ಭಕ್ತಿ ಮಾರ್ಗ, ಗುರು ಕಾರುಣ್ಯದಿಂದ ಬದುಕು ಹಸನ

| Published : May 24 2025, 12:23 AM IST

ಸಾರಾಂಶ

ಪ್ರತಿಯೊಬ್ಬರು ಗುರು-ಭಕ್ತಿಯ ಪರಂಪರೆ ಮುಂದುವರಿಸಿಕೊಂಡು ಹೋದಾಗ ಬದುಕು ಸಾರ್ಥಕಗೊಳ್ಳುತ್ತದೆ. ಶಂಭುಲಿಂಗಾರೂಢರು ತಮ್ಮ ಜೀವತಾವಧಿಯಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿದ್ದಾರೆ. ಅವರು ಹಾಕಿಕೊಟ್ಟ ಭಕ್ತಿ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಬೇಕಿದೆ.

ಕುಕನೂರು:

ಭಕ್ತಿ ಮಾರ್ಗದಿಂದ ನಡೆದು ಗುರು ಕಾರುಣ್ಯ ಪಡೆದರೆ ಅದುವೇ ಹಸನಾದ ಬದುಕು ಎಂದು ಚಿಕೇನಕೊಪ್ಪದ ಶ್ರೀಶಂಭುಲಿಂಗಾರೂಢ ಆಶ್ರಮದ ಪೀಠಾಧಿಪತಿ ಅನ್ನದಾನ ಭಾರತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಶಂಭುಲಿಂಗಾರೂಢ ಸ್ವಾಮೀಜಿಗಳ ೯೦ನೇ ವರ್ಷದ ಪುಣ್ಯಾರಾಧನೆ, ಜಾತ್ರಾ ಮಹೋತ್ಸವ ಪ್ರಯುಕ್ತ ಜರುಗಿದ ವೇದಾಂತ ಚಿಂತನಾ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶಂಭುಲಿಂಗಾರೂಢರ ಆಶ್ರಮಕ್ಕೆ ತನ್ನದೇ ಆದ ಇತಿಹಾಸವಿದೆ. ಪ್ರತಿಯೊಬ್ಬರು ಗುರು-ಭಕ್ತಿಯ ಪರಂಪರೆ ಮುಂದುವರಿಸಿಕೊಂಡು ಹೋದಾಗ ಬದುಕು ಸಾರ್ಥಕಗೊಳ್ಳುತ್ತದೆ. ಶಂಭುಲಿಂಗಾರೂಢರು ತಮ್ಮ ಜೀವತಾವಧಿಯಲ್ಲಿ ಸಮಾಜಮುಖಿ ಕಾರ್ಯ ಕೈಗೊಂಡಿದ್ದಾರೆ. ಅವರು ಹಾಕಿಕೊಟ್ಟ ಭಕ್ತಿ ಮಾರ್ಗದಲ್ಲಿ ಪ್ರತಿಯೊಬ್ಬರು ಸಾಗಬೇಕಿದೆ. ಮೌನತಪಸ್ವಿ ಶ್ರೀಚೆನ್ನವೀರ ಶರಣರು ಅಧ್ಯಾತ್ಮ, ಭಕ್ತಿ ಲೋಕದಲ್ಲಿ ಅಪಾರ ಸಾಧನೆ ಮಾಡಿದ ಮಹನೀಯರಾಗಿದ್ದಾರೆ. ಸಾಧು, ಸಂತರ, ಶಿವಶರಣರ ಬೀಡು ಚಿಕೇನಕೊಪ್ಪ ಆಗಿದೆ ಎಂದರು.

ವೇದಮೂರ್ತಿ ಶಿವಕುಮಾರಯ್ಯ ಹಿರೇಮಠ, ದದೇಗಲ್ಲಿನ ಶ್ರೀಆತ್ಮಾನಂದ ಭಾರತಿ ಸ್ವಾಮೀಜಿ, ಸಂಭಾಪುರದ ಮಾತೋಶ್ರೀ ರುದ್ರಮ್ಮ ತಾಯಿ, ಶಂಕರಾನಂದ, ರಾಜನಹಳ್ಳಿ ಮಂಜುನಾಥ ಮಠದ ತೋಟಯ್ಯಸ್ವಾಮಿ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಗುತ್ತಿಗೆದಾರ ವೀರಪ್ಪ ಬಿಸನಳ್ಳಿ, ಪಿಕಾರ್ಡ್‌ ಬ್ಯಾಂಕ್ ಉಪಾಧ್ಯಕ್ಷ ಭೀಮರಡ್ಡಿ ಶ್ಯಾಡ್ಲಗೇರಿ, ಬಸವಲಿಂಗಪ್ಪ ವಕ್ಕಳದ, ಮಹೇಂದ್ರಕುಮಾರ ಗದಗ, ವಿಜಯಲಕ್ಷ್ಮೀ ಮಂಗಳೂರು, ಲಲಿತಾ ಅಡಗಿಮನಿ, ಚಿದಾನಂದ ಮ್ಯಾಗಳಮನಿ, ಈಶಪ್ಪ ವಕ್ಕಳದ, ಶ್ರೀಕಾಂತ ಅಂಕಲಿ, ಶರಣಪ್ಪ ಗೂಳರಡ್ಡಿ, ಹನುಮರಡ್ಡಿ ವಕ್ಕಳದ, ಹನುಮಪ್ಪ ದೊಡ್ಡಮನಿ, ಕನಕಪ್ಪ ಚಲವಾದಿ, ಪತ್ರಕರ್ತ ಮಲ್ಲು ಮಾಟರಂಗಿ ಇದ್ದರು.ಅದ್ಧೂರಿ ಲಘು ರಥೋತ್ಸವ....

ಚಿಕೇನಕೊಪ್ಪದ ಶ್ರೀಶಂಭುಲಿಂಗಾರೂಢರ ಪುಣ್ಯಾರಾಧನೆ ನಿಮಿತ್ತ ಸೋಮವಾರ ಸಂಜೆ ಗ್ರಾಮದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲಿ ಲಘು ರಥೋತ್ಸವ ಜರುಗಿತು. ಜಿಲ್ಲೆಯ ವಿವಿಧಡೆಯಿಂದ ಆಗಮಿಸಿದ ಭಕ್ತರು ರಥೋತ್ಸವಕ್ಕೆ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸರ್ಮಪಿಸಿದರು. ಸೋಮವಾರ ರಾತ್ರಿ ಸಂತ ಶಿಶುನಾಳ ಶರೀಫ ಶಿವಯೋಗಿಗಳ ಭಕ್ತಿ ಪ್ರಧಾನ ನಾಟಕ ಜರುಗಿತು. ಇದೇ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.