ಸಾರಾಂಶ
ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉಳವಿ ಜಾತ್ರೆ ಪ್ರಾರಂಭವಾಗಿದ್ದು ವಿವಿಧ ಜಿಲ್ಲೆಗಳಿಂದ ಜನ ಸಾಗರವೇ ಜಾತ್ರೆಯತ್ತ ಬರುತ್ತಿದೆ.
ಜೋಯಿಡಾ:
ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉಳವಿ ಜಾತ್ರೆ ಪ್ರಾರಂಭವಾಗಿದ್ದು ವಿವಿಧ ಜಿಲ್ಲೆಗಳಿಂದ ಜನ ಸಾಗರವೇ ಜಾತ್ರೆಯತ್ತ ಬರುತ್ತಿದೆ. ರಥ ಸಪ್ತಮಿಯ ಶುಭ ಮುಹೂರ್ತದಲ್ಲಿ ಜಾತ್ರೆಗೆ ಟ್ರಸ್ಟ್ ಕಮಿಟಿ ಅಧ್ಯಕ್ಷ ಗಂಗಾಧರ ಕಿತ್ತೂರ ಚಾಲನೆ ನೀಡಿದ್ದು ರಥೋತ್ಸವ ಫೆ. 24ರಂದು ಮಧ್ಯಾಹ್ನ 4ಕ್ಕೆ ನಡೆಯಲಿದೆ.ರಥೋತ್ಸವಕ್ಕೆ 4 ದಿನಗಳ ಮೊದಲೇ ಒಂದು ಸಾವಿರಕ್ಕೂ ಹೆಚ್ಚು ಚಕ್ಕಡಿಗಳು ಬಂದಿದ್ದು ಉಳವಿಯ ರಥ ಬೀದಿ ಈಗಾಗಲೆ ಜನರಿಂದ ತುಂಬಿದೆ. 3ರಿಂದ 4 ಲಕ್ಷ ಜನರು ಬರಬಹುದು ಎಂದು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕುಡಿಯುವ ನೀರು:ಉಳವಿಯಲ್ಲಿ ಕಳೆದ 2 ವರ್ಷಗಳಿಂದ ಜಲಜೀವನ್ ಕೆಲಸ ನಡೆಯುತ್ತಿದ್ದು ಪೂರ್ತಿಯಾಗಿಲ್ಲ. ಇದರಿಂದ ನೀರಿನ ಸಮಸ್ಯೆ ಸರಿಯಾಗಿಲ್ಲ ಎಂದು ಜಾತ್ರೆಗೆ ಬಂದ ಭಕ್ತರು ಹೇಳುತ್ತಿದ್ದಾರೆ. ನೀರಿನ ಸಮಸ್ಯೆಗೆ ಗ್ರಾಮ ಪಂಚಾಯಿತಿ ಸಾಕಷ್ಟು ವ್ಯವಸ್ಥೆ ಮಾಡಿಕೊಂಡಿದೆ. ಆದರೆ ಜನರ ಜತೆಗೆ 2ರಿಂದ 3 ಸಾವಿರ ಎತ್ತುಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ. ಈ ವ್ಯವಸ್ಥೆ ಮಾಡದಿದ್ದರೆ ಸಾರ್ವಜನಿಕರು ಉಗ್ರರಾಗುವ ಸಾಧ್ಯತೆಗಳಿವೆ. ಲಕ್ಷಾಂತರ ಜನರು ಹಾಗೂ ಜಾನುವಾರುಗಳಿಗೆ ಒಂದು ವಾರಕ್ಕೆ ಆಗುವಷ್ಟು ನೀರು ಬೇಕು. ಜಲಜೀವನ್ ಕಾಮಗಾರಿ ಮುಗಿದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.ಲಕ್ಷಾಂತರ ಜನರ ಸಮಸ್ಯೆಗಳಿಗೆ ಇಲ್ಲಿನ ಸಿಪಿಐ ಚಂದ್ರಶೇಕರ ಹರಿಹರ ಮತ್ತು ಪಿಎಸ್ಐ ಮಹೇಶ ಮಾಳಿ ತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಉಳವಿ ಜಾತ್ರೆಗೆ ಅರಣ್ಯ ಇಲಾಖೆಯ ನೂರಾರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಅಲ್ಲಲ್ಲಿ ಕುಡಿಯುವ ನೀರನ್ನು ಭಕ್ತರಿಗೆ ನೀಡುತ್ತಿದ್ದು ಪ್ರವಾಸಿಗರು ಅರಣ್ಯದಲ್ಲಿ ಅಕ್ರಮ ಪ್ರವೇಶಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿಗಳೊಂದಿಗೆ ಚಕ್ಕಡಿ ಗಾಡಿ ಕಟ್ಟಿತಂದ ಸಾವಿರಾರು ಎತ್ತುಗಳ ಆರೋಗ್ಯ ನೋಡಿಕೊಳ್ಳುತ್ತಿದೆ. ಪ್ಲಾಸ್ಟಿಕ್ ಮುಕ್ತ ಜಾತ್ರೆ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿ ಬಯಲು ಮಲ ವಿಸರ್ಜನೆ ಆಗದಂತೆ ಶೌಚಾಲಯ ನಿರ್ಮಿಸಲಾಗಿದೆ. ಜಾತ್ರೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ವಿದ್ಯುತ್ , ಕುಡಿಯುವ ನೀರು, ಭಕ್ತರ ವಸತಿ ಬಗ್ಗೆ ಗಮನಿಸಿದ್ದೇವೆ. ಈ ವರ್ಷ ವಾರಗಳ ಮೊದಲೇ ಭಕ್ತರು ಭಾರಿ ಪ್ರಮಾಣದಲ್ಲಿ ಬರುತ್ತಿದ್ದಾರೆ. ಎಲ್ಲರ ಸಹಕಾರದೊಂದಿಗೆ ಜಾತ್ರೆ ಮಾಡುತ್ತೇವೆ ಎಂದು ಉಳವಿ ಗ್ರಾಪಂ ಅಧ್ಯಕ್ಷ ಮಂಜುನಾಥ ಮೊಕಾಶಿ ತಿಳಿಸಿದರು.