ಸಾರಾಂಶ
ಮೈಸೂರು : ‘ಟಿಪ್ಪು ಸುಲ್ತಾನ್ ಆಡಳಿತದ ಅವಧಿಯಲ್ಲಿಯೂ ಮೈಸೂರಿನಲ್ಲಿ ದಸರಾ ಆಚರಿಸಲಾಗಿದೆ. ಇದೊಂದು ನಾಡಹಬ್ಬವಾದ್ದರಿಂದ ಎಲ್ಲಾ ಧರ್ಮದವರೂ ಇದರಲ್ಲಿ ಪಾಲ್ಗೊಳ್ಳಬಹುದು. ಸಾಹಿತಿ ಬಾನು ಮುಷ್ತಾಕ್ ಅವರೇ ದಸರಾ ಉದ್ಘಾಟಿಸುತ್ತಿದ್ದಾರೆ. ಈ ವಿಷಯದಲ್ಲಿ ಬೇರೆ ನಿಲುವೇ ಇಲ್ಲ. ಇದು ನಾನೇ ಮಾಡಿದ ಆಯ್ಕೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಾನು ಆಯ್ಕೆಗೆ ಕೇಳಿಬಂದಿರುವ ವಿರೋಧಕ್ಕೆ ಮೊದಲ ಬಾರಿ ಪ್ರತಿಕ್ರಿಯಿಸಿದರು.
‘ದಸರಾ ಆಚರಣೆ ಸಂಬಂಧ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನನಗೆ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರ ಕೊಟ್ಟಿದ್ದರು. ಕನ್ನಡಕ್ಕೆ ಮೊದಲ ಬುಕರ್ ಪ್ರಶಸ್ತಿ ಬಂದಿದೆ. ಇದನ್ನು ಬಾನು ಮುಷ್ತಾಕ್ ತಂದುಕೊಟ್ಟಿದ್ದಾರೆ. ಆದ್ದರಿಂದ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ಕೊಡಬೇಕು ಎಂದು ಹೇಳಿದ್ದೆ. ನಿಸಾರ್ ಅಹಮದ್ ಅವರಿಗೆ ಈ ಹಿಂದೆ ಅವಕಾಶ ನೀಡಲಾಗಿತ್ತು. ಇದೊಂದು ಸಾಂಸ್ಕೃತಿಕ ಹಬ್ಬ. ನಾಡಹಬ್ಬವನ್ನು ಇಂಥದ್ದೇ ಧರ್ಮದವರು ಉದ್ಘಾಟಿಸಬೇಕು ಎಂಬುದಿಲ್ಲ. ನಾಡಹಬ್ಬ ಎಂದರೆ ಅದು ಎಲ್ಲರಿಗೂ ಹಬ್ಬ. ಹಿಂದು, ಮುಸ್ಲಿಂ, ಕೈಸ್ತ, ಬೌದ್ಧರು...ಎಲ್ಲರೂ ಸೇರಿ ಆಚರಿಸುವ ಹಬ್ಬವಿದು’ ಎಂದರು.
‘ಮಹಾರಾಜರು ಇಲ್ಲದಿರುವಾಗ ದಸರಾವನ್ನು ಟಿಪ್ಪು ಆಚರಿಸಿದ್ದ ಉದಾಹರಣೆ ಇದೆ. ಬಳಿಕ, ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿರಲಿಲ್ಲವೇ? ಅವರು ದಸರಾದಲ್ಲಿ ಪಾಲ್ಗೊಂಡಿರಲಿಲ್ಲವೇ? ಆದ್ದರಿಂದ ಇದೊಂದು ಧರ್ಮಾತೀತ, ಜಾತ್ಯತೀತ ಹಬ್ಬ. ಈ ಹಬ್ಬಕ್ಕೆ ಬುಕರ್ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಯಾರೋ ಧರ್ಮಾಂಧರು ಮಾತನಾಡುತ್ತಾರೆ ಎಂದು ನಮ್ಮ ನಿಲುವನ್ನು ಬದಲಿಸಲು ಸಾಧ್ಯವಿಲ್ಲ. ಅವರಿಗೆ ಇತಿಹಾಸವೇ ಗೊತ್ತಿಲ್ಲ ಬಿಡಿ’ ಎಂದರು.
‘ಬಿಜೆಪಿಯವರು ರಾಜಕೀಯವಾಗಿ ಮಾತನಾಡುತ್ತಾರೆ. ಜನ ಸಾಹಿತ್ಯವನ್ನು ಮುಷ್ತಾಕ್ ಅವರು ಕನ್ನಡ ಭಾಷೆಯಲ್ಲಿ ಬರೆದಿಲ್ಲವೇ? ಕನ್ನಡದ ಬಗ್ಗೆ ಅವರಿಗೆ ಪ್ರೀತಿ, ಗೌರವ ಇಲ್ಲದಿದ್ದರೆ ಬರೆಯಲು ಸಾಧ್ಯವೇ? ಬಿಜೆಪಿಯವರು ಏನೋ ಕುಂಟು ನೆಪ ಹುಡುಕುತ್ತಿದ್ದಾರೆ. ಇದು ನಾಡಹಬ್ಬ, ಈ ವಿಷಯದಲ್ಲಿ ನಾನು ಸ್ಪಷ್ಟವಾಗಿದ್ದೇನೆ. ಎಲ್ಲಾ ಧರ್ಮದವರೂ ಸೇರಿ ಈ ಹಬ್ಬ ಆಚರಿಸುವಂಥದ್ದು. ಆದ್ದರಿಂದ ಈ ಆಯ್ಕೆ ಕೂಡ ಸೂಕ್ತವಾಗಿದೆ. ದನದ ಮಾಂಸ, ಹಂದಿ ಮಾಂಸ ಎಂದೆಲ್ಲಾ ಮಾತನಾಡುವವರು ಡೋಂಗಿಗಳು. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಕಿಲ್ಲ’ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
‘ಬಾನು ಕನ್ನಡ ಪುಸ್ತಕವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಅವರ ಜತೆಗೇ ಬುಕರ್ ಪಡೆದ ದೀಪಾ ಭಾಸ್ತಿ ಅವರಿಗೂ ಪ್ರಶಸ್ತಿ ಬಂದ ನಂತರ ಸರ್ಕಾರದಿಂದ 10 ಲಕ್ಷ ರೂ.ಕೊಟ್ಟು, ಗೌರವ ಸಲ್ಲಿಸಲಾಗಿದೆ. ಬಿಜೆಪಿಯವರು ಎಲ್ಲದರಲ್ಲೂ ರಾಜಕೀಯ ಮಾಡುತ್ತಿದ್ದಾರೆ’ ಎಂದು ಅವರು ಕಿಡಿಕಾರಿದರು.
- ಕನ್ನಡಕ್ಕೆ ಮೊದಲ ಬುಕರ್ ತಂದುಕೊಟ್ಟವರು ಮುಷ್ತಾಕ್
- ದಸರಾ ಸರ್ವಧರ್ಮೀಯರ ಸಾಂಸ್ಕೃತಿಕ ನಾಡಹಬ್ಬ
- ಧರ್ಮಾಂಧರ ಮಾತು ಕೇಳಿ ನಿಲುವು ಬದಲಿಸಲು ಸಾಧ್ಯವಿಲ್ಲ
- ವಿವಾದದ ಬಗ್ಗೆ ಮೊದಲ ಬಾರಿ ಸಿಎಂ ಸಿದ್ದು ಸ್ಪಷ್ಟನೆ