ಸಾರಾಂಶ
ಓರ್ವ ವಿದ್ಯಾರ್ಥಿ ಬಸ್‌ನಿಂದ ಬಿದ್ದು ಮೃತಪಟ್ಟಿದ್ದು ಇಂತಹ ಘಟನೆಗಳು ಮರುಕಳಿಸಬಾರದು. ಮೃತ ವಿದ್ಯಾರ್ಥಿಗೆ ಪರಿಹಾರ ಒದಗಿಸಿ, ಹೆಚ್ಚುವರಿ ಬಸ್ ಓಡಾಟ ಕಲ್ಪಿಸಬೇಕು ಎಂದು ಆಗ್ರಹಿಸಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳು ನಿಟ್ಟೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ಪಡುಬಿದ್ರಿ- ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಬಸ್‌ಗಳ ಸಂಖ್ಯೆ ಕಡಿಮೆಯಿದ್ದು, ವಿದ್ಯಾರ್ಥಿಗಳು ಬಸ್ ಬಾಗಿಲಿನಲ್ಲಿ ನೇತಾಡಿಕೊಂಡು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಬುಧವಾರ ಓರ್ವ ವಿದ್ಯಾರ್ಥಿ ಬಸ್‌ನಿಂದ ಬಿದ್ದು ಮೃತಪಟ್ಟಿದ್ದು ಇಂತಹ ಘಟನೆಗಳು ಮರುಕಳಿಸಬಾರದು. ಮೃತ ವಿದ್ಯಾರ್ಥಿಗೆ ಪರಿಹಾರ ಒದಗಿಸಿ, ಹೆಚ್ಚುವರಿ ಬಸ್ ಓಡಾಟ ಕಲ್ಪಿಸಬೇಕು ಎಂದು ಆಗ್ರಹಿಸಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳು ಗುರುವಾರ ನಿಟ್ಟೆ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.ಖಾಸಗಿ ಬಸ್‌ಗಳ ನಿರ್ಲಕ್ಷ್ಯತನ ಕೊನೆಯಾಗಬೇಕು. ತರಗತಿಗಳಿಗೆ ಸ್ವಲ್ಪ ತಡವಾದರೂ ವಿದ್ಯಾರ್ಥಿಗಳು ಹೊರಗೆ ನಿಲ್ಲುವ ಸ್ಥಿತಿಯಿದ್ದು, ಬಸ್ ಸಿಗದೆ ತಡವಾಗಿ ಬರುವ ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸಿಕೊಂಡು ಹಾಜರಾತಿಯನ್ನು ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.ಸರ್ಕಾರಿ ಬಸ್ ನೀಡಿ: ಪಡುಬಿದ್ರಿ- ಕಾರ್ಕಳ ರಸ್ತೆಯಲ್ಲಿ ಸರ್ಕಾರಿ ಬಸ್‌ಗಳಿಲ್ಲ, ಖಾಸಗಿ ಬಸ್‌ಗಳ ಮಾಲಕರ ಲಾಬಿಯಿಂದ ಸರ್ಕಾರಿ ಬಸ್‌ಗಳಿಗೆ ಓಡಾಟ ನಡೆಸಲು ಅನುಮತಿಸುತ್ತಿಲ್ಲ. ವಾರದೊಳಗೆ ಈ ಭಾಗದಲ್ಲಿ ಸರ್ಕಾರಿ ಬಸ್ ಓಡಾಡುವಂತೆ ಕ್ರಮ ಕೈಗೊಳ್ಳಬೇಕು. ಹಾಗೆಯೇ ಮೃತ ವಿದ್ಯಾರ್ಥಿ ಜನಿತ್ ಶೆಟ್ಟಿ ಅವರ ಕಾಲೇಜು ಫೀಸ್ ವಾಪಸ್ ನೀಡುವುದರ ಜತೆಯಲ್ಲಿ ಹೆಚ್ಚುವರಿ ಪರಿಹಾರ ಮೊತ್ತವನ್ನು ನೀಡಬೇಕು ಹಾಗೂ ಘಟನೆ ನಡೆದ ಬಸ್ ಮಾಲಕರು ಪರಿಹಾರವನ್ನು ನೀಡಬೇಕು ಎಂದು ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಬೇಡಿಕೆಯನ್ನಿಟ್ಟರು.* ತಹಸೀಲ್ದಾರ್ ಭೇಟಿ:ಪ್ರತಿಭಟನಾ ನಿರತ ಸ್ಥಳಕ್ಕೆ ಕಾರ್ಕಳ ತಹಸೀಲ್ದಾರ್ ಪ್ರತಿಭಾ ಆರ್. ಭೇಟಿ ನೀಡಿ, ವಿದ್ಯಾರ್ಥಿಯು ಸಾವನ್ನಪ್ಪಿರುವ ಬಗ್ಗೆ ಬೇಸರ ವ್ಯಕ್ತಪಡಿಸಿ ಬಸ್ ಸಿಬ್ಬಂದಿ ನಿರ್ಲಕ್ಷ್ಯತನವಾಗಿದ್ದರೆ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಸರ್ಕಾರಿ ಬಸ್‌ಗಳನ್ನು ಓಡಾಟಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಮೃತ ವಿದ್ಯಾರ್ಥಿಗೆ ದೊರಕಬಹುದಾದ ಪರಿಹಾರವನ್ನು ಒದಗಿಸುವಲ್ಲಿ ಪ್ರಯತ್ನ ಮಾಡುತ್ತೇವೆ ಎಂದರು.ಸಭೆಯಲ್ಲಿ ಎಬಿವಿಪಿ ವಿಭಾಗ ಸಂಚಾಲಕ ಗಣೇಶ್ ಪೂಜಾರಿ, ಉಡುಪಿ ತಾಲೂಕು ಸಂಚಾಲಕ ಶ್ರೇಯಸ್ ಅಂಚನ್, ತಾಲೂಕು ಸಂಚಾಲಕ ಪವನ್ ಕುಲಾಲ್, ಕಾರ್ಯಕರ್ತರಾದ ಮನು ಶೆಟ್ಟಿ, ಭಾವನಾ, ಶಿವಂ, ಮನೋಜ್, ಹೃಷಿತ್, ಮನೀಷ್, ಧನುಷ್, ಹೃತ್ವಿಕ್ ಹಾಗೂ ಸದಸ್ಯರು ಮತ್ತು ಎನ್.ಎಸ್.ಯು.ಐ ಸದಸ್ಯರು ಉಪಸ್ಥಿತರಿದ್ದರು.
ಘಟನಾ ಸ್ಥಳಕ್ಕೆ ಕಾರ್ಕಳ ಕಂದಾಯ ನಿರೀಕ್ಷಕ ಶಿವಪ್ರಸಾದ್ ರಾವ್, ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್., ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ದಿಲೀಪ್ ಜಿ.ಆರ್., ನಿಟ್ಟೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಯೋಗೀಶ್ ಹೆಗ್ಡೆ, ಸಾರಿಗೆ ಅಧಿಕರಿಗಳು ಭೇಟಿ ನೀಡಿದರು.