ಹೊಸ ವರ್ಷಾಚರಣೆ ಬಿಳಿಗಿರಿ ರಂಗನಬೆಟ್ಟದಲ್ಲಿ ಭಕ್ತ ಸಾಗರ

| Published : Jan 02 2025, 12:30 AM IST

ಸಾರಾಂಶ

ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಬುಧವಾರ ಹೊಸ ವರ್ಷ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ದೇವರ ದರ್ಶನ ಪಡೆದರು.

ಯಳಂದೂರು: ತಾಲೂಕಿನ ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟಕ್ಕೆ ಹೊಸ ವರ್ಷ ಪ್ರಯುಕ್ತ ಬುಧವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರಲ್ಲದೇ ಪ್ರಕೃತಿ ಸೌಂದರ್ಯವನ್ನು ಸವಿದರು.ಪ್ರಸಿದ್ಧ ಬಿಳಿಗಿರಿ ರಂಗನಬೆಟ್ಟದಲ್ಲಿ ನೂತನ ವರ್ಷ ಆಗಮನವನ್ನು ಸ್ವಾಗತಿಸಲು ಬುಧವಾರ ಬೆಳಗ್ಗೆಯಿಂದ ಬಹುತೇಕ ಪ್ರವಾಸಿಗರು ದೂರದ ಊರುಗಳಾದ ಮೈಸೂರು, ಬೆಂಗಳೂರು, ಮಂಡ್ಯ ಸೇರಿದಮತೆ ಇತರೆ ಕಡೆಗಳಿಂದ ಬೆಟ್ಟಕ್ಕೆ ಸಾವಿರಾರು ಜನರು ಆಗಮಿಸಿದ್ದರು. ಇದರಿಂದ ಬೆಟ್ಟದ ರಥದ ಬೀದಿ ಹಾಗೂ ದೇವಸ್ಥಾನದ ಪಾದದ ಸಮೀಪ ವಾಹನಗಳು ಹೆಚ್ಚಾಗಿ ಕಂಡುಬಂದವು. ಅಲ್ಲದೆ ದೇವಸ್ಥಾನದಲ್ಲಿಯೂ ಸಹ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು.

ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ಜನರು ನಂತರ ದೇವಸ್ಥಾನದ ಹಿಂಭಾಗವಿರುವ ಕಮರಿಯಲ್ಲಿ ಪ್ರಕೃತಿ ಸೌಂದರ್ಯವನ್ನು ಸವಿದರು. ಜೊತೆಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ನಂತರ ಕೆ.ಗುಡಿಗೂ ಪ್ರವಾಸಿಗರು ತೆರಳಿ ಪ್ರಕೃತಿ ಸೌಂದರ್ಯ ವೀಕ್ಷಿಸಿದರು. ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಹೋಗುವ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮುಂಜಾಗ್ರತೆ ವ್ಯವಸ್ಥೆ ಕಲ್ಪಿಸಿದ್ದರಿಂದ ಜನರಿಗೆ ತೆರಳಲು ಯಾವುದೇ ತೊಂದರೆಯಾಗಲಿಲ್ಲ. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ:

ಹೊಸ ವರ್ಷದ ಪ್ರಯುಕ್ತ ಪಟ್ಟಣದ ಗೌರೇಶ್ವರ ದೇವಸ್ಥಾನ, ಲಕ್ಷ್ಮೀ ವರಹಸ್ವಾಮಿ ದೇವಸ್ಥಾನ, ಗೋಡೆ ಗಣಪತಿ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ಸುವರ್ಣ ತಿರುಮಲ ಹಾಗೂ ತಾಲೂಕಿನ ಕಂದಹಳ್ಳಿ ಮಹದೇಶ್ವರ ದೇವಸ್ಥಾನ, ಮದ್ದೂರಿನ ಎಳೆ ಪಿಳ್ಳಾರಿ ದೇವಸ್ಥಾನ ಸೇರಿದಂತೆ ಇತರೆ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಯಿತು.