ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್‌ಅಧಿಕಾರ ದರ್ಪ, ಅಹಂಕಾರದ ನಡುವಳಿಕೆಯಿಂದ ಈಗಾಗಲೇ ಸ್ವಪಕ್ಷೀಯರಿಂದಷ್ಟೇ ಅಲ್ಲ ಸಾರ್ವಜನಿಕರ ವಿಶ್ವಾಸವನ್ನು ಕಳೆದುಕೊಂಡು ತಿರಸ್ಕರಿಸಲ್ಪಟ್ಟಿರುವ ಹಾಲಿ ಸಂಸದ ಭಗವಂತ ಖೂಬಾ ಲೋಕಸಭಾ ಚುನಾವಣೆಯಲ್ಲಿ ಭಾರಿ ಸೋಲು ಅನುಭವಿಸಲಿದ್ದು, ಅವರಿಗೆ ಇದು ಕೊನೆಯ ಚುನಾವಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬರೀ ಸುಳ್ಳು, ಸುಳ್ಳೇ ಇವರ ಮನೆ ದೇವ್ರು. ಸಿಪೆಟ್‌ಗೆ ಸಿಬ್ಬಂದಿ ನೇಮಕಾತಿಗೆ ಅನುಮೋದನೆಯನ್ನು ತರಲಾಗದೇ ಸುಳ್ಳಾಯ್ತು. ಎಫ್‌ಎಂ ಚಾಲನೆ ಸಿಕ್ಕಿತಾದರೂ 2ವಾರದಲ್ಲಿ ಆರಂಭವಾಗುತ್ತೆ ಎಂದದ್ದು ತಿಂಗಳುಗಳು ಉರುಳಿದರೂ ಕೇಳಿಸುತ್ತಿಲ್ಲ, ಉಳಿಯಲಿಲ್ಲ, ವಿಮಾನಯಾನ ಹಾರದೇ ಹೋಯ್ತು ಹೀಗೆಯೇ ಖೂಬಾ ಸುಳ್ಳು ಆಶ್ವಾಸನೆಗೆ ಮುಂಬರುವ ಚುನಾವಣೆಯಲ್ಲಿ ತಕ್ಕ ಶಾಸ್ತಿ ಆಗುತ್ತೆ ಎಂದರು.ಜಿಲ್ಲೆಯ ರೈತರ ಜೀವನಾಡಿ ಎಂಬಂತಿದ್ದ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು ಬಂದ್ ಮಾಡಿಸುವಲ್ಲಿ ಖೂಬಾ ಪಾತ್ರ ಬಹು ದೊಡ್ಡದಿದೆ. ತಮ್ಮದೇ ಸರ್ಕಾರವಿದ್ದಾಗ ಕಾರ್ಖಾನೆಯ ಪುನಶ್ಚೇತನಕ್ಕೆ ಅನುದಾನ ಬಿಡುಗಡೆ ಮಾಡಿಸುವ ವಿಷಯವಾಗಿ ಸ್ವಪಕ್ಷದ ಮುಖಂಡರ ವಿರುದ್ಧದ ವೈಯಕ್ತಿಕ ದ್ವೇಷದಿಂದ ಸಾಕಾರಗೊಳಿಸದೇ ಕಾರ್ಖಾನೆ ಬಂದ್ ಆಗುವ ಸ್ಥಿತಿಗೆ ತಳ್ಳಲಾಯಿತು.
ಸ್ವಪಕ್ಷೀಯ ಶಾಸಕರ ಸಾಷ್ಟಾಂಗ, ರೈತರ ಶಾಪ ಖೂಬಾಗೆ ತಟ್ಟುತ್ತೆ: ಇಂಥದ್ದೆಲ್ಲ ವಿಷಯದಲ್ಲಿ ಅಹಂಕಾರ ದರ್ಪದ ಮನೋಭಾವ ಹೊಂದಿರುವ ಖೂಬಾಗೆ ಟಿಕೆಟ್ ನೀಡಬೇಡಿ. ಅವರಿಂದ ಕೊಲೆ ಬೆದರಿಕೆ ಇದೆ ಎಂದು ಅವರದ್ದೇ ಪಕ್ಷದ ಶಾಸಕರೊಬ್ಬರು ಸಾಷ್ಟಾಂಗ ನಮಸ್ಕಾರ ಹಾಕಿದರೂ ಅದನ್ನು ಲೆಕ್ಕಿಸದೇ ಪಕ್ಷ ಟಿಕೆಟ್ ನೀಡಿತು ಇಂಥದರಲ್ಲಿ ಖೂಬಾ ಬೆಂಬಲ ಸಿಕ್ಕೀತೆ ಎಂದು ಪ್ರಶ್ನಿಸಿದ ಅವರು, ಕ್ಷೇತ್ರದಲ್ಲಿ ಖೂಬಾಗೆ ಈ ಬಾರಿ ಭಾರಿ ಅಂತರದ ಸೋಲು ಗ್ಯಾರಂಟಿ ಎಂದು ಭವಿಷ್ಯ ನುಡಿದರು.ಕೇಂದ್ರ ಸಚಿವರಾಗಿದ್ದುಕೊಂಡು ಅವರದ್ದೇ ಗೊಬ್ಬರ ಖಾತೆಯಿದ್ದು, ರೈತನೋರ್ವ ಗೊಬ್ಬರ ಕೊರತೆಯನ್ನು ಮುಂದಿಟ್ಟಾಗ ಮನಬಂದಂತೆ ಬೈದು, ಶಿಕ್ಷಕನಾಗಿದ್ದ ರೈತನನ್ನು ಅಮಾನತುಗೊಳಿಸುವಂತೆ ಮಾಡಿದ ಭಗವಂತ ಖೂಬಾಗೆ ರೈತರ ಶಾಪ ತಟ್ಟದೇ ಇರದು ಎಂದರು.
ಕೇಂದ್ರದಿಂದ ಎಷ್ಟು ಮನೆ ಮಂಜೂರು, ಜನರಿಗೆ ಖೂಬಾ ಲೆಕ್ಕ ಕೊಡಲಿ: ಕೇಂದ್ರದ ಸಚಿವರಾಗಿರುವ ಭಗವಂತ ಖೂಬಾ ಬಡವರಿಗೆ ಎಷ್ಟು ಮನೆಗಳನ್ನು ಮಂಜೂರಿಸಿದ್ದಾರೆ ಎಂಬುವುದನ್ನು ಕ್ಷೇತ್ರದ ಜನತೆಗೆ ಲೆಕ್ಕ ಕೊಡಲಿ. ಈ ಹಿಂದೆ ಭಾಲ್ಕಿಯಲ್ಲಿ ದ್ವೇಷ ಮನೋಭಾವನೆಯಿಂದ 8 ಸಾವಿರ ಬಡವರ ಮನೆಗಳಲ್ಲಿ ಕೊಕ್ಕೆ ಹಾಕಿಸಿದ್ದರು. ಅವರಲ್ಲಿ ಕೆಲವರು ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆಗೂ ಶರಣಾದರು, ನಾನೀಗ ಸಚಿವ ಜಮೀರ್ ಅಹ್ಮದ್ ಅವರೊಟ್ಟಿಗೆ ಚರ್ಚಿಸಿದ್ದು ಎಲ್ಲರಿಗೂ ಮನೆಯ ಕಂತಿನ ಹಣ ಬಿಡುಗಡೆ ಮಾಡಿಸುತ್ತಿದ್ದೇನೆ ಎಂದು ಈಶ್ವರ ಖಂಡ್ರೆ ತಿಳಿಸಿದರು.ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್ ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಭೀಮರಾವ್ ಪಾಟೀಲ್, ಪಕ್ಷದ ಜಿಲ್ಲಾಧ್ಯಕ್ಷ, ಬಿಡಿಎ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಾಂಗ್ರೆಸ್ ಘೋಷಿತ ಅಭ್ಯರ್ಥಿ ಸಾಗರ ಖಂಡ್ರೆ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಶಾಸಕರಾದ ವಿಜಯಸಿಂಗ್, ಅಶೋಕ ಖೇಣಿ, ಪುಂಡಲಿಕರಾವ್, ಮುಖಂಡರಾದ ಮಾಲಾ ಬಿ. ನಾರಾಯಣರಾವ್, ಸುಭಾಷ ರಾಠೋಡ, ಆನಂದ ದೇವಪ್ಪ ಹಾಗೂ ದತ್ತಾತ್ರೆಯ ಮೂಲಗೆ ಇದ್ದರು.
;Resize=(128,128))
;Resize=(128,128))
;Resize=(128,128))