ಭಗವಂತನ ಧ್ಯಾನದಿಂದ ಜೀವನ ಸಾರ್ಥಕ: ಶ್ರೀಗಳು

| Published : Aug 23 2024, 01:09 AM IST

ಸಾರಾಂಶ

ಸಮಯ ಎಂಬುದು ಪ್ರತಿ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಬದುಕಿದಷ್ಟು ಸಮಯಕ್ಕೆ ಅರ್ಥ ಸಿಗಬೇಕಿದ್ದರೆ ಭಗವಂತನ ಧ್ಯಾನ, ಪೂಜೆ, ಸಂಸ್ಕಾರ, ಸತ್ಸಂಗಗಳಲ್ಲಿ ತೊಡಗಬೇಕು. ಆ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕಾಗಿದೆ ಎಂದು ಗೋಣಿಬೀಡು ಶೀಲಸಂಪಾದನಾ ಮಠದ ಮಹಾತಪಸ್ವಿ ಸಿದ್ಧಲಿಂಗ ಮಹಾಸ್ವಾಮೀಜಿ ನ್ಯಾಮತಿಯಲ್ಲಿ ನುಡಿದಿದ್ದಾರೆ.

- ಚಿನ್ನಿಕಟ್ಟೆ ಶ್ರೀ ಗುರುರುದ್ರಸ್ವಾಮಿ ಕಲ್ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ನ್ಯಾಮತಿ

ಸಮಯ ಎಂಬುದು ಪ್ರತಿ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಬದುಕಿದಷ್ಟು ಸಮಯಕ್ಕೆ ಅರ್ಥ ಸಿಗಬೇಕಿದ್ದರೆ ಭಗವಂತನ ಧ್ಯಾನ, ಪೂಜೆ, ಸಂಸ್ಕಾರ, ಸತ್ಸಂಗಗಳಲ್ಲಿ ತೊಡಗಬೇಕು. ಆ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕಾಗಿದೆ ಎಂದು ಗೋಣಿಬೀಡು ಶೀಲಸಂಪಾದನಾ ಮಠದ ಮಹಾತಪಸ್ವಿ ಸಿದ್ಧಲಿಂಗ ಮಹಾಸ್ವಾಮೀಜಿ ನುಡಿದರು.

ತಾಲೂಕಿನ ಚಿನ್ನಿಕಟ್ಟೆ ಗ್ರಾಮದ ಶ್ರೀ ಗುರುರುದ್ರಸ್ವಾಮಿ ಕಲ್ಮಠದಲ್ಲಿ ಶ್ರಾವಣ ಸಂಭ್ರಮದ ಶ್ರೀ ಗುರುರುದ್ರಸ್ವಾಮಿ, ಅನ್ನದಾನಯ್ಯ ಕರ್ತೃಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಗಂಗಾಪೂಜೆ, ಮುತ್ತೈದೆಯರಿಗೆ ಬಾಗಿಣ ಅರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮನಸ್ಸಿನ ಮಡಿ ಆಗಬೇಕಾದರೆ ಭಗವಂತನ ಸೇವೆ, ಧ್ಯಾನ, ಪೂಜಾ ಕೈಂಕರ್ಯಗಳಲ್ಲಿ ಮೌನವಾಗಿ ಭಗವಂತನಲ್ಲಿ ತೊಡಗಿಸಿಕೊಂಡಲ್ಲಿ ಮಾತ್ರ ಅದರ ಸಂಪೂರ್ಣ ಫಲ ದೊರೆಯಲಿದೆ. ಕಷ್ಟ ಕಾರ್ಪಣ್ಯಗಳನ್ನು ಭಗವಂತನ ಬಳಿ ಭಿನ್ನಹಿಸಿಕೊಂಡರೆ ಮಾತ್ರ ಅದಕ್ಕೆ ಪರಿಹಾರ ದೊರೆಯುತ್ತದೆ ಎಂದರು.

ಮನುಷ್ಯನ ದೇಹದ ಬೆಲೆ ಆತನಿಗೆ ತಿಳಿಯಬೇಕಿದ್ದರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು, ಆಸ್ಪತ್ರೆಯಿಂದ ಹೊರಬರುವಾಗ ಆತನಿಗೆ ತನ್ನ ದೇಹಕ್ಕೆ ಇರುವ ಬೆಲೆ ತಿಳಿಯುತ್ತದೆ. ಹಾಗಾಗಿ, ಇದ್ದಷ್ಟು ದಿನ ಒಳ್ಳೆಯ ಆಹಾರ ಸೇವನೆ ಸೇರಿದಂತೆ ಉತ್ತಮ ಆಲೋಚನೆಗಳನ್ನು ಮಾಡಬೇಕು ಎಂದರು.

ಜಗತ್ತಿನ ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನದಂತಹ ಬೆಳವಣಿಗೆಯಲ್ಲಿ ಭಾರತದ ಕೊಡುಗೆ ಮೊದಲಾಗಿದ್ದು ಭಾರತವು ಜಗತ್ತಿನ ಮಾಹಿತಿ ತಂತ್ರಜ್ಞಾನದ ತಾಯಿ ಇದ್ದಂತೆ ಎಂದು ಮಹಾತಪಸ್ವಿ ಪರಮಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಗುರುರುದ್ರಸ್ವಾಮಿ ಕಲ್ಮಠದ ಗುರುಗಳಾದ ನಿರಂಜನ ಸ್ವಾಮೀಜಿ ವಹಿಸಿದ್ದರು. ಎ.ಜೆ.ಶಿವನಗೌಡ, ರವಿ ಮಾಸ್ಟರ್‌, ಎಚ್‌.ಎಂ. ಶಿವರಾಜ್‌, ಶಾರದ ಪರಮೇಶ್ವರಪ್ಪ, ಅಕ್ಕಮಹಾದೇವಿ, ಗೌರಿ ಗೀರೀಶ್‌, ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಚ್‌.ಎಂ. ಸದಾಶಿವಯ್ಯ, ಪ್ರದೀಪ್‌ ಎಂಜಿನಿಯರ್‌, ಶಿವಪ್ರಕಾಶ್‌, ಶಂಕರಯ್ಯ, ನವೀನ್‌, ಮೋಹನ್‌, ರಾಜಪ್ಪ, ವಿನಯ್‌, ರೇಣುಕಸ್ವಾಮಿ ಮತ್ತಿತರರಿದ್ದರು.

- - - (-ಫೋಟೋ:)

ಕಾರ್ಯಕ್ರಮದಲ್ಲಿ ಶ್ರೀಗಳನ್ನು ಗೌರವಿಸಲಾಯಿತು.