ಸಾರಾಂಶ
ಬಾಂಗ್ಲಾದಲ್ಲಿ ಹಿಂದೂಗಳ ನಡೆಯುತ್ತಿರುವ ದೌರ್ಜನ್ಯ ಅಂತಾರಾಷ್ಟ್ರೀಯ ಭಯೋತ್ಪಾದನೆ ಒಂದು ಭಾಗ. ಮಾನವೀಯತೆ ಮೀರಿದ ದೌರ್ಜನ್ಯಗಳು ಬಾಂಗ್ಲಾದಲ್ಲಿ ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಹಿಂದೂಗಳ ರಕ್ಷಣೆ ಮಾಡುತ್ತಿಲ್ಲ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ಸಂಘಟಿತ ಕೊಲೆ, ಅತ್ಯಾಚಾರ ಮತ್ತು ದೌರ್ಜನ್ಯಗಳನ್ನು ಹುಣಸೂರಿನ ದೇವನೂರು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸನಾತನ ಧರ್ಮರತ್ನಾಕರ ಡಾ.ಮಾದೇಶ್ ಗುರೂಜಿ ಖಂಡಿಸಿದರು.ತಾಲೂಕಿನ ಬೆಡದಹಳ್ಳಿ ಪಂಚಭೂತೇಶ್ವರ ಮಠದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಅಂತಾರಾಷ್ಟ್ರೀಯ ಸಮುದಾಯ ಧ್ವನಿಯತ್ತಬೇಕು. ಕೇಂದ್ರ ಸರ್ಕಾರ ಅಗತ್ಯ ರಾಜತಾಂತ್ರಿಕ ಕಾರ್ಯತಂತ್ರಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು.
ಬಾಂಗ್ಲಾದಲ್ಲಿ ಹಿಂದೂಗಳ ನಡೆಯುತ್ತಿರುವ ದೌರ್ಜನ್ಯ ಅಂತಾರಾಷ್ಟ್ರೀಯ ಭಯೋತ್ಪಾದನೆ ಒಂದು ಭಾಗ. ಮಾನವೀಯತೆ ಮೀರಿದ ದೌರ್ಜನ್ಯಗಳು ಬಾಂಗ್ಲಾದಲ್ಲಿ ನಡೆಯುತ್ತಿದ್ದರೂ ಅಲ್ಲಿನ ಸರ್ಕಾರ ಹಿಂದೂಗಳ ರಕ್ಷಣೆ ಮಾಡುತ್ತಿಲ್ಲ ಎಂದು ಕಿಡಿಕಾರಿದರು.ಹಿಂದೂಗಳಿಗೆ ಜಾಗತಿಕ ರಕ್ಷಣೆ ಬೇಕಾಗಿದೆ. ಭಾರತ, ಪಾಕಿಸ್ಥಾನ, ಬಾಂಗ್ಲಾ ದೇಶದ ಹಿಂದೂಗಳು ಆಯಾ ನೆಲದ ಮೂಲ ಧರ್ಮೀಯರು. ಅವರ ನೆಲದಲ್ಲಿಯೇ ಅವರ ಮೇಲೆ ದಬ್ಬಾಳಿಕೆ ನಡೆದರೆ ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಜಗತ್ತಿನ ಯಾವುದೇ ಭಾಗದಲ್ಲಿ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆದರೆ, ನಮ್ಮ ದೇವಾಲಯಗಳು ನಾಶಗೊಂಡರೆ ಮಠಾಧೀಶರು ಧ್ವನಿಯೆತ್ತಬೇಕು. ಆದರೆ, ನಮ್ಮ ಮಠಾಧೀಶರು ಮೌನವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.ದೇಶದಲ್ಲಿ ಹಿಂದೂ ಪರವಾದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಬಾಂಗ್ಲಾ ದೇಶದಲ್ಲಿನ ಹಿಂಸೆ ಮತ್ತು ದೌರ್ಜನ್ಯಗಳಿಂದ ನೊಂದು ಬದಕಲಾರದೆ ಆಶ್ರಯ ಅರಸಿ ಭಾರತಕ್ಕೆ ಬರುವ ಹಿಂದೂಗಳಿಗೆ ನಮ್ಮ ನೆಲದಲ್ಲಿ ಆಶ್ರಯ ನೀಡಬೇಕು. ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಕೆಂದ್ರ ಸರ್ಕಾರ ಮದ್ಯ ಪ್ರವೇಶ ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ಬೆಡದಹಳ್ಳಿ ಪಂಚಭೂತೇಶ್ವರ ಪೀಠದ ಪೀಠಾಧ್ಯಕ್ಷ ರುದ್ರಮುನಿ ಸ್ವಾಮೀಜಿ, ಮಳವಳ್ಳಿ ತಾಲೂಕು ಸಿದ್ದರಾಮೇಶ್ವರ ಪೀಠದ ಸಿದ್ದರಾಮೇಶ್ವರ ಶಿವಯೋಗಿ ಸ್ವಾಮೀಜಿಗಳು ಇದ್ದರು.