ಸಾರಾಂಶ
೧೯ನೇ ವಾರ್ಡಿನ ಸದಸ್ಯೆ ಲತಾ ಎಂ.ಸಿ. ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಸಂಡೂರು: ಪಟ್ಟಣದ ಪುರಸಭೆಯ ೧೦ನೇ ಅವಧಿಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಕ್ಕಾಗಿ ಗುರುವಾರ ನಡೆದ ಚುನಾವಣೆಯಲ್ಲಿ ೧೪ನೇ ವಾರ್ಡಿನ ಸದಸ್ಯ ಎಸ್.ಸಿರಾಜ್ ಹುಸೇನ್ ಅಧ್ಯಕ್ಷರಾಗಿ, ೧೯ನೇ ವಾರ್ಡಿನ ಸದಸ್ಯೆ ಲತಾ ಎಂ.ಸಿ. ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಬಿಸಿ ‘ಎ’ ವರ್ಗಕ್ಕೆ ಮೀಸಲಾಗಿದ್ದ ಮತ್ತು ತೀವ್ರ ಕುತೂಹಲ ಕೆರಳಿಸಿದ್ದ ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ಪಕ್ಷದ ಸದಸ್ಯರಾದ ಎಸ್.ಸಿರಾಜ್ ಹುಸೇನ್, ಕೆ.ವಿ. ಸುರೇಶ್, ಬಿಜೆಪಿಯ ಕೆ.ದುರ್ಗಮ್ಮ ಸ್ಪರ್ಧಿಸಿದ್ದರು. ೨೩ ಸದಸ್ಯರಲ್ಲಿ ೨೧ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಚಲಾಯಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಸಿರಾಜ್ ಪರ ೧೩, ವಿರೋಧವಾಗಿ ೯ ಮತ ಚಲಾಯಿಸಲ್ಪಟ್ಟವು. ಸಮೀಪದ ಪ್ರತಿಸ್ಪರ್ಧಿ ಕೆ.ದುರ್ಗಮ್ಮ ಪರ ೯, ವಿರೋಧವಾಗಿ ೧೩ ಮತ ವ್ಯಕ್ತವಾದವು. ಕೆ.ವಿ. ಸುರೇಶ್ ಪರವಾಗಿಯಾಗಲಿ ಅಥವಾ ವಿರೋಧವಾಗಿಯಾಗಲಿ ಒಂದು ಮತವೂ ವ್ಯಕ್ತವಾಗಲಿಲ್ಲ.ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಲತಾ ಎಂ.ಸಿ., ಬಿಜೆಪಿ ಸದಸ್ಯ ಹರೀಶ್ ಕೆ. ಸ್ಪರ್ಧಿಸಿದ್ದರು. ಲತಾ ಪರ ೧೩, ವಿರೋಧವಾಗಿ ೯ ಮತ ಮತ್ತು ಹರೀಶ್ ಪರ ೯, ವಿರೋಧವಾಗಿ ೧೩ ಮತ ವ್ಯಕ್ತವಾದವು.
ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಅನಿಲ್‌ಕುಮಾರ್ ಕರ್ತವ್ಯ ನಿರ್ವಹಿಸಿದರು. ಸಂಸದ ಈ.ತುಕಾರಾಂ, ಪುರಸಭೆ ಸದಸ್ಯರು ಮತ್ತಿತರರು ಅಭಿನಂದಿಸಿದರು.ಮೂಲ ಸೌಕರ್ಯ ಒದಗಿಸಲು ಶ್ರಮಿಸುವೆ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿರಾಜ್ ಹುಸೇನ್, ಉಪಾಧ್ಯಕ್ಷೆ ಲತಾ ಮಾತನಾಡಿ, ಜನತೆಗೆ ಶುದ್ಧ ಕುಡಿವ ನೀರು, ರಸ್ತೆ ಮುಂತಾದ ಅಗತ್ಯ ಮೂಲಸೌಕರ್ಯ ಒದಗಿಸಲು ಶ್ರಮಿಸುವೆವು ಎಂದರು.ಪುರಸಭೆ ಮುಖ್ಯಾಧಿಕಾರಿ ಕೆ. ಜಯಣ್ಣ ಮತ್ತಿತರರಿದ್ದರು.