ಸಾರ್ವಜನಿಕವಾಗಿ ಅವಮಾನಗೊಂಡು ಸ್ವಯಂ ನಿವೃತ್ತಿಗೆ ಭರಮನಿ ನಿರ್ಧಾರ!

| Published : Jul 03 2025, 11:48 PM IST

ಸಾರ್ವಜನಿಕವಾಗಿ ಅವಮಾನಗೊಂಡು ಸ್ವಯಂ ನಿವೃತ್ತಿಗೆ ಭರಮನಿ ನಿರ್ಧಾರ!
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರು ಕಳೆದ ಜೂನ್‌ 12ರಂದು ಗೃಹ ಇಲಾಖೆಗೆ ಬರೆದಿರುವ ಸ್ವಯಂ ನಿವೃತ್ತಿ ಪತ್ರ. ಈ ಪತ್ರ ತಡವಾಗಿ ವೈರಲ್‌ ಆಗಿದ್ದು, ಪತ್ರದಲ್ಲಿ ತಮಗಾಗಿರುವ ಅವಮಾನದ ಬಗ್ಗೆ ಭರಮನಿ ಅವರು ಎಳೆಎಳೆಯಾಗಿ ಬರೆದಿದ್ದಾರೆ. ಈ ಪತ್ರದ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದ್ದು, ಅದರ ಸಾರಾಂಶ ಹೀಗಿದೆ.

ಧಾರವಾಡ: ಸಾರ್ವಜನಿಕ ವೇದಿಕೆ ಮೇಲೆ ಮುಖ್ಯಮಂತ್ರಿಗಳ ವರ್ತನೆಯಿಂದ ನಾನು ಮಾಡದೇ ಇರುವ ತಪ್ಪಿಗೆ ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಿ ಅವಮಾನಗೊಂಡ ನಾನು, ಅನ್ಯ ಮಾರ್ಗವಿಲ್ಲದೇ ಸ್ವಯಂ ನಿವೃತ್ತಿ ಸಲ್ಲಿಸುತ್ತಿದ್ದೇನೆ!

ಇದು ಧಾರವಾಡದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ ಅವರು ಕಳೆದ ಜೂನ್‌ 12ರಂದು ಗೃಹ ಇಲಾಖೆಗೆ ಬರೆದಿರುವ ಸ್ವಯಂ ನಿವೃತ್ತಿ ಪತ್ರ. ಈ ಪತ್ರ ತಡವಾಗಿ ವೈರಲ್‌ ಆಗಿದ್ದು, ಪತ್ರದಲ್ಲಿ ತಮಗಾಗಿರುವ ಅವಮಾನದ ಬಗ್ಗೆ ಭರಮನಿ ಅವರು ಎಳೆಎಳೆಯಾಗಿ ಬರೆದಿದ್ದಾರೆ. ಈ ಪತ್ರದ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದ್ದು, ಅದರ ಸಾರಾಂಶ ಹೀಗಿದೆ.....

2025ರ ಏಪ್ರಿಲ್‌ 28ರಂದು ಬೆಳಗಾವಿಯಲ್ಲಿ ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ತಮಗಾದ ಅವಮಾನದಿಂದಲೇ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿರುವೆ ಎಂದಿರುವ ಭರಮನಿ, ಅವತ್ತು ನಾನು ಕಪಾಳ ಮೋಕ್ಷದಿಂದ ತಪ್ಪಿಸಿಕೊಂಡಿರಬಹುದು. ಆದರೆ, ಸಾರ್ವಜನಿಕವಾಗಿ ಆದ ಅವಮಾನದಿಂದಲ್ಲ. ಇಲಾಖೆ ಗೌರವದಿಂದ ಹಾಗೂ ಮುಖ್ಯಮಂತ್ರಿಗಳ ಗೌರವಕ್ಕೆ ಧಕ್ಕೆ ಬರದಿರಲಿ ಎಂದು ಮರು ಮಾತನಾಡದೇ ವೇದಿಕೆಯಿಂದ ಇಳಿದು ಬಂದೆ. ಘಟನೆಯಿಂದ ಮನಸ್ಸಿಗೆ ಆಘಾತವಾಗಿ, ಯಾರಲ್ಲೂ ಏನನ್ನೂ ಪ್ರಸ್ತಾಪಿಸದೇ ಮನೆಗೆ ಹೋದೆನು. ಮನೆಯಲ್ಲೂ ಸ್ಮಶಾನ ಮೌನ. ನನ್ನನ್ನು ನೋಡಿದ ಮಡದಿ ಮತ್ತು ಮಕ್ಕಳ ದುಃಖ ಕಟ್ಟೆಯೊಡೆದು ಬೋರ್ಗರೆಯಿತು. ಇಡೀ ದಿನ ಮೌನವೇ ಮಾತಾಯಿತು. ಇದರಿಂದ ನಾನು ನನ್ನ ಕುಟುಂಬ ಮನೋವ್ಯಾಕುಲತೆಗೆ ಒಳಗಾಗಿತ್ತು ಎಂದು ಭರಮನಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಇಷ್ಟಾಗಿಯೂ ಮುಖ್ಯಮಂತ್ರಿಗಳಾಗಲಿ, ಸರ್ಕಾರ ಮಟ್ಟದ ಅಧಿಕಾರಿಗಳಾಗಲಿ ಅಥವಾ ನೆಚ್ಚಿನ ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ ಸಾಂತ್ವಾನಿಸುವ ಪ್ರಯತ್ನ ಮಾಡಲಿಲ್ಲ. ಬೇಸರ ಎಂದರೆ ನನ್ನ ಸಹೋದ್ಯೋಗಿಗಳು ಕೂಡಾ ನನಗಾದ ಅವಮಾನವನ್ನು ಪ್ರತಿಭಟಿಸಿ ನೈತಿಕ ಬೆಂಬಲ ವ್ಯಕ್ತಪಡಿಸಲಿಲ್ಲ. ಇದು ಮತ್ತಷ್ಟು ಮಾನಸಿಕ ವೇದನೆಗೆ ಕಾರಣವಾಯಿತು. ಇಷ್ಟಾಗಿಯೂ ಸೇವೆಗೆ ಹಾಜರಾದಾಗ, ನಿತ್ಯ ಸಮವಸ್ತ್ರ ಧರಿಸುವಾಗ ಯಾರದೋ ತಪ್ಪಿಗೆ ನನ್ನ ದಂಡಿಸಿದರಲ್ಲಾ ಎಂದು ಆ ಘಟನೆ ಸದಾ ಕಾಡುತ್ತಿತ್ತು. ರಾಜ್ಯದ ಮುಖ್ಯಮಂತ್ರಿ ನನ್ನನ್ನು ಸಾರ್ವಜನಿಕವಾಗಿ ನಿಂದಿಸಿ, ಅವಮಾನಿಸಿ, ಸಾಂತ್ವಾನ ಸಹ ಹೇಳದಿರುವುದರಿಂದ ಮತ್ತಷ್ಟು ವಿಚಲಿತಗೊಂಡೆನು. ನನ್ನಷ್ಟಕ್ಕೆ ನಾನು ನ್ಯಾಯ ಪಡೆದುಕೊಳ್ಳಲು ಆಗದವನು ಪರರಿಗೆ ನ್ಯಾಯ ಕೊಡಿಸಲಾದೀತೇ? ಎಂಬ ಕೊರಗು ನನಲ್ಲಿ ಕಾಡತೊಡಗಿತು.

ತಮ್ಮೆಲ್ಲಾ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಅವಮಾನ ಸಹಿಸುತ್ತಾ, ಸರ್ಕಾರದ ಹಿತಾಸಕ್ತಿಗೆ ಟೊಂಕಕಟ್ಟಿ ನಿಂತು ಸೇವೆ ಸಲ್ಲಿಸುತ್ತಿರುವ ಸರ್ಕಾರಿ ನೌಕರರಿಗೆ ಆತ್ಮಸ್ಥೈರ್ಯ ತುಂಬಬೇಕಾದ ಮುಖ್ಯಮಂತ್ರಿಗಳ ವರ್ತನೆಯು ನನ್ನ ಮತ್ತು ರಾಜ್ಯದ ಇತರ ಸರ್ಕಾರಿ ನೌಕರರ ಆತ್ಮಸ್ಥೈರ್ಯ ಕುಂದಿಸಿದೆ. ಹೀಗಾಗಿ ಮನನೊಂದು ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸುತ್ತೇನೆ ಎಂದು ಭರಮನಿ ಪತ್ರದಲ್ಲಿ ಹೇಳಿಕೊಂಡಿದ್ದಾರೆ.