ಗಡಿನಾಡಿನಲ್ಲಿ ಖಾಸಾಮಠದಿಂದ ಕನ್ನಡ ಕೈಂಕರ್ಯ

| N/A | Published : Nov 06 2025, 02:15 AM IST / Updated: Nov 06 2025, 11:28 AM IST

Yadgiri Mutt

ಸಾರಾಂಶ

ಸ್ವಾತಂತ್ರ್ಯಪೂರ್ವ ನಿಜಾಂಶಾಹಿ ಕಾಲದಲ್ಲಿನ ಉರ್ದು ಪ್ರಾಬಲ್ಯದಲ್ಲೂ ಕನ್ನಡ ಭಾಷೆಯ ಅಳಿವು ಉಳಿವಿಗಾಗಿ ಶ್ರಮಿಸಿದ ಜಿಲ್ಲೆಯ ಗುರುಮಠಕಲ್‌ನ ಖಾಸಾಮಠ, ಗಡಿನಾಡಿನಲ್ಲಷ್ಟೇ ಅಲ್ಲ, ನೆರೆಯ ತೆಲಂಗಾಣದ ಗ್ರಾಮದಲ್ಲೂ ಇಂದಿಗೂ ಸಹ ಕನ್ನಡ ಭಾಷೆ  ಸಾರ ಪ್ರಸಾರ ಮಾಡುತ್ತಿದೆ

  ಯಾದಗಿರಿ :  ಸ್ವಾತಂತ್ರ್ಯಪೂರ್ವ ನಿಜಾಂಶಾಹಿ ಕಾಲದಲ್ಲಿನ ಉರ್ದು ಪ್ರಾಬಲ್ಯದಲ್ಲೂ ಕನ್ನಡ ಭಾಷೆಯ ಅಳಿವು ಉಳಿವಿಗಾಗಿ ಶ್ರಮಿಸಿದ ಜಿಲ್ಲೆಯ ಗುರುಮಠಕಲ್‌ನ ಖಾಸಾಮಠ, ಗಡಿನಾಡಿನಲ್ಲಷ್ಟೇ ಅಲ್ಲ, ನೆರೆಯ ತೆಲಂಗಾಣದ ಗ್ರಾಮದಲ್ಲೂ ಇಂದಿಗೂ ಸಹ ಕನ್ನಡ ಭಾಷೆಯಲ್ಲಿ ಬಸವಾದಿ ಶರಣರ ವಚನಗಳ ಸಾವಿರಾರು ಪುಸ್ತಕಗಳನ್ನು ಹಂಚುವ ಮೂಲಕ ಕನ್ನಡ ಭಾಷೆ ಪಸರಿಸುವ ಹಾಗೂ ವಚನಗಳ ಮೂಲಕ ಸಮಾನತೆಯ ಸಾರ ಪ್ರಸಾರ ಮಾಡುತ್ತಿದೆ.

ನಿಜಾಂ ಕಾಲಘಟ್ಟದಲ್ಲಿಯೇ ಕನ್ನಡಕ್ಕಾಗಿ ಕಟಿಬದ್ಧ

ನಿಜಾಂ ಕಾಲಘಟ್ಟದಲ್ಲಿಯೇ ಕನ್ನಡಕ್ಕಾಗಿ ಖಾಸಾಮಠದ ಶಾಂತವೀರ ಮಹಾಸ್ವಾಮಿಗಳು ಕಟಿಬದ್ಧರಾಗಿದ್ದರೆ, 25 ವರ್ಷಗಳ ಹಿಂದೆ ಶ್ರೀಮಠದ ಸಂಗಮೇಶ್ವರ ಸ್ವಾಮಿಗಳು ಬಸವೇಶ್ವರ ಶಿಕ್ಷಣ ಸಂಸ್ಥೆಯ ಮೂಲಕ ಗಡಿಭಾಗದಲ್ಲಿ ಕನ್ನಡ ಶಾಲೆ ಆರಂಭಿಸಿ, ಭಾಷೆಯ ಉಳಿವಿಗೆ ಶ್ರಮಿಸಿದವರು. ಕನ್ನಡ ಬಾರದ ತೆಲುಗು ಮಕ್ಕಳಿಗೆ ಕನ್ನಡ ಕಲಿಸಿ, ಕನ್ನಡದಲ್ಲೇ ಪಾಠ ಮಾಡಿದ ಜ್ಞಾನಾರ್ಜನೆ ಮಾಡಿಸಿದ ಕೀರ್ತಿ ಶ್ರೀಮಠಕ್ಕಿದೆ.

ಕನ್ನಡ ಭಾಷೆ ಕಟ್ಟುವ ಕೆಲಸ

ಖಾಸಾಮಠದ ಹಾಲಿ ಪೀಠಾಧಿಪತಿ ಶ್ರೀಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಅವರು ಕನ್ನಡ ಭಾಷೆ ಕಟ್ಟುವ ಕೆಲಸವನ್ನು ಮುಂದುವರಿಸಿದ್ದಾರೆ. "ಬಸವ ಪ್ರಸಾದ " ಹೆಸರಿನ ಬಸವಾದಿ ಶರಣರ ವಚನಗಳ ಸಂಗ್ರಹಗಳುಳ್ಳ ಪುಟ್ಟ ಪುಟ್ಟ ಪುಸ್ತಕಗಳನ್ನು ಇಲ್ಲಷ್ಟೇ ಅಲ್ಲ, ಅವರು ಕಾಲಿಟ್ಟಲೆಲ್ಲ ಹಂಚುವ ಕಾಯಕಕ್ಕಿಳಿದಿದ್ದಾರೆ. ಗಡಿಭಾಗ, ತೆಲಂಗಾಣದ ಬಾಲಂಪೇಟ್‌, ನಾರಾಯಣಪೇಟೆ, ಗುಂಡೇಪಲ್ಲಿ, ಕೌಸಲಪಲ್ಲಿ ಮುಂತಾದ ಭಾಗದಲ್ಲಿ ಕನ್ನಡ ಭಾಷೆಯಲ್ಲಿರುವ ಈ ವಚನ ಸಂಗ್ರಹಗಳ ಪುಸ್ತಕಗಳನ್ನು ನೀಡುತ್ತ, ಕನ್ನಡದಲ್ಲೇ ಅವುಗಳ ಸಾರ ಅರ್ಥ ಮಾಡಿಸುತ್ತಾರೆ. ಇದರಿಂದಾಗಿ ವಚನಗಳ ಬಗ್ಗೆ ಆಸಕ್ತಿಯಿಂದಾಗಿ ತೆಲುಗು ಭಾಷಿಕರೂ ಕನ್ನಡ ಕಲಿಕೆಗೆ ಮುಂದಾಗಿರುವುದು ವಿಶೇಷ.

Read more Articles on