ಹುಲಿದೇವರವಾಡಾ ನಿವಾಸಿಗಳಿಗೆ ಭಾನಾಮತಿ ಕಾಟ

| Published : Jun 21 2024, 01:02 AM IST

ಸಾರಾಂಶ

ರಾತ್ರಿ 10.30ರಿಂದ 12 ಗಂಟೆಯ ತನಕ ಇಲ್ಲಿನ ವ್ಯಕ್ತಿಯೊಬ್ಬರ ಮನೆಯ ಮುಂದಿನ ಬಾವಿಯ ಎದುರಿನ ಗೇಟ್ ಬಳಿ ಝಲ್‌ ಝಲ್ ಸದ್ದು ಕೇಳಿ ಬರುತ್ತಿದೆ. ಈ ಸದ್ದು ಗ್ರಾಮದ ಎಲ್ಲ ಜನರ ಕಿವಿಗೆ ಬೀಳುತ್ತಿದೆ. ಹೀಗಾಗಿ ಇಲ್ಲಿನ ಜನರು ಭಯಭೀತರಾಗಿ ನಿದ್ದೆ ಬಿಟ್ಟಿದ್ದಾರೆ.

ರಾಘು ಕಾಕರಮಠ

ಅಂಕೋಲಾ: ರಾತ್ರಿ 10.30 ಗಂಟೆಯಾದರೆ ಮನೆಯಿಂದ ಹೊರಬೀಳಲು ಹೆದರುತ್ತಿರುವ ಜನ. ಊರಿನ ಮುಂದಿನ ಬಾವಿಯ ಸಮೀಪ ಕೇಳಿಬರುವ ಗೆಜ್ಜೆಯ ಝಲ್‌ ಝಲ್‌ ಸದ್ದು ಈ ಗ್ರಾಮಸ್ಥರ ನಿದ್ದೆಯನ್ನೆ ನುಂಗಿದೆ. ಇಂಥ ಕುತೂಹಲಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗಿ ಭಾನಾಮತಿ ಕಾಟಕ್ಕೆ ಒಳಗಾಗಿರುವುದು ಪಟ್ಟಣ ಸಮೀಪದ ಹುಲಿದೇವರವಾಡಾದ ಗಣಪತಿ ದೇವಸ್ಥಾನದ ಬಾಬಿಮನೆಯ ಪ್ರದೇಶ.

ಪಟ್ಟಣದಿಂದ ಕೇವಲ 2 ಕಿಮೀ ಅಂತರದಲ್ಲಿ ಹುಲಿದೇವರವಾಡಾ ಗ್ರಾಮವಿದೆ. ಇಲ್ಲಿ ಹೆಚ್ಚಾಗಿ ದಲಿತ ಹಾಗೂ ಮುಸ್ಲಿಮರು ವಾಸಿಸುತ್ತಾರೆ. ಇಲ್ಲಿಯ ಜನ ಸುಶಿಕ್ಷಿತರು. ಇಷ್ಟು ದಿನ ಊರಲ್ಲಿ ಯಾವುದೇ ತೊಂದರೆ ಇಲ್ಲದೆ ನೆಮ್ಮದಿಯಿಂದ ಜೀವನ ಕಟ್ಟಿಕೊಂಡಿದ್ದರು. ಆದರೆ ಕಳೆದ 20 ದಿನಗಳಿಂದ ನಿದ್ದೆ ಬಿಟ್ಟಿದ್ದಾರೆ. ರಾತ್ರಿ 10.30ರಿಂದ 12 ಗಂಟೆಯ ತನಕ ಇಲ್ಲಿನ ವ್ಯಕ್ತಿಯೊಬ್ಬರ ಮನೆಯ ಮುಂದಿನ ಬಾವಿಯ ಎದುರಿನ ಗೇಟ್ ಬಳಿ ಝಲ್‌ ಝಲ್ ಸದ್ದು ಕೇಳಿ ಬರುತ್ತಿದೆ. ಈ ಸದ್ದು ಗ್ರಾಮದ ಎಲ್ಲ ಜನರ ಕಿವಿಗೆ ಬೀಳುತ್ತಿದೆ. ಹೀಗಾಗಿ ಇಲ್ಲಿನ ಜನರು ಭಯಭೀತರಾಗಿ ನಿದ್ದೆ ಬಿಟ್ಟಿದ್ದಾರೆ.

40 ವರ್ಷದ ನಂತರ ತೆರೆದ ಬಾವಿ: ಹುಲಿದೇವರವಾಡಾದ ಮನೆಯೊಂದರ ಬಲಬದಿಯಲ್ಲಿ ಬಾವಿ ಇತ್ತು. ಆದರೆ ಕಳೆದ 40 ವರ್ಷಗಳಿಂದ ಈ ಬಾವಿಯನ್ನು ಉಪಯೋಗಿಸುತ್ತಿರಲಿಲ್ಲ. ಕಳೆದ 25 ದಿನದ ಹಿಂದೆ ಈ ಬಾವಿಯನ್ನು ಸ್ವಚ್ಛ ಮಾಡಿ, ಹೋಮ ಹಾಕಿ ಉಪಯೋಗಿಸಲು ಪ್ರಾರಂಭಿಸಿದರಂತೆ. ಅಂದಿನಿಂದ ಬಾವಿಯ ಸಮೀಪದಿಂದ ಗೆಜ್ಜೆಯ ಸದ್ದು ಕೇಳಿ ಬರುತ್ತಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಪಡುತ್ತಾರೆ. ಗುರುವಾರ ಇಲ್ಲಿನ ಜನತೆ ಈ ಘಟನೆಗೆ ಅಸಹನೆ ವ್ಯಕ್ತಪಡಿಸಿ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಮರುದ್ದೀನ ಶೇಖ, ಪುರಸಭೆಯ ಸದಸ್ಯ ಶಬ್ಬೀರ ಶೇಖ, ವಿನಾಯಕ ಹೆಗಡೆಕರ, ನಯನಾ ಕಡವಾಡಕರ, ರಾಹುಲ್ ಕಡವಾಡಕರ, ಶಾಂತಿ ಆಗೇರ, ಮಮತಾಜ್ ಶೇಖ, ರಿಯಾನಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಅಸಹಾಯಕರಾದ ಪೊಲೀಸರು: ಇಲ್ಲಿ ಗೆಜ್ಜೆ ಸದ್ದು ಕೇಳಿ ಬರುತ್ತಿದೆ. ದಯವಿಟ್ಟು ಬೇಗ ಬನ್ನಿ ಎಂದು 112 ಮೂಲಕ ಪೊಲೀಸ್ ಸಹಾಯವಾಣಿಗೆ ಇಲ್ಲಿನ ಜನರು ಕರೆ ಮಾಡಿದ್ದರಂತೆ. ಕೂಡಲೆ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿಗೆ ಈ ಬಾನಾಮತಿ ಕಾಟದ ಬಗ್ಗೆ ಗ್ರಾಮಸ್ಥರು ವಿವರಿಸಿದ್ದಾರೆ. ಆದರೆ ನೀವೆನಾದ್ರೂ ಮನುಷ್ಯರಿಂದ ತೊಂದರೆ ಆದಲ್ಲಿ ಹೇಳಿ, ಈ ಭಾನಾಮತಿಯನ್ನು ನಾವು ಎಲ್ಲಿಂದ ಹಿಡಿದುಕೊಂಡು ಹೋಗೋದು ಎಂದು ಅಸಹಾಯಕರಾಗಿ ಮುಗುಳುನಗುತ್ತಲೆ ಜೀಪ್‌ನ್ನೇರಿ ಹೊರಟು ಹೋಗಿದ್ದಾರೆ. ಯಾವಾಗ ಮುಕ್ತಿ? : ಒಂದೆರಡು ಜನಕ್ಕೆ ಗೆಜ್ಜೆ ಶಬ್ದ ಕೇಳಿ ಬಂದಲ್ಲಿ ಅದನ್ನು ಮೂಢನಂಬಿಕೆ ಅಂತಾ ಹೇಳಬಹುದಿತ್ತು. ಆದರೆ ಈ ಗೆಜ್ಜೆಯ ಶಬ್ದವನ್ನು 100ಕ್ಕೂ ಹೆಚ್ಚು ಜನ ಕಳೆದ 20 ದಿನಗಳಿಂದ ಕೇಳುತ್ತಿದ್ದಾರೆ. ನಾವೆಲ್ಲ ರಾತ್ರಿ 10.30 ಗಂಟೆಯ ಒಳಗೆ ಮನೆ ಸೇರಿಕೊಳ್ಳುತ್ತಿದ್ದೇವೆ. ಈ ಭಾನಾಮತಿಯ ಕಾಟಕ್ಕೆ ಮುಕ್ತಿ ಯಾವಾಗ ಎಂದು ಚಿಂತಿತರಾಗಿದ್ದೇವೆ ಎಂದು ಪುರಸಭೆ ಸದಸ್ಯ ಶಬ್ಬೀರ್ ಶೇಖ ತಿಳಿಸಿದರು.