ಕನ್ನಡಪ್ರಭ ವಾರ್ತೆ ನಾಗಮಂಗಲ

ಮಾತೃ ಹೃದಯ ಹೊಂದಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಸಾಧನೆಯಿಂದ ಆದಿಚುಂಚನಗಿರಿ ಮಠವು ವಿಶ್ವದ ಭೂಪಟದಲ್ಲಿ ಗುರುತಿಸುವಂತಾಗಿದೆ ಎಂದು ಮಲೆಮಹದೇಶ್ವರಬೆಟ್ಟ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನಸ್ವಾಮಿ ಶ್ಲಾಘನೆ ವ್ಯಕ್ತಪಡಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ನಡೆದ ವಿಜ್ಞಾತಂ ಉತ್ಸವ, ವಸ್ತು ಪ್ರದರ್ಶನದಲ್ಲಿ ಮಾತನಾಡಿದ ಅವರು, ಶತಮಾನಕ್ಕೊಬ್ಬ ಮಹಾಪುರುಷರನ್ನು ಕಂಡ ದೇಶ ನಮ್ಮದು.

ಮಾತೃ ಹೃದಯ ಹೊಂದಿದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳು ಬಡವ ಬಲ್ಲಿಗನನ್ನು ಕಂಡರೆ ಅವರನ್ನು ಸಂತೈಸುವ ಶ್ರೇಷ್ಠ ಗುಣ ಹೊಂದಿದ್ದರು ಎಂದರು.

ದೇಶದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ಮೂಲಕ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಠವು ವಿಶ್ವದ ಭೂಪಟದಲ್ಲಿ ಗುರುತಿಸುವಂತಾಗಿದೆ ಎಂದರೆ ಅದರ ಹಿಂದಿನ ಶ್ರೇಷ್ಠ ಕೈಂಕರ್ಯ ಭೈರವೈಕ್ಯಶ್ರೀಗಳದ್ದು. ಅಂತಹ ಮಹಾಪುರಷ ಸಂತರನ್ನು ಕಂಡಿರುವುದು ಶ್ರೀಮಠಕ್ಕೆ ಹೆಗ್ಗಳಿಕೆ. ನಾಡಿನ ಮಠಗಳಲ್ಲಿ ಅಗ್ರಸ್ಥಾನ ಪಡೆದಿರುವ ಪೀಠ ಎಂದರೆ ಅದು ಆದಿಚುಂಚನಗಿರಿ ಮಠ ಎಂದು ಬಣ್ಣಿಸಿದರು.


ಜ್ಞಾನ ಮತ್ತು ಧರ್ಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಇದನ್ನು ಮನಗಂಡ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ಎಲ್ಲಾ ಸಾಧ್ಯತೆಗಳನ್ನು ಅನಾವರಣಗೊಳಿಸಿದ್ದಾರೆ. ಆಧ್ಯಾತ್ಮ ಮತ್ತು ಧರ್ಮದ ಮೇರು ಪೀಠದ ಪರಂಪರೆಗೆ ಕಳಶಪ್ರಾಯರಾಗಿ ಕಂಗೊಳಿಸುತ್ತಿದ್ದಾರೆ ಎಂದರು.200ಕ್ಕೂ ಹೆಚ್ಚು ಮಳಿಗೆಗಳಲ್ಲಿ ಮಾದರಿ ಪ್ರದರ್ಶನ

ಆದಿಚುಂಚನಗಿರಿ ಮಠದ ಚುಂಚಾದ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಆದಿಚುಂಚನಗಿರಿ ವಿವಿಯ 11 ಅಂಗ ಸಂಸ್ಥೆಗಳು, 48 ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹೊರಗಿನ ವಿವಿಧ ಪ್ರತ್ಠಿತ ಕಾಲೇಜು ಹಾಗೂ ಸರ್ಕಾರಿ ಸಂಸ್ಥೆಗಳಾದ ಇಸ್ರೋ, ಎಚ್‌ಎಎಲ್, ಡಿಆರ್‌ಡಿಒ, ವಿಶ್ವೇಶ್ವರಯ್ಯ ಇಂಡಸ್ಟ್ರೀಯಲ್ ಅಂಡ್ ಟೆಕ್ನಾಲಜಿ ಮ್ಯೂಸಿಯಂ, ಆಧ್ಯಾತ್ಮಿಕ ಕೇಂದ್ರಗಳು ಪಾಲ್ಗೊಂಡು 200ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ವಿಚಾರಗಳ ಮಾದರಿಯನ್ನು ಪ್ರದರ್ಶಿಸಿದರು.