ಕಾಂಗ್ರೆಸ್‌ ತೆಕ್ಕೆಗೆ ಭಾಗ್ಯನಗರ ಪಟ್ಟಣ ಪಂಚಾಯಿತಿ

| Published : Aug 23 2024, 01:09 AM IST

ಸಾರಾಂಶ

ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಿದ್ದು, ಅಧ್ಯಕ್ಷರಾಗಿ ತುಕಾರಾಮಪ್ಪ ಗಡಾದ ಹಾಗೂ ಉಪಾಧ್ಯಕ್ಷರಾಗಿ ಹೊನ್ನೂರಸಾಬ ಭೈರಾಪುರ ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ತುಕಾರಾಮಪ್ಪ, ಉಪಾಧ್ಯಕ್ಷರಾಗಿ ಹೊನ್ನೂರುಸಾಬ

ಸೋಲಿಲ್ಲದ ಸರದಾರರಿಗೆ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಅಧಿಪತ್ಯ ಸಾಧಿಸಿದ್ದು, ಅಧ್ಯಕ್ಷರಾಗಿ ತುಕಾರಾಮಪ್ಪ ಗಡಾದ ಹಾಗೂ ಉಪಾಧ್ಯಕ್ಷರಾಗಿ ಹೊನ್ನೂರಸಾಬ ಭೈರಾಪುರ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ವಾಸುದೇವ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಪರಶುರಾಮ ನಾಯಕ ಪರಾಭವಗೊಂಡಿದ್ದಾರೆ.

ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ ವಿಠ್ಠಲ ಚೌಗಲೆ ಫಲಿತಾಂಶ ಘೋಷಣೆ ಮಾಡಿದರು.

ತುಕಾರಾಮಪ್ಪ ಗಡಾದ ಹಾಗೂ ಹೊನ್ನೂರುಸಾಬ ತಲಾ 12 ಮತ ಪಡೆದರೇ ಬಿಜೆಪಿ ಅಭ್ಯರ್ಥಿಗಳಿಗೆ ತಲಾ 9 ಮತ ಬಂದಿವೆ.

ಬಿಜೆಪಿಯ ಎಲ್ಲ ಸದಸ್ಯರು ಬಿಜೆಪಿಗೆ ಮತ ಹಾಕಿದ್ದರೇ ಕಾಂಗ್ರೆಸ್‌ನ 8 ಸದಸ್ಯರು, 2 ಪಕ್ಷೇತರರು ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಮತ ಚಲಾಯಿಸುವ ಮೂಲಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಲಿಲ್ಲದ ಸರದಾರರು:ಅಧ್ಯಕ್ಷರಾಗಿ ಆಯ್ಕೆಯಾಗಿರುವ ತುಕಾರಾಮಪ್ಪ ಗಡಾದ ಗ್ರಾಪಂ ಸದಸ್ಯರಾಗಿ ಮೂರು ಅವಧಿಗೆ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಎರಡು ಅವಧಿಗೆ ಸೇರಿದಂತೆ ಬರೋಬ್ಬರಿ 5 ಬಾರಿ ಗೆಲುವು ಸಾಧಿಸಿದ ಗೆಲುವಿನ ಸರದಾರರು. ಹಾಗೆಯೇ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನೂರಸಾಬ ಗ್ರಾಪಂಯಲ್ಲಿ ಎರಡು ಬಾರಿ, ಪಟ್ಟಣ ಪಂಚಾಯಿತಿ ಸದಸ್ಯರಾಗಿ ಎರಡು ಬಾರಿ ಸೇರಿ ನಾಲ್ಕುಬಾರಿ ಆಯ್ಕೆಯಾಗಿದ್ದು, ಇವರು ಸಹ ಸೋಲಿಲ್ಲದ ಸರದಾರರೇ ಆಗಿದ್ದಾರೆ.

ವಿಜಯೋತ್ಸವ:

ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿದರು, ಪಟಾಕಿ ಸಿಡಿಸಿ, ಸಂಭ್ರಮಿಸಿದರು.

ಸಮಸ್ಯೆಗಳು ನೂರಾರು:

ಭಾಗ್ಯನಗರ ಪಟ್ಟಣ ಪಂಚಾಯಿತಿ ಈಗ ರಚನೆಯಾಗಿ ಎರಡನೇ ಅವಧಿಗೆ ಚುನಾವಣೆ ನಡೆದಿದೆ. ಪಟ್ಟಣ ಪಂಚಾಯಿತಿ ಎದುರು ಸಾಲು ಸಾಲು ಸಮಸ್ಯೆಗಳು ಇವೆ. ಅದರಲ್ಲೂ ಭಾಗ್ಯನಗರ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆಯ ದೊಡ್ಡ ಸಮಸ್ಯೆಯಿದೆ. ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ಇದ್ದು, ಇವುಗಳತ್ತ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಗಮನ ಹರಿಸಬೇಕಾಗಿದೆ.

ಗೆಲುವು ಸಾಧಿಸಿರುವುದು ಖುಷಿಯಾಗಿದೆ. ನೀರಿನ ಸಮಸ್ಯೆ ಮತ್ತು ಕಟ್ಟಡ ಪರವಾನಿಗೆ ಸಮಸ್ಯೆಯ ಬಗ್ಗೆ ಶಾಸಕರೊಂದಿಗೆ ಚರ್ಚೆ ಮಾಡಿದ್ದು, ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅಧ್ಯಕ್ಷ ತುಕಾರಾಮಪ್ಪ ಗಡಾದ ತಿಳಿಸಿದ್ದಾರೆ.