ಸಾರಾಂಶ
ಹಳಿಯಾಳ: ಲೋಕಸಭೆಯ ಚುನಾವಣೆಯಿಂದ ಕಾಂಗ್ರೆಸ್ಸಿಗೆ ಹೊಸ ಶಕ್ತಿ, ಚೈತನ್ಯ ಬಂದಿದೆ. ಕಾಂಗ್ರೆಸ್ ಗಮನಾರ್ಹ ಸಾಧನೆಗೆ ನಾಯಕರಾದ ರಾಹುಲ್ ಗಾಂಧಿಯವರು ಕೈಗೊಂಡ ಭಾರತ ಜೋಡೋ ಯಾತ್ರೆ ಮೂಲ ಕಾರಣ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಕಾಂಗ್ರೆಸ್ ಬಲ ಹೆಚ್ಚಾಗಿದೆ. ರಾಹುಲ್ ಗಾಂಧಿಯವರು ಕೈಗೊಂಡ ಭಾರತ ಜೋಡೋ ಯಾತ್ರೆಯು ಐತಿಹಾಸಿಕವಾಗಿದೆ. ದೇಶದ ಸಾಮಾನ್ಯ ಜನರನ್ನು ಭೇಟಿಯಾಗಿ ಅವರೊಂದಿಗೆ ಬೆರೆತು ಸಮಸ್ಯೆಗಳನ್ನು ಅರಿಯಲು, ಕಾಂಗ್ರೆಸ್ ಉದ್ದೇಶಗಳನ್ನು ಜನರಿಗೆ ನೇರವಾಗಿ ತಿಳಿಸುವಲ್ಲಿ ಭಾರತ ಜೋಡೋ ಯಾತ್ರೆಯು ಸಹಕಾರಿಯಾಯಿತು ಎಂದರು.400 ಪಾರ್ ಮ್ಯಾಜಿಕ್ ನಡೆಯಲಿಲ್ಲ: ಚುನಾವಣಾ ಸಮಯದಲ್ಲಿ ಎನ್‌ಡಿಎ ಒಕ್ಕೂಟದ ಮುಖಂಡರು ಹಾಗೂ ದೇಶದ ಕೆಲವು ಮಾಧ್ಯಮಗಳು ಅಬ್ ಕಿ ಬಾರ್ 400 ಪಾರ್ ಎಂಬ ಘೋಷಣೆಗಳನ್ನು ಹಾಕಿ, ಎನ್‌ಡಿಎ ಒಕ್ಕೂಟ ಬಲಾಬಲವು 400 ದಾಟಲಿದೆ ಎಂದು ಪ್ರಚಾರ ಮಾಡಿ, ಮತದಾರರಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿದ್ದರು. ಆದರೆ ಮತದಾರರು ಇವರ ಗೊಂದಲಗಳಿಗೆ ಕಿವಿಗೊಡದೇ ಜವಾಬ್ದಾರಿಯಿಂದ ಮತವನ್ನು ಚಲಾಯಿಸಿ ಪ್ರಜಾಪ್ರಭುತ್ವದ ಹಿರಿಮೆಯನ್ನು ಮೆರೆದಿದ್ದಾರೆ ಎಂದರು.
ಉತ್ತರ ಕನ್ನಡ ಕ್ಷೇತ್ರದಲ್ಲಿ ಸೋಲು- ಗೆಲುವಿನ ಅಂತರ ನೋಡಿ ಆಶ್ಚರ್ಯವಾಗಿದೆ. ಈ ಅಂತರವನ್ನು ನೋಡಿ ಗೊಂದಲದಲ್ಲಿದ್ದೇನೆ. ಕ್ಷೇತ್ರದ ಮತದಾರರು ನೀಡಿದ ತೀರ್ಪನ್ನು ಒಪ್ಪುತ್ತೇನೆ. ಕಾಂಗ್ರೆಸ್‌ನ ಡಾ. ಅಂಜಲಿ ನಿಂಬಾಳ್ಕರ್ ಅವರು ಅತ್ಯುತ್ತಮ ಅಭ್ಯರ್ಥಿಯಾಗಿದ್ದರು. ಕ್ಷೇತ್ರದೆಲ್ಲೆಡೆ ಪ್ರಚಾರ ಮಾಡಿದ್ದರು. ಫಲಿತಾಂಶದಿಂದ ಡಾ. ಅಂಜಲಿಯವರು ನಿರಾಶರಾಗಬಾರದು. ಸೋಲು- ಗೆಲುವು ಸಹಜ. ಜನರ ತೀರ್ಪನ್ನು ಸ್ವೀಕರಿಸಬೇಕು ಎಂದರು.ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ: ನೂತನ ಸಂಸದ ಕಾಗೇರಿಯವರನ್ನು ಅಭಿನಂದಿಸಿದ ಅವರು, ಈ ಹಿಂದಿನ ಸಂಸದರು ಕೇಂದ್ರ ಸರ್ಕಾರದ ಯೋಜನೆಗಳನ್ನು ಕ್ಷೇತ್ರಕ್ಕೆ ತರುವಲ್ಲಿ ಹಾಗೂ ಇಲ್ಲಿನ ಸಮಸ್ಯೆಗಳನ್ನು ಸಂಸತ್‌ನಲ್ಲಿ ಪ್ರಸ್ತಾಪಿಸುವಲ್ಲಿ ವಿಫಲರಾಗಿದ್ದರು. ಅಂತಹ ಪರಿಸ್ಥಿತಿಯು ಮತ್ತೆ ಮರುಕಳಿಸದಂತೆ ಕಾಗೇರಿಯವರು ಎಚ್ಚರ ವಹಿಸಬೇಕು. ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರದ ಮೇಲೆ ಒತ್ತಡ ಹಾಕಿ ಜನಪರ ಯೋಜನೆಗಳನ್ನು ಮಂಜೂರು ಮಾಡಿ ತರಲಿ. ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಅವರಿಗೆ ಬೇಕಾದ ಸಂಪೂರ್ಣ ಸಹಕಾರವನ್ನು ನೀಡಲಿದ್ದೇನೆ ಎಂದರು.ಸಮೀಕ್ಷೆ ಮಾಡಿದವರ ಮೇಲೆ ಕಾನೂನು ಕ್ರಮವಾಗಲಿ
ಪ್ರಜಾಪ್ರಭುತ್ವದ ಸಿದ್ಧಾತಗಳಿಗೆ ಮಾರಕವಾದ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿದ ದೇಶದ ಎಲ್ಲ ಮಾಧ್ಯಮದವರ ಮೇಲೆ ಚುನಾವಣಾ ಆಯೋಗವು ಕ್ರಮ ಕೈಗೊಳ್ಳಬೇಕೆಂದು ದೇಶಪಾಂಡೆ ಆಗ್ರಹಿಸಿದರು.ಚುನಾವಣೋತ್ತರ ಸಮೀಕ್ಷೆಯಲ್ಲಿ ಪ್ರಕಟಗೊಂಡ ಅಂಕಿ- ಅಂಶಗಳಿಗೂ ಈಗ ಪ್ರಕಟಗೊಂಡ ಫಲಿತಾಂಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈ ಸಮೀಕ್ಷೆಯಿಂದ ರಾಜಕೀಯ ಪಕ್ಷಗಳಲ್ಲಿ ಹಾಗೂ ಮತದಾರರಲ್ಲಿಯೂ ಗೊಂದಲ ನಿರ್ಮಾಣವಾಯಿತು. ಇಂತಹ ಸಮೀಕ್ಷೆಯಿಂದ ಪ್ರಜಾಪ್ರಭುತ್ವಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಈ ಸಮೀಕ್ಷೆಗಳನ್ನು ಯಾರು ಮಾಡಿದ್ದಾರೆ ಅಥವಾ ಯಾರು ಮಾಡಿಸಿದ್ದಾರೆ ಎಂಬ ಪ್ರಶ್ನೆಯು ಉದ್ಭವವಾಗಿದೆ. ಅದಕ್ಕಾಗಿ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿದ ಮಾಧ್ಯಮ ಸಂಸ್ಥೆ ಮೇಲೆಯೂ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದರು.