯಾಂಕ್ ಮೇಲಿನ ಐಟಿ ದಾಳಿ ನಮ್ಮ ಕರ್ಮಕಾಂಡ ಎಂದು ಖೂಬಾ ಹೇಳಿದ್ದಾರೆ. ಆದಾಯ ತೆರಿಗೆ ಇಲಾಖೆ ದಾಳಿ ಮಾಡಬೇಕಾದರೆ 6 ತಿಂಗಳು ಸಿದ್ಧತೆ ಮಾಡಿಕೊಳ್ಳುತ್ತದೆ. ಹಿಂದಿನ ಸಾಲಿನ ಬ್ಯಾಲೆನ್ಸ್ ಶೀಟ್, ಕಟ್ಟಿದ ತೆರಿಗೆ ಎಲ್ಲ ಪರಿಶೀಲಿಸಿ ನಂತರ ದಾಳಿ ಮಾಡುತ್ತದೆ. ಆದರೆ ನನ್ನ ಸೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 3 ತಿಂಗಳೂ ಆಗಿಲ್ಲ. ಈ ದಾಳಿಯ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಆರೋಪಿಸಿದರು. ನಾಗಮಾರಪಳ್ಳಿ ಸಹೋದರರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಕೇಂದ್ರ ಬಿಜೆಪಿ ನಾಯಕರನ್ನು ಅಂಗಲಾಚಿ ಅವರೇ ದಾಳಿ ಮಾಡಿಸಿದ್ದಾರೆ ಎಂದರು.

ನನ್ನ ಸಹೋದರ ಅಮರ್ ಖಂಡ್ರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ 3 ತಿಂಗಳೂ ಆಗಿಲ್ಲ. ಹಿಂದಿನ ಅವಧಿಯಲ್ಲಿ ಆಗಿರುವ ಹಣಕಾಸು ದುರ್ಬಳಕೆ ಬಗ್ಗೆ ನಾನೇ ಸಹಕಾರ ಸಂಘದ ನಿಬಂಧಕರಿಗೆ ದೂರು ನೀಡಿದ್ದೇನೆ. ನನ್ನ ಸಹೋದರ ಅಧ್ಯಕ್ಷರಾಗಿ ಹಿಂದೆ ತಪ್ಪು ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಖೂಬಾ ವಿರುದ್ಧ ಮಾನನಷ್ಟು ಮೊಕದ್ದಮೆ: ಇನ್ನು ಭಗವಂತ ಖೂಬಾ ದಲಿತರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ರೀತಿ ಸುಳ್ಳು ಹೇಳಿ ತೇಜೋ ವಧೆ ಮಾಡುತ್ತಿರುವ ಭಗವಂತ ಖೂಬಾ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ ಮತ್ತು ಮಾನನಷ್ಟ ಮೊಕದ್ದಮೆಯನ್ನೂ ಹೂಡುತ್ತೇನೆ ಎಂದು ಈಶ್ವರ ಖಂಡ್ರೆ ಹೇಳಿದರು.

ಭೀಮಣ್ಣ ಖಂಡ್ರೆ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ನಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣದ ನೇತಾರರು, ಶತಾಯುಷಿಯ ಬಗ್ಗೆ ಸುಳ್ಳು ಆರೋಪ ಮಾಡ್ತಾರೆ. ಆ ನೈತಿಕತೆ ಅವರಿಗಿಲ್ಲ. ಭೀಮಣ್ಣ ಖಂಡ್ರೆ ಸಾರಿಗೆ ಸಚಿವರಾಗಿದ್ದಾಗ ನಕಲಿ ಬಸ್ ಟಿಕೆಟ್ ಹಗರಣವನ್ನು ಅವರೇ ಬಯಲಿಗೆಳೆದು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಕೊಡಿಸಿದರು. ಸದನದ ಕಲಾಪದಲ್ಲಿ ಈ ಎಲ್ಲದರ ಬಗ್ಗೆಯೂ ಉಲ್ಲೇಖ ಇದೆ. ಹೋಗಿ ಅದನ್ನು ತೆಗೆಸಿ ನೋಡಲಿ ಎಂದರು.

ಬೀದರ್ ಲೋಕಸಭಾ ಕ್ಷೇತ್ರದ ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. 10 ವರ್ಷದ ಅಧಿಕಾರ ಕೊಟ್ಟರೂ, ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿರುವ ಭಗವಂತ ಖೂಬಾಗೆ ವಿಶ್ರಾಂತಿ ಕೊಟ್ಟು ಮನೆಯಲ್ಲಿ ಕೂರಿಸಲು ಮತದಾರರು ತೀರ್ಮಾನಿಸಿದ್ದಾರೆ ಎಂದು ಈಶ್ವರ ಖಂಡ್ರೆ ಹೇಳಿದರು.